ADVERTISEMENT

ಕೊಬ್ಬರಿ ಹೋರಿ ಅಬ್ಬರ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 6:53 IST
Last Updated 25 ಅಕ್ಟೋಬರ್ 2014, 6:53 IST

ಹಾವೇರಿ: ಹೊಯ್‌...ಹೊಯ್‌ ಗೇಟ್‌ ತೆಗೇರ್ರೀ... ಬಿಡ್ರಿ... ಆಹ್ಹಾಂ ನೋಡಿ ಹಾವೇರಿ ರಾಜಾ... ಹಿಡ್ರೀ... ನೋಡಿ ಹೋರಿ ಹಿಡ್ದಾರಾ... ಕಾಳಾ ಓಡ್ಯಾನಾ... ಹೋರಿ ಹಾದಿ ಹಿಡೀತು, ನೋಡ್ರೀ... ಮತ್ತೆ ಗೇಟ್‌ ತೆಗೇರ್ರೀ... ಒಂದೊಂದೇ ಬಿಡ್ರೀ...ಜೋಡಿ ಐತಾ...

–ದೀಪಾವಳಿಯ ಬಲಿಪಾಡ್ಯದ ದಿನ ಬಿರುಬಿಸಿಲಿನಲ್ಲೂ ನಿರರ್ಗಳವಾಗಿ ಕಮೆಂಟರಿ. ರೈತರಲ್ಲಿ ತಮ್ಮ ನೆಚ್ಚಿನ ಹೋರಿಯ ಶಕ್ತಿ ಮತ್ತು ಗತ್ತಿನ ಬಗ್ಗೆ ಆವೇಶವಾದರೆ, ಹೋರಿ ಹಿಡಿಯುವ ಯುವಕರಿಗೆ ತಮ್ಮ ಶೌರ್ಯದ ಹೆಮ್ಮೆ. ಒಟ್ಟಾರೆ ಊರಿಗೆ ಊರೇ ಸಾಹಸ ಸ್ಪರ್ಧೆಯ ಸಂಭ್ರಮದಲ್ಲಿ ತಲ್ಲೀನ. ಶುಕ್ರವಾರ ಜಿಲ್ಲೆಯ ವಿವಿಧೆಡೆ ಕಂಡು ಬಂದ ಕೊಬ್ಬರಿ ಹೋರಿ ಸಂಭ್ರಮ.

ಸುಮಾರು ಮೂರಡಿಯಿಂದ ಆರಡಿ ಅಡಿ ಎತ್ತರದ, ನೋಟದಲ್ಲೇ ಗಾಂಭೀರ್ಯ, ಹೊಳಪು ಮೈಬಣ್ಣ, ಮೊನಚಾದ ಕೊಂಬುಗಳ, ಚಂಗನೆ ನೆಗೆದು ಓಡುವ ನಾಗರಹಾವು, ದೇವ, ಮದಕರಿ, ಸುದೀಪ್‌, ದರ್ಶನ್‌ ತರಹೇವಾರಿ ಹೆಸರಿನ ಹೋರಿಗಳನ್ನು ಹಿಡಿಯುವುದನ್ನು ನೋಡಲು ಬೀದಿ ಸುತ್ತ ಜನಸಾಗರ.

ಹೋರಿ ಕೊಂಬಿಗೆ ಬಲೂನು, ಜೋಲಾ, ಗೆಜ್ಜೆ ಮತ್ತಿತರ ಅಲಂಕಾರಗಳನ್ನು ಕಟ್ಟಿ ಸಿಂಗರಿಸ ಲಾಗಿತ್ತು. ಬೆನ್ನಿಗೆ   ಬಟ್ಟೆ ಹೊದಿಸಲಾಗಿತ್ತು. ಕೊಂಬು ಹಾಗೂ ಕುತ್ತಿಗೆಗೆ ಕೊಬ್ಬರಿ ಹಾರ ಹಾಕಿದ್ದರು. ಕೆಲವು ಹೋರಿಗೆ ಬಣ್ಣ ಬಳಿದರೆ, ಇನ್ನೂ ಕೆಲ ಹೋರಿಗಳ ಮುಖ ಸಿಂಗಾರ ಮಾಡಲಾಗಿತ್ತು. ನೋಟ–ನಿಲುವಿನಲ್ಲೇ ಜನರ ಸೆಳೆಯುತ್ತಿತ್ತು.

ಈ ಹೋರಿಗಳನ್ನು ಬೀದಿಯ ಒಂದು ಭಾಗದಲ್ಲಿ ನಿರ್ಮಿಸಿದ ಗೇಟಿನ ಮೂಲಕ ಒಂದೊಂದಾಗಿ ಬಿಟ್ಟರು. ಹಗ್ಗ, ಬಾರ್ಕೋಲು, ಚಾಟಿಯ ಪೆಟ ಬಿದ್ದಾಗ ಕಿವಿಗೆ ಗಾಳಿ ಹೊಕ್ಕಂತೆ ಹೋರಿಗಳು ಓಟಕ್ಕಿತ್ತವು. ಹಾಗೆ ಓಡುವ ಹೋರಿಯ ಕೊಂಬು ಹಾಗೂ ಕತ್ತಿನ ಸರದಲ್ಲಿರುವ ಕೊಬ್ಬರಿಯನ್ನು ತೆಗೆಯುವುದೇ ವೈಶಿಷ್ಟ್ಯ. ತಮ್ಮ ಹೋರಿಯನ್ನು ಯಾರೂ ತಡೆಯಬಾರದು ಎಂಬ ನಿಟ್ಟಿನಲ್ಲಿ ಹೋರಿಯ ರೈತ ಓಡಿಸುತ್ತಿದ್ದರೆ, ನೆರೆದವರು ಸುತ್ತು ಹಾಕಿ ಹೋರಿಯನ್ನು ಹಿಡಿಯಲು ಯತ್ನಿಸುತ್ತಿ ದ್ದರು. ಈ ಅಬ್ಬರದಲ್ಲಿ ಕೆಲವರು ಹೋರಿ ಕಾಲಿಗೆ, ದೇಹಕ್ಕೆ ತಗುಲಿ ಎಸೆಯಲ್ಪಟ್ಟರು. ಎದ್ದು ಸಾವರಿಸಿ ಕೊಂಡ ಬಳಿಕ ಮತ್ತೊಂದು ಹೋರಿಯನ್ನು ಹಿಡಿಯಲು ಮುಂದಾಗುತ್ತಿದ್ದರು. 

ತಾಲ್ಲೂಕಿನ ಸೂಲಮಟ್ಟಿ, ವೀರಭದ್ರೇಶ್ವರ ಗುಡಿ, ದೇವಗಿರಿ ಸೇರಿದಂತೆ ವಿವಿಧೆಡೆ ಬೆಳಿಗ್ಗೆಯಿಂದಲೇ ಕೊಬ್ಬರಿ ಹೋರಿಯ ಸಂಭ್ರಮ ಎಲ್ಲೆಡೆ ತುಂಬಿತ್ತು. ದೇವಗಿರಿಯಲ್ಲಿ ಈ ಬಾರಿ ನೂರಾರು ಹೋರಿಗಳು ಪಾಲ್ಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.