ADVERTISEMENT

ಗುರು–ಶಿಷ್ಯರ ಜಗಳಕ್ಕೆ ಮಾನೆ ‘ಮದ್ದು’

ತಹಸೀಲ್ದಾರಗೆ ತಪ್ಪಿದ 9ನೇ ಬಾರಿಯ ಅವಕಾಶ: ಕಮಲ ಪಾಳೆಯದಲ್ಲಿ ಒಳಗೊಳಗೆ ಮುಗುಳ್ನಗೆ

ಹರ್ಷವರ್ಧನ ಪಿ.ಆರ್.
Published 18 ಏಪ್ರಿಲ್ 2018, 7:39 IST
Last Updated 18 ಏಪ್ರಿಲ್ 2018, 7:39 IST

ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಗುರು–ಶಿಷ್ಯರುಗಳ ಜಗಳದಲ್ಲಿ ಶಾಸಕ ಮನೋಹರ್ ತಹಸೀಲ್ದಾರಗೆ ಟಿಕೆಟ್ ಕೈ ತಪ್ಪಿದ್ದು, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಇದರ ಲಾಭ ಯಾರಿಗೆ? ಎಂಬುದೇ ಈಗ ಚರ್ಚೆಯ ಕೇಂದ್ರವಾಗಿದೆ.

ಇಲ್ಲಿ 1978ರಿಂದ ನಿರಂತರ 9 ಚುನಾವಣೆಗಳಲ್ಲಿ ತಹಸೀಲ್ದಾರ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಈ ಬಾರಿ ಟಿಕೆಟ್ ಕೈ ತಪ್ಪಲು ವಯಸ್ಸು, ಅನಾರೋಗ್ಯ ಮತ್ತಿತರ ಕಾರಣಗಳನ್ನು ಹೇಳಲಾಗುತ್ತಿದೆ. ಆದರೆ, ಈ ಬಾರಿ ಅವರ 6 ಜನ ಬೆಂಬಲಿಗರು ಹಾಗೂ ಶಿಷ್ಯರು, ‘ಅಭ್ಯರ್ಥಿ ಬದಲಾಯಿಸಿ. ನಮ್ಮ ಪೈಕಿ ಒಬ್ಬರಿಗೆ ನೀಡಿ’ ಎಂದು ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದರು.

ಆ ಬಳಿಕ ಸ್ವತಃ ತಹಸೀಲ್ದಾರ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ, ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಅಲ್ಲದೇ, ‘ಆಕಸ್ಮಾತ್ ಟಿಕೆಟ್ ತಪ್ಪಿದರೆ, ಮಗನಿಗೆ (ರಾಘವೇಂದ್ರ ತಹಸೀಲ್ದಾರ) ನೀಡಿ’ ಎಂದು ಮನವಿ ಮಾಡಿಕೊಂಡಿದ್ದರಂತೆ.

ADVERTISEMENT

ಆದರೆ, ಕೊನೆ ಕ್ಷಣದ ಮಾತುಕತೆಯಲ್ಲಿ ‘ನಮಗೆ ಟಿಕೆಟ್‌ ಸಿಗದಿದ್ದರೆ, ಅವರಿಗೂ ಬೇಡ’ ಎಂದು ಎರಡೂ ಬಣಗಳು ಪಟ್ಟು ಹಿಡಿದ ಕಾರಣ ವರಿಷ್ಠರು ಮೂರನೇ ವ್ಯಕ್ತಿಯ ಮೊರೆ ಹೋದರು. ಹೀಗಾಗಿ ಹೈಕಮಾಂಡ್ ಜೊತೆ ಉತ್ತಮ ಸಂಬಂಧ ಹೊಂದಿರುವ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಅವರಿಗೆ ಅದೃಷ್ಟ ಖುಲಾಯಿಸಿದೆ ಎಂದು ಮುಖಂಡರೊಬ್ಬರು ತಿಳಿಸಿದರು.

ಲಾಭ ಯಾರಿಗೆ?: ‘ಇಬ್ಬರ ಜಗಳ ಮೂರನೇಯವರಿಗೆ ಲಾಭ’ ಎಂಬುದು ಗಾದೆ ಮಾತು. ಆದರೆ, ಇಲ್ಲಿ ‘ಇಬ್ಬರ ಜಗಳವು ಮೂರನೇ ವ್ಯಕ್ತಿಗೆ ಟಿಕೆಟ್‌ ಗಿಟ್ಟಿಸಿದೆ. ಆದರೆ, ಲಾಭ ಯಾರಿಗೆ (ಮಾಜಿ ಸಚಿವ ಸಿ.ಎಂ. ಉದಾಸಿ– ವಿಧಾನ ಪರಿತ್ ಸದಸ್ಯ ಶ್ರೀನಿವಾಸ ಮಾನೆ) ಎಂಬುದು ಮೇ 15ಕ್ಕೇ ತಿಳಿಯಲಿದೆ’ ಎನ್ನುತ್ತಾರೆ ಜನತೆ.

ಸತತ 8 ಚುನಾವಣೆಗಳಲ್ಲಿ ತಹಸೀಲ್ದಾರ ಮತ್ತು ಉದಾಸಿ ಸ್ಪರ್ಧಿಸಿದ್ದು, ಪ್ರತಿಬಾರಿಯೂ ಎದುರಾಳಿಯ ಟಿಕೆಟ್ ಕೈ ತಪ್ಪುವುದೋ? ಎಂಬ ನಿರೀಕ್ಷೆಯಲ್ಲಿ ಎರಡೂ ಕಡೆಯ ಬೆಂಬಲಿಗರು ಇರುತ್ತಿದ್ದರು. ಅದು, ಈ ಬಾರಿ ನಿಜವಾಗಿದೆ. ಆದರೂ, ಪ್ರಯತ್ನ ಬಿಡದ ತಹಸೀಲ್ದಾರ ಹಾಗೂ ಬೆಂಬಲಿಗರು ಮೈಸೂರಿಗೆ ಭೇಟಿ ನೀಡಿದ್ದು, ಸಿ.ಎಂ. ಹಾಗೂ ವರಿಷ್ಠರನ್ನು ಭೇಟಿಯಾಗಿ ‘ಬಿ‘ ಫಾರಂ ನೀಡುವಂತೆ ಮನವಿ ಮಾಡಿದ್ದಾರೆ.

ಇತ್ತ ಜೆಡಿಎಸ್‌ನಿಂದ ಚಿನ್ನದ ವ್ಯಾಪಾರಿ ಬೊಮ್ಮನಹಳ್ಳಿ ಬಾಬು ಕಣಕ್ಕೆ ಇಳಿದಿದ್ದು, ಏನೇನು ‘ಚಮಕ್‌’ ಮಾಡುವರು ಎಂಬ ನಿರೀಕ್ಷೆ ಹೆಚ್ಚಿದೆ.

ಜಾತ್ಯತೀತ ಮತದಾರರು, ಪಕ್ಷ ನಿಷ್ಠ ಕಾಂಗ್ರೆಸಿಗರು: ಶ್ರೀನಿವಾಸ ಮಾನೆ

‘ರಾಜ್ಯದ 224 ಕ್ಷೇತ್ರಗಳ ಪೈಕಿ ಹಾನಗಲ್ ವಿಶಿಷ್ಟವಾಗಿದೆ. ಇಲ್ಲಿನ ಮತದಾರರು ಜಾತ್ಯತೀತ ನಿಲುವು ಹೊಂದಿದ್ದರೆ, ಕಾಂಗ್ರೆಸ್‌ ಕಾರ್ಯಕರ್ತರು ಪಕ್ಷ ನಿಷ್ಠೆಗೆ ಹೆಸರಾಗಿದ್ದಾರೆ. ಏನೇ ಭಿನ್ನಾಭಿಪ್ರಾಯವಿದ್ದರೂ, ಪಕ್ಷ ಟಿಕೆಟ್ ನೀಡಿದ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸ್ಥಳೀಯ ಸಂಸ್ಥೆಗಳ ಕ್ಷೇತ್ರದ (ವಿಧಾನ ಪರಿಷತ್) ಚುನಾವಣೆಯಲ್ಲಿ ಇಲ್ಲಿಯ ಜನಪ್ರತಿನಿಧಿಗಳೇ ನನ್ನನ್ನು ಎರಡು ಬಾರಿ ಆಯ್ಕೆ ಮಾಡಿದ್ದಾರೆ. ಕಳೆದ 9 ವರ್ಷಗಳಿಂದ ನಿರಂತರ ಸಂಪರ್ಕದಲ್ಲಿದ್ದಾರೆ. ಇದೇ ನನಗೆ ಬಹುದೊಡ್ಡ ಬಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಶಾಸಕ ಮನೋಹರ ತಹಸೀಲ್ದಾರ ಹಾಗೂ ಎಲ್ಲ ಮುಖಂಡರ ಮನವೊಲಿಸಿ, ಚುನಾವಣೆ ಎದುರಿಸುವ ವಿಶ್ವಾಸ ಇದೆ. ಏ. 23 ಅಥವಾ 24ರಂದು ನಾಮಪತ್ರ ಸಲ್ಲಿಸುತ್ತೇನೆ’ ಎಂದರು. ಮಂಗಳವಾರ ಸಂಜೆ ಕ್ಷೇತ್ರದ ಕೆಲ ಪ್ರಮುಖ ಮಠಗಳಿಗೆ ಅವರು ಭೇಟಿ ನೀಡಿದರು.

**

ಪಕ್ಷವು ‘ಬಿ‘ ಫಾರಂ ಘೋಷಣೆಯ ಸಂದರ್ಭದಲ್ಲಿ ಅಭ್ಯರ್ಥಿಯನ್ನು ಬದಲಾವಣೆ ಮಾಡುವ ವಿಶ್ವಾಸ ಇದೆ. ಅಲ್ಲಿಯವರೆಗೆ ತಾಳ್ಮೆಯಿಂದ ಕಾದು ನೋಡುತ್ತೇನೆ – ಮನೋಹರ ತಹಸೀಲ್ದಾರ, ಶಾಸಕ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.