ADVERTISEMENT

‘ಜಾನುವಾರುಗಳಿಗೆ ಇನ್ನು ಕಟುಕರೇ ಗತಿ!’

ಕೈಕೊಟ್ಟ ಮುಂಗಾರು, ಹಿಂಗಾರು; ಕ್ಷಾಮದಿಂದ ಕಂಗೆಟ್ಟ ರೈತರು, ಬರದ ಗಾಯದ ಮೇಲೆ ನೋಟು ರದ್ದತಿಯ ಬರೆ

ಹರ್ಷವರ್ಧನ ಪಿ.ಆರ್.
Published 31 ಡಿಸೆಂಬರ್ 2016, 4:35 IST
Last Updated 31 ಡಿಸೆಂಬರ್ 2016, 4:35 IST
ಹಾವೇರಿಯ ಶಿವಲಿಂಗೇಶ್ವರ ಜಾನುವಾರು ಮಾರುಕಟ್ಟೆಯಲ್ಲಿ ಗುರುವಾರ ಕಂಡು ಬಂದ ನೋಟ
ಹಾವೇರಿಯ ಶಿವಲಿಂಗೇಶ್ವರ ಜಾನುವಾರು ಮಾರುಕಟ್ಟೆಯಲ್ಲಿ ಗುರುವಾರ ಕಂಡು ಬಂದ ನೋಟ   

ಹಾವೇರಿ : ‘ಜಾನುವಾರುಗಳಿಗಿನ್ನು ಕಟುಕರೇ ಗತಿ!’ –ತಮ್ಮ ಜೋಡಿ ಎತ್ತನ್ನು ಮಾರಾಟ ಮಾಡಲು ಹಾವೇರಿಯ ಹುಕ್ಕೇರಿಮಠದ ಶಿವಬಸವೇಶ್ವರ ಜಾನುವಾರು ಮಾರುಕಟ್ಟೆಗೆ ಬಂದಿದ್ದ ಕೆರಿಮತ್ತಿಹಳ್ಳಿಯ ರೈತ ಉಮೇಶ ಬಸಪ್ಪ ಗೌಳಿ ‘ಪ್ರಜಾವಾಣಿ’ ಜೊತೆ ನೋವು ತೋಡಿಕೊಂಡ ಪರಿ. ಇದು ಬರದಿಂದ ಸೊರಗಿದ ರೈತರ ಬದುಕು ‘ನೋಟು ರದ್ದತಿ’ ಬಳಿಕ ತೀವ್ರ ಸಂಕಷ್ಟಕ್ಕೆ ಸಿಲುಕಿರುವುದನ್ನು ಧ್ವನಿಸಿತ್ತು.

ಹಣದ ಕೊರತೆ ನೀಗಿಸಲು ರೈತರು ಜಾನುವಾರುಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಆದರೆ, ಜಾನುವಾರುಗಳನ್ನು ಮಾರುಕಟ್ಟೆಗೆ ತಂದು ತಿಂಗಳು ಕಳೆದರೂ, ಅರ್ಧ ಬೆಲೆಗೆ ಖರೀದಿಸುವವರೂ ಇಲ್ಲದಂತಾಗಿದೆ.  

‘ಭೀಕರ ಬರ, ಹಸಿ ಬರ (ಅತಿವೃಷ್ಟಿ) ಕಂಡಿದ್ದೇನೆ. ಆದರೆ, ರೈತರಿಗೆ, ಜಾನುವಾರುಗಳಿಗೆ ಈ ಗತಿ ಬರುವುದನ್ನು ಕಂಡಿಲ್ಲ’ ಎಂದು 68ರ ಹರೆಯದ ಷರೀಫ್‌ ಸಾಹೇಬರು, ಕರಿಯಣ್ಣ ದಾವಣಗೇರಿ ಮತ್ತಿತರ ಹಿರಿಯರು ಪರಿಸ್ಥಿತಿಯನ್ನು ವಿವರಿಸಿದರು.

‘ಬರದ ಪರಿಣಾಮ ಮುಂಗಾರು ಮತ್ತು ಹಿಂಗಾರು ಕೈಕೊಟ್ಟಿದೆ. ಹೀಗಾಗಿ ಮೇವು ದಾಸ್ತಾನು ಇಲ್ಲ. ಇನ್ನೊಂದೆಡೆ, ಹೊಲದಲ್ಲಿ ಅಳಿದುಳಿದ ಹತ್ತಿಯನ್ನು ಆಯಲು ಕೂಲಿ ನೀಡಬೇಕು. ಒಬ್ಬ ಆಳಿಗೆ ಸುಮಾರು ₹400 ರಂತೆ (ಕೆ.ಜಿಗೆ ಗುತ್ತಿಗೆ) 10 ಆಳುಗಳಿಗೆ ಸುಮಾರು  ₹4,000 ಕೂಲಿಯನ್ನು ಸಂಜೆ (ನಗದು) ನೀಡಬೇಕು. ಆದರೆ, ಬ್ಯಾಂಕಿನಲ್ಲಿ ವಾರಕ್ಕೆ ₹24 ಸಾವಿರ ಮಾತ್ರ ನೀಡುತ್ತಾರೆ. ಅದು ಮನೆ ಹಾಗೂ ಇತರ ಖರ್ಚಿಗೆ  ಸಾಕು. ಮಾರುಕಟ್ಟೆಗೆ ಹತ್ತಿ ಹಾಕಿದರೆ, ಚೆಕ್ ನೀಡುತ್ತಾರೆ. ಅದನ್ನು ನಗದೀಕರಿಸಲು, ಬ್ಯಾಂಕಿನಲ್ಲಿ ನೀಡುವ ₹2,000 ನೋಟು ಚಿಲ್ಲರೆ ಮಾಡಿ ತರಲು ಒಬ್ಬ ಆಳು ಬೇಕು. ಅದಕ್ಕೂ ದಿನಗಳು ಹಿಡಿಯುತ್ತವೆ. ಇದರಿಂದ ಆಳುಗಳಿಗೆ ಕೂಲಿ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ಉಮೇಶಬಸಪ್ಪ ಗೌಳಿ ವಿವರಿಸಿದರು. ಸವಣೂರಿನ ಶಂಭಣ್ಣ ಮತ್ತಿತರರು ದನಿಗೂಡಿಸಿದರು. 

‘ಮನೆಯವರು ಸ್ವಸಹಾಯ ಸಂಘ, ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಮಾಡಿದ ಸಾಲ ಕಟ್ಟಲೂ ಆಗುತ್ತಿಲ್ಲ. ಬಡ್ಡಿ ಬೆಳೆಯುತ್ತಿದೆ. ಒತ್ತಡವೂ ಹೆಚ್ಚಿತ್ತಿದೆ’ ಎಂದು ಷರೀಫ ಸಾಹೇಬರು ಹೇಳಿದರು. 

‘ರೊಕ್ಕ ಇಲ್ಲದೇ ಎತ್ತುಗಳನ್ನು ಮಾರಲು ಬಂದಿದ್ದೇವೆ. ₹70 ಸಾವಿರಕ್ಕೆ ಖರೀದಿಸಿದ ಜೋಡಿ ಎತ್ತನ್ನು ₹35 ಸಾವಿರಕ್ಕೂ ಖರೀದಿಸುವವರಿಲ್ಲ. ಕೆಲವರು ಉದ್ರಿ (ಸಾಲ) ಕೇಳುತ್ತಾರೆ. ಈಗ ₹10 ಸಾವಿರ ಕೊಟ್ಟು, ಎರಡು ವಾರಗಳ ಬಳಿಕ ಬಾಕಿ ಹಣ ಕೊಡುತ್ತೇವೆ ಎನ್ನುತ್ತಾರೆ. ಇದರಿಂದ ಕೂಲಿ ನೀಡಲು ಸಾಧ್ಯ ಇಲ್ಲ. ಕೂಲಿ ನೀಡದಿದ್ದರೆ ಅಳಿದುಳಿದ ಹತ್ತಿಯೂ ಹೋಗುತ್ತದೆ. ನಮಗೆ ರೋಕಡಿ (ಒಂದೇ ಕಂತು)ಬೇಕು’ ಎಂದು ಮಾರುಕಟ್ಟೆಗೆ ಬಂದಿದ್ದ ರೈತರು ಕಷ್ಟ ತೋಡಿಕೊಂಡರು.

‘ಕಳೆದ ಎರಡು ವಾರವೂ ಮಾರುಕಟ್ಟೆಗೆ ಬಂದಿದ್ದೇನೆ. ಮಾರಾಟ ಆಗಿಲ್ಲ. ಪ್ರತಿನಿತ್ಯ ಮೇವು, ಕೂಲಿಯಾಳು, ಸಾಗಾಟ, ಇತ್ಯಾದಿ ಖರ್ಚುಹೆಚ್ಚುತ್ತಿದೆ. ವಾಪಾಸ್‌ ಒಯ್ದರೆ ಮತ್ತೂ ನಷ್ಟ. ಆದರೆ,... ಕಸಾಯಿ ಖಾನೆಯವರು ₹25 ಸಾವಿರಕ್ಕೆ ಕೇಳುತ್ತಿದ್ದಾರೆ’ ಎಂದು ಉಮೇಶ ಬಸಪ್ಪ ಗೌಳಿ ತಮ್ಮ  ನೋವು ತೋಡಿಕೊಂಡರು."

ಮಾರುಕಟ್ಟೆಯಲ್ಲಿನ ರೈತರು ಇದೇ ಕಷ್ಟವನ್ನು ತೋಡಿಕೊಂಡರು.  ‘ರೊಕ್ಕದ ಅಡಚಣೆಯಿಂದ ರೈತರಿಗೆ ತ್ರಾಸವಾಗಿದೆ. ಮೇ ತಿಂಗಳಲ್ಲಿ ನಾಲ್ಕು ಹಲ್ಲಿನ ಎತ್ತಿನ ಜೋಡಿ ₹60 ಸಾವಿರದಿಂದ ₹1 ಲಕ್ಷದ ರವರೆಗೆ ಮಾರಾಟವಾಗಿತ್ತು. ಈಗ ₹35 ಸಾವಿರಕ್ಕೂ ಬೇಡವಾಗಿದೆ’ ಎಂದು ಬ್ಯಾಡಗಿಯ ರೈತ ಹಣಮಂತ ತಿಳಿಸಿದರು.

ನಮ್ಮಲ್ಲೂ  ನಗದಿಲ್ಲ...
‘ನಮ್ಮ ಬಳಿಯಲ್ಲೂ ನೋಟಿಲ್ಲ. ಆ ಕಾರಣ ಕಡಿಮೆ ರೊಕ್ಕಕ್ಕೆ ನಾವು ದನಗಳನ್ನು ಕೇಳುತ್ತಿದ್ದೇವೆ. ಇಲ್ಲದಿದ್ದರೆ, ಹೆಚ್ಚಿನ ರೋಕಡಿ ನೀಡುತ್ತಿದ್ದೆವು’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಕಸಾಯಿಖಾನೆಯ ವ್ಯಾಪಾರಿಯೊಬ್ಬರು ತಿಳಿಸಿದರು.

600  ಜೋಡಿ  ಜಾನುವಾರು
ಈ ಭಾಗದಲ್ಲಿ ಜನಪ್ರಿಯವಾದ ಹಾವೇರಿಯ ಶಿವಬಸವೇಶ್ವರ ಜಾನುವಾರು ಮಾರುಕಟ್ಟೆಗೆ ಮೈಸೂರು, ಬಳ್ಳಾರಿ, ಗೋಕಾಕ, ಕೊಪ್ಪಳ ಮತ್ತಿತರ ಪ್ರದೇಶದಿಂದ ರೈತರು ಹಾಗೂ ವ್ಯಾಪಾರಿಗಳು ಬರುತ್ತಾರೆ. ಸುಮಾರು 600ಕ್ಕೂ ಹೆಚ್ಚು ಜೋಡಿ ಜಾನುವಾರುಗಳು ಪ್ರತಿ ಗುರುವಾರ ಮಾರುಕಟ್ಟೆ ಬರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.