ADVERTISEMENT

ಗುರುನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಪುಣ್ಯಾರಾಧನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 6:21 IST
Last Updated 3 ಸೆಪ್ಟೆಂಬರ್ 2017, 6:21 IST

ಅಕ್ಕಿಆಲೂರ: ‘ಲಕ್ಷಾಂತರ ಭಕ್ತರಿಗೆ ಭಕ್ತರಿಗೆ ಲಿಂಗದೀಕ್ಷೆ ನೀಡಿ ಶಿವಭಕ್ತರನ್ನಾಗಿಸಿದ ಕೂಡಲದ ಲಿಂ. ಗುರುನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಅಗಲಿಕೆ ನಾಡಿನ ಧಾರ್ಮಿಕ ಕ್ಷೇತ್ರಕ್ಕೆ ದೊಡ್ಡ ಹಾನಿ’ ಎಂದು ನಿಂಬಾಳದ ಜಡೆಶಾಂತಲಿಂಗ ಸ್ವಾಮೀಜಿ ನುಡಿದರು. ಇಲ್ಲಿಗೆ ಸಮೀಪವಿರುವ ಕೂಡಲ ಗ್ರಾಮದಲ್ಲಿ ಶನಿವಾರ ಜರುಗಿದ ಲಿಂ. ಗುರುನಂಜೇಶ್ವರ ಶಿವಾಚಾರ್ಯ ಸ್ವಾಮೀಜಿಯ ಪುಣ್ಯಾರಾಧನೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ನಿರಂತರ 50 ವರ್ಷಗಳ ಕಾಲ ಭಕ್ತರ ಜತೆಗೂಡಿ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಗುರುನಂಜೇಶ್ವರ ಸ್ವಾಮೀಜಿ ಅಪಾರ ಭಕ್ತ ಸಮೂಹದ ಮನದಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ. ಕಡಿಮೆ ಮಾತನಾಡುತ್ತಿದ್ದ ಅವರು ಸದಾಕಾಲವೂ ಭಕ್ತರ ಒಳಿತಿಗಾಗಿ ಶ್ರಮಿಸುತ್ತಿದ್ದ ಆದರ್ಶ ಯತಿಗಳು.

ಗುರುಗಳು, ಗುರುಪೀಠಗಳ ಬಗೆಗೆ ಅಪಾರ ಗೌರವ, ಭಕ್ತಿ ಹೊಂದಿದ್ದ ಸ್ವಾಮೀಜಿ ವೀರಶೈವ ಧರ್ಮದ ಗುರಿಯಂತೆ ಸರ್ವರನ್ನೂ ಒಂದುಗೂಡಿಸಿ ಮುನ್ನಡೆಸುವ ಸಂಕಲ್ಪ ಗೈಯ್ದಿದ್ದರು. ನೂರಾರು ದೇವಸ್ಥಾನಗಳ ಜೀರ್ಣೋದ್ಧಾರ, ಸಾವಿರಾರು ದೇವತಾ ಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿರುವ ಗುರುನಂಜೇಶ್ವರ ಸ್ವಾಮೀಜಿ ಎಲ್ಲರೂ ಸಂಸ್ಕಾರ ಸಂಪನ್ನರಾಗಿರಬೇಕು ಎನ್ನುವ ಇಚ್ಛೆ ಹೊಂದಿದ್ದ ಶ್ರೇಷ್ಠ ಗುರುಗಳಾಗಿದ್ದರು’ ಎಂದು ನುಡಿದರು.

ADVERTISEMENT

ಹುಬ್ಬಳ್ಳಿರ ಎರಡೆತ್ತಿನಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ‘ಸಮಾಜಕ್ಕೆ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡವರಲ್ಲಿ ಲಿಂ. ಗುರುನಂಜೇಶ್ವರ ಸ್ವಾಮೀಜಿ ಮೊದಲಿಗರು. ಈ ಭಾಗದ ಪ್ರತಿ ಮನೆಗಳಲ್ಲಿಯೂ ಸಂಸ್ಕಾರ ದೀಕ್ಷೆ ನೀಡಿದ ಪುಣ್ಯಪುರುಷರು. ಜಾತಿ–ಬೇಧ ಪರಿಗಣಿಸದೇ ಸರ್ವ ಜನಾಂಗಗಳ ಏಳಿಗೆಗೆ ಶ್ರಮ ವಹಿಸಿದ್ದ ಮಹಾಮಹಿಮರು. ಗುರು–ವಿರಕ್ತರು ಎನ್ನುವ ಬೇಧ–ಭಾವ ಮಾಡದೇ ಸಮಭಾವ ಬಿತ್ತಿದ ಸ್ವಾಮೀಜಿಯ ಅಗಲಿಕೆ ಇಡೀ ಭಕ್ತ ಸಮುದಾಯಕ್ಕೆ ತೀವ್ರ ದುಃಖವನ್ನುಂಟು ಮಾಡಿದೆ’ ಎಂದರು.

ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ‘ಕನ್ನಡ ನಾಡು ಕಂಡ ಅಪರೂಪದ ಆದರ್ಶ ವ್ಯಕ್ತಿತ್ವವನ್ನು ಲಿಂ.ಗುರುನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಹೊಂದಿದ್ದರು. ಹೃದಯ ವೈಶಾಲ್ಯತೆಯ ಸ್ವಾಮೀಜಿ ಸರಳತೆಯೇ ಮೈವೆತ್ತಿ ಬಾಳಿದವರು’ ಎಂದರು.

ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ, ಮುತ್ತಿನಕಂತಿಮಠದ ಚಂದ್ರಶೇಖರ ಸ್ವಾಮೀಜಿ, ಗೊಗ್ಗಿಹಳ್ಳಿಯ ಸಂಗಮೇಶ್ವರ ಸ್ವಾಮೀಜಿ, ಅಡ್ನೂರಿನ ಪಂಚಾಕ್ಷರಿ ಸ್ವಾಮೀಜಿ, ಬಂಕಾಪುರದ ರೇವಣಸಿದ್ದೇಶ್ವರ ಸ್ವಾಮೀಜಿ, ತಿಪ್ಪಾಯಿಕೊಪ್ಪದ ಮಹಾಂತ ದೇವರು, ಕೂಡಲದ ಗುರು ಮಹೇಶ್ವರ ಸ್ವಾಮೀಜಿ, ಮೂಡಿಯ ಸದಾಶಿವ ಸ್ವಾಮೀಜಿ, ಶಾಸಕ ಮನೋಹರ ತಹಶೀಲ್ದಾರ್, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಬ್ಯಾಡಗಿಯ ಮಾಜಿ ಶಾಸಕ ಸುರೇಶಗೌಡ ಪಾಟೀಲ, ಜಿಲ್ಲಾ ಪಂಚಾಯ್ತಿ ಸದಸ್ಯ ಮಾಲತೇಶ ಸೊಪ್ಪಿನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.