ADVERTISEMENT

ದ್ವೇಷ, ವೇಷ ಕಳಚಿ: ಲಮಾಣಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 6:46 IST
Last Updated 11 ನವೆಂಬರ್ 2017, 6:46 IST
ಸಚಿವ ರುದ್ರಪ್ಪ ಲಮಾಣಿ
ಸಚಿವ ರುದ್ರಪ್ಪ ಲಮಾಣಿ   

ಹಾವೇರಿ: ‘ಬಿಜೆಪಿ ನಾಯಕರು ದ್ವೇಷ ಮತ್ತು ವೇಷವನ್ನು ಕಳಚಿ, ಮನುಷ್ಯತ್ವ ರೂಢಿಸಿಕೊಳ್ಳಬೇಕು’ ಎಂದು ಜವಳಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ನಗರದಲ್ಲಿ ಶುಕ್ರವಾರ ಟಿಪ್ಪು ಜಯಂತಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ ಮತ್ತು ಜಗದೀಶ ಶೆಟ್ಟರ್ ಸೋಗಲಾಡಿತನ ಬಿಡಬೇಕು. ಈ ಹಿಂದೆ ಟಿಪ್ಪು ಜಯಂತಿಯಲ್ಲಿ ಟೊಪ್ಪಿ, ಶಾಲು ಧರಿಸಿಕೊಂಡು ತಾವು ಹೇಳಿದ ಮಾತುಗಳನ್ನು ನೆನಪಿಸಿಕೊಳ್ಳಬೇಕು’ ಎಂದರು.

‘ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಒಗ್ಗಟ್ಟು ಮೂಡಿಸಬೇಕಾದ ಬಿಜೆಪಿಯೇ (ಕೇಂದ್ರದಲ್ಲಿ ಸರ್ಕಾರ ಹೊಂದಿದ) ಅಲ್ಪಸಂಖ್ಯಾತರನ್ನು ಹೊರಗಿಡಲು ಯತ್ನಿಸುತ್ತಿದೆ. ಟಿಪ್ಪು ಜಯಂತಿ ವಿರೋಧಿಸುವ ಮೂಲಕ ಮುಸ್ಲಿಮರಲ್ಲಿ ಭಯ ಸೃಷ್ಟಿಸಿ, ಕೋಮುವಾದ ಬಿತ್ತುತ್ತಿದೆ’ ಎಂದು ಆರೋಪಿಸಿದರು.

‘ಅವರ ಪಕ್ಷದಿಂದ ಬಂದವರೇ ರಾಷ್ಟ್ರಪತಿಯಾಗಿದ್ದು, ಈಚೆಗೆ ಟಿಪ್ಪು ದೇಶಪ್ರೇಮವನ್ನು ಶ್ಲಾಘಿಸಿದ್ದಾರೆ. ಆದರೆ, ರಾಷ್ಟ್ರಪತಿ ಮಾತನ್ನೇ ತಿರಸ್ಕರಿಸುವ ಬಿಜೆಪಿಗೆ, ಈ ದೇಶದ ಮೇಲೆ ಎಷ್ಟು ವಿಶ್ವಾಸ ಇರಬಹುದು’ ಎಂದು ಪ್ರಶ್ನಿಸಿದರು.

ADVERTISEMENT

‘ನಂಜನಗೂಡಿಗೆ ಪಚ್ಚೆಲಿಂಗ, ಮೇಲುಕೋಟೆಗೆ ಚಿನ್ನ–ಬೆಳ್ಳಿಯ ಪೂಜಾ ಸಾಮಗ್ರಿ, ಶೃಂಗೇರಿಯಲ್ಲಿ ಶಾರದಾಂಬೆ ಮೂರ್ತಿ ಪ್ರತಿಷ್ಠಾಪನೆ, ಅಡ್ಡಪಲ್ಲಕ್ಕಿಗಳು, ಬ್ರಾಹ್ಮಣರಿಗೆ ದಾಸೋಹ ಸೇರಿದಂತೆ ಹಿಂದೂ ಧರ್ಮಕ್ಕೆ ಟಿಪ್ಪು ಹಲವಾರು ಕೊಡುಗೆಗಳನ್ನು ನೀಡಿದ್ದಾರೆ’ ಎಂದರು.

‘ಸದ್ಯ ಯಾವುದೇ ವಿಷಯ ಹಾಗೂ ಕೆಲಸ ಇಲ್ಲದ ಬಿಜೆಪಿಯವರು ಹಿಂದೂ ಮತ್ತು ಮುಸ್ಲಿಂ ಮಧ್ಯೆ ಗದ್ದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಹೀಗಾಗಿ ಈ ಬಾರಿ ಟಿಪ್ಪು ಜಯಂತಿಗೆ ಮೆರವಣಿಗೆ ಬೇಡ ಎಂದು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.