ADVERTISEMENT

ಜ್ಞಾನದ ಜ್ಯೋತಿಯಿಂದ ಲಿಂಗಾಯತರಾಗೋಣ

ಹಾವೇರಿ: ದಲಿತ ವಚನಕಾರರ ಜಯಂತಿಯಲ್ಲಿ ಉಪನ್ಯಾಸ: ಲೆಕ್ಕ ಪರಿಶೋಧಕ ನಿಜಲಿಂಗಪ್ಪ ಭೀ. ಕಾಳೆ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 11:25 IST
Last Updated 11 ಮಾರ್ಚ್ 2017, 11:25 IST
ಹಾವೇರಿ: ‘ಎಲ್ಲರೂ ಬಸವಣ್ಣನವರ ಜ್ಞಾನದ ಜ್ಯೋತಿಯಿಂದ ‘ಲಿಂಗಾಯತ’ ಆಗಬೇಕು. ಕೇವಲ ಜಾತಿಯಿಂದಲ್ಲ’ ಎಂದು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಲೆಕ್ಕ ಪರಿಶೋಧಕ ನಿಜಲಿಂಗಪ್ಪ ಭೀ. ಕಾಳೆ ಹೇಳಿದರು. 
 
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಡಿ.ದೇವರಾಜು ಅರಸು ಭವನದಲ್ಲಿ ಶುಕ್ರವಾರ ಆಯೋಜಿಸಲಾದ ‘ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ದೂಳಯ್ಯ ಮತ್ತು ಉರಿಲಿಂಗ ಪೆದ್ದಿಯವರ– ‘ದಲಿತ ವಚನಕಾರರ ಜಯಂತಿ’ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
 
‘ನಾನೂ ‘ಲಿಂಗ ದೀಕ್ಷೆ’ ಸ್ವೀಕರಿಸಿದ್ದೇನೆ. ಆದರೆ, ‘ಲಿಂಗಾಯತ’ ಜಾತಿಯನ್ನಲ್ಲ. ಲಿಂಗ ಪೂಜೆ ಮಾಡುತ್ತೇನೆ’ ಎಂದ ಅವರು, ‘ಸ್ವತಂತ್ರ ಭಾರತ ನಿರ್ಮಾಣದ ಮಹಾನ್‌ ಗ್ರಂಥವಾದ ‘ಸಂವಿಧಾನ’ವನ್ನು ಡಾ.ಬಿ.ಆರ್. ಅಂಬೇಡ್ಕರ್ ನೀಡಿದರೆ, ಜನರ ಬದುಕಿನ ಭಾಗವಾಗಿರುವ ‘ರಾಮಾಯಣ’ ಮತ್ತು ‘ಮಹಾಭಾರತ’ವನ್ನು ವಾಲ್ಮೀಕಿ ಮತ್ತು ವ್ಯಾಸರು ನೀಡಿದರು. ಇವರೆಲ್ಲರೂ ದಲಿತರು’ ಎಂದರು. 
 
‘ದೇಶದಲ್ಲಿ ಜಾತಿ, ವರ್ಣ, ವ್ಯವಸ್ಥೆ ಹಾಸುಹೊಕ್ಕಿತ್ತು. ಪುರೋಹಿತಶಾಹಿಗಳು ಪಂಚಮರನ್ನು  ‘ಮನುಷ್ಯರಾಗಿಯೂ ಕಾಣಲಿಲ್ಲ. ವಿದ್ಯೆ ಕಲಿತ ಏಕಲವ್ಯನ ಬೆರಳನ್ನೇ ಪಡೆಯಲಾಯಿತು’ ಎಂದರು. 
 
‘ಕುತ್ತಿಗೆಗೆ ತೆಂಗಿನ ಚಿಪ್ಪು (ಗೆರಟೆ), ಬೆನ್ನಿಗೆ ಕಸಬರಿಕೆ ಕಟ್ಟಿಕೊಂಡು ದಲಿತರು ನಡೆದಾಡಬೇಕಿತ್ತು. ಅಂತಹ ಕಾಲದಲ್ಲೇ ಬಸವಣ್ಣನವರು ಅಂತರ್ಜಾತಿ ವಿವಾಹ ಮಾಡಿಸಿದರು’ ಎಂದರು. 
 
‘ತಮಿಳುನಾಡಿನವರಾದಮಾದಾರ ಚೆನ್ನಯ್ಯ ಹೆಸರಿನಿಂದಾಗಿ ತಮಿಳುನಾಡಿನ ರಾಜಧಾನಿಗೆ ‘ಚೆನ್ನೈ’ ಎಂಬ ಹೆಸರು ಬಂತು. ಡೋಹರ ಕಕ್ಕಯ್ಯನವರು ನಿಷ್ಠುರವಾಗಿ ಬದುಕಿದರು’ ಎಂದರು. 
 
‘ಸಮಗಾರ ಹರಳಯ್ಯ ಮತ್ತು ಕಲ್ಯಾಣಮ್ಮ ದಂಪತಿ ತಮ್ಮ ತೊಡೆಯ ಚರ್ಮವನ್ನೇ ತೆಗೆದು ಚಮ್ಮಾವುಗೆ (ಚಪ್ಪಲಿ) ಮಾಡಿ ಬಸವಣ್ಣನವರಿಗೆ ನೀಡಿದರು. ಬಸವಣ್ಣನವರು ಚಮ್ಮಾವುಗೆಯನ್ನು ತಲೆಯ ಮೇಲಿಟ್ಟುಕೊಂಡರು’ ಎಂದರು. 
 
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಮಾತನಾಡಿ, ‘ಅನುಭವ ಮಂಟಪದಲ್ಲಿ ದಲಿತ ವಚನಕಾರರಿಗೆ ಆದ್ಯತೆ ನೀಡುವ ಮೂಲಕ ಬಸವಣ್ಣನವರು ಸಮಾನತೆ ಕ್ರಾಂತಿ ಮಾಡಿದ್ದರು. ವ್ಯಕ್ತಿಯ ಜಾತಿಗಿಂತ ಜ್ಞಾನದ ಜ್ಯೋತಿ ಮುಖ್ಯ’ ಎಂದರು.
 
ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ‘ವರ್ಣಾಶ್ರಮ ವ್ಯವಸ್ಥೆಯ ಅಂದಿನ ಸಮಾಜದಲ್ಲೇ ಬಸವಣ್ಣನವರು ಸಮಾನತೆಯ ಕ್ರಾಂತಿ ಮಾಡಿದರು. ಉರಿಲಿಂಗ ಪೆದ್ದಿಯವರು ಸಂಸ್ಕೃತ ಕಲಿತು ವೇದಗಳ ವಿಶ್ಲೇಷಣೆ ಮಾಡಿದ್ದರು. 20ನೇ ಶತಮಾನದಲ್ಲಿ ಅಂಬೇಡ್ಕರ್ ಸಂವಿಧಾನದಿಂದ ಮತ್ತೆ ಸಮಾನತೆಗೆ ಮಹತ್ವ ಬಂದಿದೆ. ಎಲ್ಲರೂ ಸೇರಿ ದಲಿತ ಸಮಾಜವನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು’ ಎಂದರು. 
 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ‘ನಮ್ಮ ಹೆಮ್ಮೆಯ ವಚನಾಕರರು’ ಭಿತ್ತಿಪತ್ರವನ್ನು ಜಿಲ್ಲಾ ಫಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಜಿಲ್ಲೆಗೆ ಬಿಡುಗಡೆ ಮಾಡಿದರು. 
 
ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಮಮತಾಜ್‌ಬಿ ತಡಸ, ನಗರಸಭೆ ಅಧ್ಯಕ್ಷೆ ಪಾರ್ವತೆವ್ವ ಹಲಗಣ್ಣನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ವಿ. ಹುಡೇದ, ಜಿಲ್ಲಾ ವಾರ್ತಾಧಿಕಾರಿ ರಂಗನಾಥ, ಮುಖಂಡರಾದ ಪರಮೇಶ್ವರ ಮೇಗಳಮನಿ, ಜಗದೀಶ ಬೆಟಗೇರಿ, ಶಾರದಾ ದೊಡ್ಮನಿ, ಉಡಚಪ್ಪ ಮಾಳಗಿ, ಭೀಮಪ್ಪ ಯಲ್ಲೂರ, ಹೊನ್ನಪ್ಪ, ನಾಗರಾಜ ಮಾಳಗಿ, ಶೇರ್‌ಖಾನ್, ಕೃಷ್ಣ ಮತ್ತಿತರರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.