ADVERTISEMENT

ಜೆಎನ್‌ಯು ಕುಲಪತಿಗೆ ಆಹ್ವಾನ: ವಿರೋಧ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 7:14 IST
Last Updated 3 ಮಾರ್ಚ್ 2017, 7:14 IST

ಹಾವೇರಿ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಕುಲಪತಿಯನ್ನು ಆಹ್ವಾನಿಸಿರುವುದನ್ನು ವಿರೋಧಿಸಿ ಭಾರತ ವಿದ್ಯಾರ್ಥಿ ಒಕ್ಕೂಟ (ಎಸ್‌ಎಫ್‌ಐ) ಕಾರ್ಯಕರ್ತರು ಬುಧವಾರ ಹಾವೇರಿಯ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್ಎಫ್‌ಐ ಕೇಂದ್ರ ಸಮಿತಿ ಸದಸ್ಯೆ ರೇಣುಕಾ ಕಹಾರ, ‘ಮಾ.4 ರಂದು ನಡೆಯುತ್ತಿರುವ ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವದ ಉದ್ಘಾಟಕರಾಗಿ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಡಾ. ಜಗದೇಶಕುಮಾರ ಅವರನ್ನು ಆಹ್ವಾನಿಸಲಾಗಿದೆ.

ಡಾ.ಜಗದೇಶ ಕುಮಾರ್‌, ವಿದ್ಯಾರ್ಥಿ ಚಳವಳಿಯನ್ನು ಹತ್ತಿಕ್ಕಲು ವಿದ್ಯಾರ್ಥಿಗಳ ಮೇಲೆ ವಿನಾಃ ಕಾರಣ ಕ್ರಮ ಕೈಗೊಳ್ಳುವುದು, ಭಾರಿ ಮೊತ್ತದ ದಂಡ ವಿಧಿಸುವುದು, ವಿದ್ಯಾರ್ಥಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುತ್ತಿದ್ದಾರೆ. ನಾಲ್ಕು ತಿಂಗಳ ಹಿಂದೆ ನಾಪತ್ತೆಯಾದ ಜೆಎನ್‌ಯು ವಿದ್ಯಾರ್ಥಿ ನಜೀಬ್‌ನ ಪತ್ತೆಗೆ  ಕ್ರಮ ಕೈಗೊಂಡಿಲ್ಲ. ಅವರು ಪಾಲ್ಗೊಳ್ಳುವುದರಿಂದ ಕರ್ನಾಟಕ ವಿಶ್ವವಿದ್ಯಾಲಯದ ಘನತೆ ಹಾಳಾಗುತ್ತದೆ’ ಎಂದು ಅವರು ದೂರಿದರು.

‘ದಲಿತ ವಿರೋಧಿ, ವಿದ್ಯಾರ್ಥಿ ವಿರೋಧಿ, ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹತ್ತಿಕ್ಕುವ, ಮತೀಯವಾದಿಗಳಿಗೆ ಕುಮ್ಮಕ್ಕು ನೀಡುವ ಕುಲಪತಿ ಡಾ.ಜಗದೇಶಕುಮಾರ ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗವಹಿಸಬಾರದು’ ಎಂದು ಒತ್ತಾಯಿಸಿದರು.

ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ಸುಭಾಸ್‌ ಎಂ, ತಾಲ್ಲೂಕು ಕಾರ್ಯದರ್ಶಿ ಪ್ರದೀಪ ಅಕ್ಕಿವಳ್ಳಿ, ಮುಖಂಡರಾದ ವಿಠಲ ಗೌಳಿ, ಮಾಂತೇಶಸಿಂಗ್ ಕಹಾರ, ಚೇತನ್, ನಾಗರಾಜ ಪತ್ತಾರ, ಹರೀಶ, ಶ್ರೀಧರ, ದೇವರಾಜ, ವಿನಾಯಕ, ಮಹಮ್ಮದ್ ಮೋಸಿನ್, ನಾಗರಾಜ ಪತ್ತಾರ, ಕೃಷ್ಣ, ಸಂದೀಪ್, ಬಸವರಾಜ ಧಾರವಾಡ ಮತ್ತಿತರ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT