ADVERTISEMENT

‘ಗನ್’ ಮ್ಯಾನ್ ‘ಪೆನ್’ ಪ್ರೀತಿ

ಹರ್ಷವರ್ಧನ ಪಿ.ಆರ್.
Published 14 ಮೇ 2017, 9:22 IST
Last Updated 14 ಮೇ 2017, 9:22 IST

 ಹಾವೇರಿ: ‘ರವಿ ಕಾಣದನ್ನು ಕವಿ ಕಂಡ’ ಎಂಬುದು ಕವಿಗಳ ಉಕ್ತಿ. ‘ರವಿ ಮತ್ತು ಕವಿ ಕಾಣದನ್ನು ಪೊಲೀಸ್ ಕಾಣುತ್ತಾನೆ’ ಎನ್ನುವುದು ಪೊಲೀಸ್ ಸೇವೆಯಲ್ಲಿರುವ ಸಾಹಿತಿಗಳ ನುಡಿ. ಇದು ಪೊಲೀಸರ ಒತ್ತಡದ ಬದುಕಿಗೆ ಹಿಡಿದ ಕೈಗನ್ನಡಿ. ಇಂತಹ ಕರ್ತವ್ಯದ ನಡುವೆಯೂ ಕಲೆ ಹಾಗೂ ಸಾಹಿತ್ಯದ ಪ್ರೀತಿ ಮುಂದುವರಿಸಿಕೊಂಡು ಬಂದ ಹಲವರು ನಮ್ಮ ನಡುವೆ ಇದ್ದಾರೆ.

ಆದರೆ, ಪೊಲೀಸ್ ಕರ್ತವ್ಯದಲ್ಲೂ ವಿಭಿನ್ನ ಜವಾಬ್ದಾರಿಗಳಿವೆ. ಈ ಪೈಕಿ ಇಡೀ ಜಿಲ್ಲೆಯ ಜವಾಬ್ದಾರಿ ವಹಿಸಿದವರ ಭದ್ರತೆ ಸೂಕ್ಷ್ಮ ವಿಚಾರ. ಇಂತಹ ಸೂಕ್ಷ್ಮ ಜವಾಬ್ದಾರಿಯ ನಡುವೆಯೇ ಸೂಕ್ಷ್ಮಮತಿಯಂತೆ   ಸಾಹಿತ್ಯದ ಸಾಲು ಹೊಮ್ಮಿಸುತ್ತಿರುವವರು ಜಿಲ್ಲಾಧಿಕಾರಿ ಗನ್‌ಮ್ಯಾನ್ ಷಣ್ಮುಖ ಪುಟ್ಟಪ್ಪ ಹೊಂಬಳಿ.

ಹಾನಗಲ್ ತಾಲ್ಲೂಕಿನ  ಅಲ್ಲಾಪುರದ ಪುಟ್ಟಪ್ಪ ಹೊಂಬಳಿ ಮತ್ತು ರತ್ನವ್ವ ಮಗನಾದ ಷಣ್ಮುಖ, 2009 ಫೆಬ್ರುವರಿಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೆಬಲ್ ಆಗಿ ಸೇವೆಗೆ ಸೇರಿದ್ದಾರೆ. ಅವರ ಸಂಯಮ,  ಸಹೃದಯತೆ, ಬದ್ಧತೆ ಕಂಡ ಅಂದಿನ ಅಧಿಕಾರಿಗಳು 2013 ಮಾರ್ಚ್‌ನಲ್ಲಿ ಜಿಲ್ಲಾಧಿಕಾರಿ ‘ಗನ್‌ ಮ್ಯಾನ್’ ಆಗಿ ನಿಯೋಜಿಸಿದ್ದಾರೆ. ಆ ಬಳಿಕ ಜಿಲ್ಲೆ ಕಂಡ ಐದು ಜಿಲ್ಲಾಧಿಕಾರಿಗಳಿಗೆ ‘ಗನ್ ಮ್ಯಾನ್’ ಆಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ.

ADVERTISEMENT

ಬತ್ತದ ಸಾಹಿತ್ಯ ಉತ್ಸಾಹ: ‘ಹಾನಗಲ್‌ ತಾಲ್ಲೂಕಿನ ನರೇಗಲ್ ಪ್ರೌಢಶಾಲೆಯಲ್ಲಿ ಜಿ.ಎಸ್‌. ಸಾಲಿಮಠ ಕನ್ನಡ ಅಧ್ಯಾಪಕರಾಗಿದ್ದರು. ಅವರು ಕನ್ನಡ ಕಲಿಕೆಗೆ ನೀಡುತ್ತಿದ್ದ ಪ್ರೋತ್ಸಾಹವೇ ಸಾಹಿತ್ಯ ಆಸಕ್ತಿಯ ಬೀಜವನ್ನು ಬಿತ್ತಿತು. ಬಳಿಕ ಬಂಕಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಅನ್ನಪೂರ್ಣ ಹತ್ತಿಮತ್ತೂರ ಪ್ರೋತ್ಸಾಹ ನೀಡಿದರು’ ಎಂದು ಷಣ್ಮುಖ ಹೊಂಬಳಿ ತಮ್ಮ ಸಾಹಿತ್ಯ ಪ್ರೀತಿ ಚಿಗುರೊಡೆದ ಬಗೆಯನ್ನು ಬಿಚ್ಚಿಡುತ್ತಾರೆ.

‘2006ರಲ್ಲಿ ಶಿಕ್ಷಣ ಕುರಿತ ಮೊದಲ ಲೇಖನ ಬರೆದೆನು. 2007ರಲ್ಲಿ ಕಾಲೇಜು ಸಂಚಿಕೆಯಲ್ಲಿ ಕವನ, ಹಾನಗಲ್ ಕವಿಗೋಷ್ಠಿಯಲ್ಲಿ ಕವನ ವಾಚನ, ವಿವಿಧ ಕವಿಗೋಷ್ಠಿ, ಚುಟುಕುಗೋಷ್ಠಿಗಳಲ್ಲಿ ಭಾಗಿಯಾದೆನು. ಕವಿ ಚನ್ನವೀರ ಕಣವಿ ಸಂಪಾದಕತ್ವದ ‘101 ಕವಿಗಳು, 101 ಭಾವನೆ’ ಎಂಬ ಕವನ ಸಂಕಲನದಲ್ಲಿ ವಾಮನ ಬೇಂದ್ರೆ ಮತ್ತಿತರ ದಿಗ್ಗಜರ ಜೊತೆ ನನ್ನ ಕವನವೂ ಆಯ್ಕೆಯಾಗಿರುವುದು ಸಂತಸ ನೀಡಿತು’ ಎಂದು ಮೆಲುಕು ಹಾಕಿದರು.

‘ದುಡಿಯುವ ಹೆಮ್ಮೆಯ ಕೈಗಳು’, ‘ನಿತ್ಯ ಚಿರಂತನ’...ಹೀಗೆ ವಿವಿಧ ಶೀರ್ಷಿಕೆ ಹಾಗೂ ವೇದಿಕೆಗಳಲ್ಲಿ ಹೊಂಬಳಿ ಕವನಗಳು ಹೊನಲಾಗಿ ಹರಿದವು. ಈ ನಡುವೆಯೇ ಚುಟುಕು, ಕತೆ, ಲೇಖನ ಮತ್ತಿತರ ಪ್ರಕಾರಗಳಲ್ಲೂ ಪ್ರಯೋಗ ಮಾಡಿದರು. ಸದ್ಯ ಕವನಗಳ ಸಂಕಲನ ಹಾಗೂ ಕಾದಂಬರಿಗಳೆರಡು ಪ್ರಕಟಣೆಯ ಹೊಸ್ತಿಲಲ್ಲಿವೆ.

ಪೊಲೀಸ್ ಒಲವು: ಕಲಿಯುತ್ತಲೇ ಕವನದ ಪ್ರೀತಿ ಬೆಳೆದರೆ, ಸೈನ್ಯ ಸೇರಿದ ಚಿಕ್ಕಪ್ಪ ಬಸವಣೆಪ್ಪ ಹೊಂಬಳಿ ಅವರನ್ನು ಕಂಡಾಗ ‘ಶಿಸ್ತಿನ ಉದ್ಯೋಗ’ದ ಕಿಚ್ಚೂ ಮೂಡಿತ್ತು. ಅಣ್ಣ ಶರಣಪ್ಪ ಕೂಡಾ ಸೈನಿಕರು. ಪದವಿ ಬಳಿಕ ಹಾವೇರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಉದ್ಯೋಗವೂ ಸಿಕ್ಕಿತ್ತು. ‘ಪೆನ್’ ಪ್ರೀತಿಯ ಕೈಗಳಿಗೆ ‘ಗನ್’ ತರಬೇತಿಯೂ ದೊರೆತಿತ್ತು. ಒಂದು ದಿನ ಜಿಲ್ಲಾಧಿಕಾರಿಯ ‘ಅಂಗರಕ್ಷಕ’ನ ಜವಾಬ್ದಾರಿ ಹೆಗಲೇರಿತು.

‘ಕರ್ತವ್ಯದ ನಡುವಿನ ಬಿಡುವಿನ ಅವಧಿಯಲ್ಲಿ ಮನಸ್ಸಿಗೆ ಮೂಡಿದ ಸಾಲುಗಳನ್ನು ಕೈಯಲ್ಲಿದ್ದ ಹಾಳೆಯಲ್ಲೇ ಗೀಚುತ್ತೇನೆ. ಬಳಿಕ ಕವನ ರೂಪ ನೀಡುತ್ತೇನೆ. ಹಿರಿಯ ಅಧಿಕಾರಿಗಳ ಸಮೀಪದಲ್ಲಿ ಇರುವ ಕಾರಣ, ಅವರ ಶಿಸ್ತು, ಜ್ಞಾನ, ನಡವಳಿಕೆ, ಭಾಷೆ, ನಿರ್ವಹಣೆಗಳು ಪ್ರೇರಣೆಯಾಗುತ್ತಿವೆ’ ಎನ್ನುತ್ತಾರೆ ಅವರು.

‘ಎಲ್ಲ ಜಿಲ್ಲಾಧಿಕಾರಿಗಳು ನನ್ನ ಬರಹಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಈ ಕರ್ತವ್ಯಕ್ಕೆ ಬಂದ ಬಳಿಕವೇ ‘ಕನ್ನಡ ಸ್ನಾತಕೋತ್ತರ ಪದವಿ’ ಪೂರೈಸಲು ಪ್ರೋತ್ಸಾಹ ಸಿಕ್ಕಿತು.  ‘ಮಹಿಳೆ, ನೊಂದವರು, ಅಶಕ್ತರು, ಪರಿಸರದ ಕುರಿತು ಬರೆಯಬೇಕು’ ಎಂದು ಈಗಿನ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಪ್ರೋತ್ಸಾಹ ನೀಡುತ್ತಾರೆ. ಅತ್ತ ಎಸ್ಪಿ, ಹಿರಿಯ ಅಧಿಕಾರಿಗಳು, ಡಿಎಆರ್ ಅಧಿಕಾರಿಗಳು ಕರ್ತವ್ಯಕ್ಕೆ ಪ್ರೋತ್ಸಾಹಿಸುತ್ತಾರೆ’ ಎಂದರು. ಹೀಗೆ ಕರ್ತವ್ಯದ ‘ಗನ್’ ಮತ್ತು ಹವ್ಯಾಸದ ‘ಪೆನ್’ ಜೊತೆ ಪ್ರೀತಿಯಿಂದ ಜೀವನ ನಡೆಸುತ್ತಿರುವ ಷಣ್ಮುಖ ಹೊಂಬಳಿ ಪತ್ನಿ ಹೆಸರು ‘ಕವಿತಾ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.