ADVERTISEMENT

ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರು

​ಪ್ರಜಾವಾಣಿ ವಾರ್ತೆ
Published 19 ಮೇ 2017, 6:05 IST
Last Updated 19 ಮೇ 2017, 6:05 IST
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ಗುರುವಾರ ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗುವ ಮೊದಲು ಹಾವೇರಿಯ ಡಿಪೊ ಮುಂಭಾಗದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದರು
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ಗುರುವಾರ ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗುವ ಮೊದಲು ಹಾವೇರಿಯ ಡಿಪೊ ಮುಂಭಾಗದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದರು   

ಹಾವೇರಿ: ‘ಕಾಂಟ್ರ್ಯಾಕ್ಟರ್ ಕ್ಯಾರೇಜ್’ ಪರವಾನಗಿ ಪಡೆದು ‘ಸ್ಟೇಜ್ ಕ್ಯಾರೇಜ್‘ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ಗುರುವಾರ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ಜಿಲ್ಲೆಯಲ್ಲಿ ಕೆಲವು ಖಾಸಗಿ ವಾಹನಗಳು ಕಾಂಟ್ರ್ಯಾಕ್ಟ್ ಕ್ಯಾರೇಜ್ ಪರವಾನಗಿ ಪಡೆದು ಸ್ಟೇಜ್ ಕ್ಯಾರೇಜ್‌ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅವುಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಿಬ್ಬಂದಿ ಘೋಷಣೆ ಕೂಗಿ ಆಗ್ರಹಿಸಿದರು. 

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿನ ಕಾರ್ಮಿಕರ ಸಂಘಟನೆಯ ಮುಖಂಡ ವಿ.ಬಿ.ಕುಲಕರ್ಣಿ ಮಾತನಾಡಿ, ‘ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವ ಇತರ ಯಾವುದೇ ಖಾಸಗಿ ವಾಹನಗಳ ನಿಲುಗಡೆಗೆ ಜಿಲ್ಲಾಡಳಿತ ನಿಷೇಧ ಹೇರಿದೆ. ಆದರೆ, ಜಿಲ್ಲೆಯ ಕೆಲವು ಖಾಸಗಿ ವಾಹನ ಮಾಲೀಕರು ಇಲ್ಲೇ ನಿಲುಗಡೆ ನೀಡುತ್ತಿದ್ದಾರೆ. ಅಲ್ಲದೇ,  ‘ಕಾಂಟ್ರ್ಯಾಕ್ಟ್ ಕ್ಯಾರೇಜ್’ ಪರವಾನಗಿ ಪಡೆದುಕೊಂಡು ಬಸ್ ನಿಲ್ದಾಣದ ಬದಿಯಲ್ಲೇ ಜನ ಹತ್ತಿಸಿಕೊಳ್ಳುತ್ತಿದ್ದಾರೆ. ‘ಸ್ಟೇಜ್ ಕ್ಯಾರೇಜ್‌’ ರೀತಿಯಲ್ಲಿ ವಿವಿಧೆಡೆ ನಿಲುಗಡೆ ನೀಡುವ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ. ಖಾಸಗಿ ವಾಹನಗಳ ಕಾನೂನು ಬಾಹಿರ ಕ್ರಮದಿಂದ, ಕಾನೂನು ಪ್ರಕಾರ ಕಾರ್ಯನಿರ್ವಹಿಸುತ್ತಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಅದಕ್ಕಾಗಿ ಇಂತಹ ಖಾಸಗಿ ವಾಹನಗಳ ಮಾಲೀಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

ಕಾರ್ಮಿಕ ಮುಖಂಡ ಮಲ್ಲಿಕಾರ್ಜುನ ಹಿಂಚಿಗೇರಿ ಮಾತನಾಡಿ, ‘ಪ್ರಮುಖ ಬಸ್‌ ನಿಲ್ದಾಣಗಳ ಸುತ್ತಲು ನಿಲ್ಲುವ ವಾಹನಗಳಾದ ಖಾಸಗಿ ಬಸ್‌, ಮ್ಯಾಕ್ಸಿ ಕ್ಯಾಬ್‌, ಟೆಂಪೋ, ಕಟಮಾಗಳು ಅನಧಿಕೃತವಾಗಿ ಪ್ರಯಾಣಿಕರನ್ನು ಕರೆದೊಯ್ಯುತ್ತಿವೆ. ಈ ಬಗ್ಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ, ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ತಹಶೀಲ್ದಾರ್‌ಗೆ ಮನವಿ ನೀಡಿದ್ದಾರೆ. ಆದರೆ, ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದ ರಿಂದ, ಸಿಬ್ಬಂದಿ ಕರ್ತವ್ಯಕ್ಕೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದರು.

ಕಾರ್ಮಿಕ ಮುಖಂಡ ಗಣೇಶ ಇಟಗಿ ಮಾತನಾಡಿ, ‘ಜಿಲ್ಲೆಯಲ್ಲಿ ಸುಮಾರು 2,425ಕ್ಕೂ ಹೆಚ್ಚು ಖಾಸಗಿ ವಾಹನಗಳ ಮಾಲೀಕರು ‘ಕಾಂಟ್ರ್ಯಾಕ್ಟ್ ಕ್ಯಾರೇಜ್’ ಪರವಾನಗಿ ಪಡೆದಿದ್ದಾರೆ. ಆದರೆ, ‘ಸ್ಟೇಜ್ ಕ್ಯಾರೇಜ್‌’ ರೀತಿಯಲ್ಲಿ ಸಂಚರಿಸುತ್ತಾರೆ. ಇದು ಜಿಲ್ಲಾಡಳಿತ ಆದೇಶದ ಉಲ್ಲಂಘನೆಯಾಗಿದೆ. ಇದರಿಂದ ಪ್ರಯಾಣಿಕರಿಗೆ ರಕ್ಷಣೆ ಇಲ್ಲದಾಗಿದೆ’ ಎಂದರು. 

ವೀರಭದ್ರಪ್ಪ ಅರ್ಕಾಚಾರಿ. ಆರ್.ಎಸ್.ಕಾಶೀಗೌಡ್ರ, ಎಂ.ಎಸ್.ಪವಾರ, ಜೆ.ಎಂ.ವಿವೇಕಾನಂದ, ಜಿ.ಬಿ.ಅಡರಕಟ್ಟಿ, ರಮೇಶ ಚಿಣಗಿ, ರವೀಂದ್ರ, ವಿಜಯ, ಗಣೇಶ, ಶಿವಕುಮಾರ ಜಕ್ಕಣ್ಣನವರ, ಎನ್.ಎಸ್.ಕಾಶೀಕರ, ಗಿರೀಶ, ಬಸವರಾಜ ಸವಣೂರ, ಮಹೇಶ, ಡಿ.ಮಂಜುನಾಥ, ಆರ್.ಎಚ್.ಕುಂಕುಮಗಾರ, ಎಂ.ಎಂ.ಮಡಿವಾಳರ, ಮಂಜುನಾಥ ಗೊಂದಳಿ, ವಿರೇಶ ಅಣ್ಣಿಗೇರಿ, ನಾಗರಾಜ ಮೆಣಸಿನಕಾಯಿ, ಮಂಜುನಾಥ ಅಂಗಡಿ, ಜೆ.ರಾಜಶೇಖರ, ಎಂ.ಕೆ.
ಹಳ್ಳಿಗೇರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.