ADVERTISEMENT

ತಾಲ್ಲೂಕು ರಚನೆಗೆ ಆಗ್ರಹ: ನಾಳೆ ಬಂದ್‌

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 6:43 IST
Last Updated 20 ಮಾರ್ಚ್ 2017, 6:43 IST

ಅಕ್ಕಿಆಲೂರ: ಅಕ್ಕಿಆಲೂರಿಗೆ ತಾಲ್ಲೂಕಿನ ಸ್ಥಾನ ಕಲ್ಪಿಸುವಂತೆ ಒತ್ತಾಯಿಸಿ ಹೋರಾಟ ಚುರುಕುಗೊಳಿಸಲು ತಾಲ್ಲೂಕು ನಿರ್ಮಾಣ ಹೋರಾಟ ಸಮಿತಿ ನಿರ್ಧರಿಸಿದ್ದು, ಇದೇ 20 ರಂದು ಅಕ್ಕಿಆಲೂರ ಬಂದ್‌ಗೆ ಕರೆ ನೀಡಲಾಗಿದೆ.

ರಾಜ್ಯ ಸರ್ಕಾರ ಬಜೆಟ್‌ನಲ್ಲಿ  49 ತಾಲ್ಲೂಕು ರಚಿಸಿದ್ದು, ಅಕ್ಕಿಆಲೂರ ತಾಲ್ಲೂಕು ಸ್ಥಾನದಿಂದ ವಂಚಿತವಾಗಿದೆ. ಕಳೆದ ಎರಡೂವರೆ ದಶಕಗಳಿಂದ ತಾಲ್ಲೂಕು ರಚನೆಗೆ ಒತ್ತಾಯಿಸಿ ಹೋರಾಟ ನಡೆಯುತ್ತಿದೆ.

‘ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಅಕ್ಕಿಆಲೂರಿಗೆ ವಿಶೇಷ ತಹಶೀಲ್ದಾರ್ ನೇಮಕಕ್ಕೆ ಸೂಚಿಸಿದ್ದರು. ಕಾರಣಾಂತರಗಳಿಂದ ಅದು ಆಗಲಿಲ್ಲ. ಇದೀಗ ರಚಿಸಿರುವ ಹೊಸ ತಾಲ್ಲೂಕುಗಳ ಪಟ್ಟಿಯಲ್ಲಿ ಅಕ್ಕಿಆಲೂರ ಕೈಬಿಟ್ಟಿರುವುದು ನಿರಾಸೆ ಮೂಡಿಸಿದೆ.

ಈ ಭಾಗದ ಜನತೆಯ ಕನಸು ನನಸಾಗಿಸುವ ಉದ್ದೇಶದಿಂದ ಹೋರಾಟ ಚುರುಕುಗೊಳಿಸಲು ನಿರ್ಧರಿಸಲಾಗಿದೆ’ ಎಂದು ತಾಲ್ಲೂಕು ಹೋರಾಟ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಸದಾಶಿವ ಬೆಲ್ಲದ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾರ್ಚ್‌ 20 ರಂದು ಬೆಳಿಗ್ಗೆ 10 ಗಂಟೆಗೆ ಸ್ಥಳೀಯ ವಿರಕ್ತಮಠದಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಸಿಂಧೂರ ಸಿದ್ದಪ್ಪ ಸರ್ಕಲ್, ಕಲ್ಲಾಪುರ ಸರ್ಕಲ್, ಬಸ್ ನಿಲ್ದಾಣದ ಮುಖಾಂತರ ಹಾಯ್ದು ಅಂಬೇಡ್ಕರ್ ಸರ್ಕಲ್ ತಲುಪಿ, ಸಮಾವೇಶಗೊಳ್ಳಲಿದೆ. ಬಳಿಕ ಶಿರಸಿ–ಮೊಣಕಾಲ್ಮೂರು ರಾಜ್ಯ ಹೆದ್ದಾರಿ ತಡೆ ನಡೆಯಲಿದೆ’ ಎಂದು ಅವರು ಮಾಹಿತಿ ನೀಡಿದರು.

ವ್ಯಾಪಕ ಬೆಂಬಲ: ಬಂದ್‌ಗೆ ಈ ಭಾಗದ ಮಠಾಧೀಶರು, ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಬಾಳೂರಿನ ಅಡವಿಸ್ವಾಮಿ ಮಠದ ಕುಮಾರ ಸ್ವಾಮೀಜಿ, ಇಲ್ಲಿಯ ವಿರಕ್ತಮಠದ ಶಿವಬಸವ ಸ್ವಾಮೀಜಿ, ಮುತ್ತಿನಕಂತಿಮಠದ ಚಂದ್ರಶೇಖರ ದೇವರು, ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೋತನಹಳ್ಳಿಯ ಸಿದ್ಧಾ ರೂಢ ಮಠದ ಸದ್ಗುರು ಶಂಕರಾನಂದ ಸ್ವಾಮೀಜಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಸ್ಥಳೀಐ ವರ್ತಕರ ಸಂಘ, ದುಂಡಿಬಸವೇಶ್ವರ ಜನಪದ ಕಲಾಸಂಘ, ದುಂಡಿಬಸವೇಶ್ವರ ಜನಪದ ಕಲಾ ಮಹಿಳಾ ಮತ್ತು ಯುವಕ ಸಂಘ, ನೇತಾಜಿ ಸುಭಾಷ್‌ಚಂದ್ರ ಬೋಸ್ ಯುವಕ ಮಂಡಳ, ಸ್ನೇಹಾ ಲೇಡಿಸ್ ಕ್ಲಬ್, ವೀರಭದ್ರೇಶ್ವರ ಯುವಕ ಸಂಘ, ಸಾರ್ವಜನಿಕ ಗಜಾನನೋತ್ಸವ ಸಮಿತಿಗಳು, ದಲಿತ ಸಂಘರ್ಷ ಸಮಿತಿ, ಟೆಂಪೊ ಚಾಲಕರ ಮತ್ತು ಮಾಲಿಕರ ಸಂಘ, ಅಂಜುಮನ್ ಇಸ್ಲಾಂ ಸೇರಿದಂತೆ ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿವೆ.

ಬೆಂಗಳೂರಿಗೆ ನಿಯೋಗ: ಅಕ್ಕಿಆಲೂರ ನೂತನ ತಾಲ್ಲೂಕು ಘೋಷಣೆಗೆ ಒತ್ತಾಯಿಸಿ ಮಾ. 21 ರಂದು ನಿಯೋಗದ ಮೂಲಕ ಬೆಂಗಳೂರಿಗೆ ತೆರಳಿ, ಮುಖ್ಯಮಂತ್ರಿ, ಕಂದಾಯ ಸಚಿವರಿಗೆ ಮನವಿ ಸಲ್ಲಿಸಲು ಹೋರಾಟ ಸಮಿತಿ ನಿರ್ಧರಿಸಿದೆ.

*
ಅಕ್ಕಿಆಲೂರು ಯಾವುದೇ ಕಾರಣಕ್ಕೂ ತಾಲ್ಲೂಕು ಕೇಂದ್ರ ಆಗಲೇಬೇಕು. ತಾಲ್ಲೂಕು ಕೇಂದ್ರ ಘೋಷಣೆ ಆಗುವವರೆಗೂ ಹೋರಾಟ ನಿಲ್ಲದು.
-ಸದಾಶಿವ ಬೆಲ್ಲದ,
ತಾಲ್ಲೂಕು ನಿರ್ಮಾಣ ಹೋರಾಟ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT