ADVERTISEMENT

ಜಿಲ್ಲೆಯಲ್ಲಿ ಜೆಡಿಎಸ್‌ಗೆ ಆನೆ ಬಲ

ಜೆಡಿಎಸ್ –ಬಿಎಸ್ಪಿ ಮೈತ್ರಿ: ಐದು ಕ್ಷೇತ್ರಗಳಲ್ಲಿ ಜೆಡಿಎಸ್, ಬ್ಯಾಡಗಿಯಲ್ಲಿ ಬಿಎಸ್ಪಿ---– ಡಾಂಗೆ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 9:58 IST
Last Updated 21 ಮಾರ್ಚ್ 2018, 9:58 IST

ಹಾವೇರಿ: ಬಿಎಸ್ಪಿ ಬೆಂಬಲದ ಕಾರಣ ಜಿಲ್ಲೆಯಲ್ಲಿ ನಮ್ಮ ಪಕ್ಷಕ್ಕೆ ‘ಆನೆ ಬಲ’ ಬಂದಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಸಂಜಯ್ ಡಾಂಗೆ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಮತ್ತು ಬಿಜೆಪಿಯ ದುರಾಡಳಿತ ಮತ್ತು ಕಚ್ಚಾಟದಿಂದ ಬೇಸತ್ತ ರಾಜ್ಯದ ಜನತೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆಯೇ, ಪಕ್ಷಕ್ಕೆ ಬಿಎಸ್ಪಿ ಬೆಂಬಲ ಸಿಕ್ಕಿರುವುದು ಬಲ ತಂದಿದೆ’ ಎಂದರು.

‘ಉತ್ತರ ಪ್ರದೇಶದ ಉಪ ಚುನಾವಣೆಯಲ್ಲಿ ಬಿಎಸ್ಪಿ ಮತ್ತು ಸಮಾಜವಾದಿ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಆಡಳಿತಾರೂಢ ಬಿಜೆಪಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ಷೇತ್ರದಲ್ಲೇ ಗೆಲುವು ಸಾಧಿಸಿದ್ದಾರೆ. ಇದರಿಂದ ಬೀಗುತ್ತಿದ್ದ ಬಿಜೆಪಿಗೆ, ಉತ್ತರ ಪ್ರದೇಶದಲ್ಲೇ ತೀವ್ರ ಮುಖಭಂಗ ಉಂಟಾಗಿದೆ. ಇದೇ ಬಿಎಸ್ಪಿಯು ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ’ ಎಂದರು.

ADVERTISEMENT

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬೇವಿನಮರ ಮಾತನಾಡಿ, ‘ಜಿಲ್ಲೆಯ ಆರು ಕ್ಷೇತ್ರಗಳಲ್ಲೂ ಬಿಎಸ್ಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದ್ದು, ಬ್ಯಾಡಗಿಯಲ್ಲಿ ಬಿಎಸ್ಪಿ ಹಾಗೂ ಉಳಿದ ಐದು ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧಿಸಲಿದೆ. ಈ ಪೈಕಿ ಹಾವೇರಿ, ಹಿರೇಕೆರೂರ ಮತ್ತು ರಾಣೆಬೆನ್ನೂರ ಕ್ಷೇತ್ರದ
ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಸವಣೂರ ಕ್ಷೇತ್ರದ ಅಭ್ಯರ್ಥಿಯನ್ನು ಏಪ್ರಿಲ್ 6ರಂದು ನಡೆಯುವ ‘ಕುಮಾರ ಪರ್ವ’ ಅಥವಾ ಪಕ್ಷದ ಎರಡನೇ ಪಟ್ಟಿ ಬಿಡುಗಡೆ ಸಂದರ್ಭದಲ್ಲಿ ಘೋಷಿಸಬಹುದು. ಹಾನಗಲ್ ಕ್ಷೇತ್ರದಲ್ಲಿ ಮೂವರು ಆಕಾಂಕ್ಷಿಗಳಿದ್ದು, ಪಕ್ಷವು ಸೂಕ್ತ ನಿರ್ಧಾರ ಕೈಗೊಳ್ಳಲಿದೆ’ ಎಂದರು.

‘ಇತರ ಪಕ್ಷಗಳಂತೆ ನಮ್ಮಲ್ಲಿ ಗೊಂದಲ, ಪಕ್ಷ ವಿರೋಧಿ ಚಟುವಟಿಕೆಗಳು ಇಲ್ಲ’ ಎಂದ ಅವರು, ‘ಮಾ.5 ಮತ್ತು 6ರಂದು ಜಿಲ್ಲೆಯ ರಾಣೆಬೆನ್ನೂರು, ಹಾವೇರಿ ಮತ್ತು ಹಿರೇಕೆರೂರ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.

ಬಿಎಸ್ಪಿ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಮರೆಯಮ್ಮನವರ ಮಾತನಾಡಿ, ‘ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಮೈತ್ರಿಗೆ ನಮ್ಮ ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ. ಬ್ಯಾಡಗಿಯಲ್ಲಿ ಜೆಡಿಎಸ್ ಬೆಂಬಲದೊಂದಿಗೆ ನಮ್ಮ ಅಭ್ಯರ್ಥಿ ಕಣಕ್ಕಿಳಿದರೆ, ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲಿಸುತ್ತೇವೆ ಎಂದರು.

ಮುಖಂಡರಾದ ಶಿವಕುಮಾರ ಮಠದ, ಶಂಕರಣ್ಣಮಕರಬ್ಬಿ, ಹೇಮಣ್ಣ ಕೋಡಿಹಳ್ಳಿ, ಸತೀಶ ಮಾಳದಕರ, ಸುನೀಲ್ ದಂಡೆಮ್ಮನವರ, ಎನ್.ಟಿ.ಮಂಜುನಾಥ, ಮಂಜುನಾಥ ಕನ್ನನಾಯಕನವರ, ಮಹಾಂತೇಶ ಬೇವಿನ ಹಿಂಡಿ, ಶಿವಣ್ಣ ಹೂಗಾರ ಇದ್ದರು.

ಪತ್ರ ವ್ಯವಹಾರದಲ್ಲೇ ಕಾಲಹರಣ: ಅಧಿಕಾರಿಗಳ ವಿರುದ್ಧ ಆರೋಪ

ಶೇಂಗಾ ಮತ್ತು ಗೋವಿನ ಜೋಳ ಖರೀದಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ಜನವರಿ 11ರಂದು ಜಿಲ್ಲಾಡಳಿತಕ್ಕೆ ಮನವಿ ನೀಡಿತ್ತು. ಆದರೆ, ಇನ್ನೂ ಖರೀದಿ ಕೇಂದ್ರ ಆರಂಭಿಸಿಲ್ಲ. ಆದರೆ, ಈ ಬಗ್ಗೆ ರಾಜ್ಯ ಮಟ್ಟದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ನಮಗೆ ಪತ್ರ ಬರೆದು ತಿಳಿಸಿದ್ದಾರೆ. ಅಧಿಕಾರಿಗಳು, ಕೇವಲ ಪತ್ರ ವ್ಯವಹಾರದಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬೇವಿನಮರ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.