ADVERTISEMENT

ಜಿಂಕೆ, ಕೃಷ್ಣಮೃಗಗಳ ಹಾವಳಿ

ರೈತರಿಗೆ ಹಗಲು, ರಾತ್ರಿಯಿಡೀ ಹೊಲ ಕಾಯುವ ಕೆಲಸ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 11:06 IST
Last Updated 10 ಜುಲೈ 2017, 11:06 IST

ಅಕ್ಕಿಆಲೂರ: ಇಲ್ಲಿಗೆ ಸಮೀಪವಿರುವ ಹರವಿ, ಹರನಗಿರಿ ಸೇರಿದಂತೆ ಸುತ್ತಲಿನ ಗ್ರಾಮಗಳ ಹೊಲಗದ್ದೆಗಳಲ್ಲಿ ಜಿಂಕೆ ಮತ್ತು ಕೃಷ್ಣಮೃಗಗಳ ಹಾವಳಿ ಮಿತಿಮಿರಿದ್ದು, ಮೊಳಕೆಯೊಡೆದಿರುವ ಪೈರು ನಾಶವಾಗುತ್ತಿದೆ.

ರೈತರು ಹೊಲಗದ್ದೆಗಳಿಂದ ಹೊರಡುತ್ತಿದ್ದಂತೆಯೇ  ಜಿಂಕೆ ಮತ್ತು ಕೃಷ್ಣಮೃಗಗಳ ಹಿಂಡು ದಾಳಿ ನಡೆಸುತ್ತಿವೆ. ಹರವಿ, ಹರನಗಿರಿ, ವರ್ದಿ, ಕೂಡಲ ಸೇರಿದಂತೆ ವರದಾ ನದಿಯ ತಟದಲ್ಲಿರುವ ಹತ್ತಾರು ಗ್ರಾಮಗಳಲ್ಲಿ ಜಿಂಕೆ ಮತ್ತು ಕೃಷ್ಣಮೃಗಗಳ ಹಾವಳಿಯಿಂದ ರೈತ ಸಮೂಹ ಕಂಗಾಲಾಗಿದೆ. ಪೈರು ಉಳಿಸಿಕೊಳ್ಳಲು ರೈತರು ಹೆಣಗಾಡುತ್ತಿರುವ ಈ ಸಂದರ್ಭದಲ್ಲಿ ಈ ಪ್ರಾಣಿಗಳ ದಾಳಿಯಿಂದ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಪ್ರದೇಶದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಸಮಸ್ಯೆ ವಿಪರೀತವಾಗಿದೆ. ಪರಿಣಾಮ ಹಗಲು, ರಾತ್ರಿಯೆನ್ನದೇ ರೈತರು ಹೊಲ ಕಾಯುವಂತಾಗಿದೆ.

ಒಂದು ಹಿಂಡಿನಲ್ಲಿ 30–40ರಷ್ಟು ಜಿಂಕೆ, ಕೃಷ್ಣಮೃಗಗಳು ಗದ್ದೆಗಳಲ್ಲಿ ದಾಂಗುಡಿ ಇಡುತ್ತಿದ್ದು, ಕೆಲವೇ ನಿಮಿಷಗಳ ಅವಧಿಯಲ್ಲಿ ಅರ್ಧ ಎಕರೆ ಪ್ರದೇಶದಲ್ಲಿನ ಪೈರನ್ನು ನಾಶ ಪಡಿಸುತ್ತಿವೆ. ಸನಿಹದಲ್ಲಿ ಮನುಷ್ಯರ ವಾಸನೆ ಮೂಗಿಗೆ ಬಡಿಯುತ್ತಿದ್ದಂತೆಯೇ ನಿಧಾನವಾಗಿ ಕಾಲ್ಕಿಳುತ್ತವೆ.

ADVERTISEMENT

ವರದಾ ನದಿಯ ತಟದಲ್ಲಿನ ಪೊದೆಗಳಲ್ಲಿ ಜಿಂಕೆ ಮತ್ತು ಕೃಷ್ಣಮೃಗಗಳು ವಾಸವಿದ್ದು, ಬೇಸಿಗೆ ಅವಧಿಯಲ್ಲಿ ಆಹಾರ ಅರಸಿ ಬೇರೆ ಪ್ರದೇಶಕ್ಕೆ ವಲಸೆ ತೆರಳುವ ಇವು ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಈ ಭಾಗದಲ್ಲಿ ತಿರುಗಾಡುತ್ತಾ ರೈತರ ಬೆಳೆ ನಾಶ ಪಡಿಸುತ್ತಿವೆ.

ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಜೂನ್, ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಜಿಂಕೆ ಮತ್ತು ಕೃಷ್ಣಮೃಗಗಳ ಹಾವಳಿ ಹೆಚ್ಚಿದೆ. ಬೆಳೆಗಳನ್ನು ನಾಶ ಪಡಿಸುತ್ತಿರುವ ಈ ಪ್ರಾಣಿಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಸಾಗಿಸುವಂತೆ ರೈತ ಸಮೂಹ ಸಂಬಂಧಿಸಿದ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.