ADVERTISEMENT

ನಕಲು ರಹಿತ ಪರೀಕ್ಷೆಗೆ ಕ್ರಮ: ಡಿ.ಸಿ

ಮಾರ್ಚ್‌ 30ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: 60 ಪರೀಕ್ಷಾ ಕೇಂದ್ರಗಳಿಗೆ ಸಿ.ಸಿ ಟಿವಿ ಕ್ಯಾಮೆರಾ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 6:37 IST
Last Updated 24 ಮಾರ್ಚ್ 2017, 6:37 IST
ಹಾವೇರಿಯ ಜಿಲ್ಲಾಡಳಿತ ಸಭಾಭವನದಲ್ಲಿ ಬುಧವಾರ ನಡೆದ ‘ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಪೂರ್ವಸಿದ್ಧತಾ ಸಭೆ’ಯಲ್ಲಿ ಜಿಲ್ಲಾಧಿಕಾರಿ ವೆಂಕಟೇಶ ಎಂ.ವಿ. ಮಾತನಾಡಿದರು. ಡಿಡಿಪಿಐ ಶಿವನಗೌಡ ಪಾಟೀಲ ಇದ್ದರು
ಹಾವೇರಿಯ ಜಿಲ್ಲಾಡಳಿತ ಸಭಾಭವನದಲ್ಲಿ ಬುಧವಾರ ನಡೆದ ‘ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಪೂರ್ವಸಿದ್ಧತಾ ಸಭೆ’ಯಲ್ಲಿ ಜಿಲ್ಲಾಧಿಕಾರಿ ವೆಂಕಟೇಶ ಎಂ.ವಿ. ಮಾತನಾಡಿದರು. ಡಿಡಿಪಿಐ ಶಿವನಗೌಡ ಪಾಟೀಲ ಇದ್ದರು   

ಹಾವೇರಿ: ‘ಇದೇ 30ರಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ  ಪರೀಕ್ಷೆಯನ್ನು ಜಿಲ್ಲೆಯಲ್ಲಿ ಅತ್ಯಂತ ಪಾರದರ್ಶಕವಾಗಿ,ಯಾವುದೇ ನಕಲು ನಡೆಯದಂತೆ ನಡೆಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ ಎಂ.ವಿ. ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಡಳಿತ ಸಭಾಭವನದಲ್ಲಿ ಬುಧವಾರ ನಡೆದ ‘ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಪೂರ್ವಸಿದ್ಧತಾ ಸಭೆ’ಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯ 70 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 22,537 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ವೀಕ್ಷಕರ ತಂಡವು ಸತತವಾಗಿ ಭೇಟಿ ನೀಡಿ, ವ್ಯವಸ್ಥಿತವಾಗಿ ಪರೀಕ್ಷೆ ನಡೆಯಲು ಕ್ರಮ ಕೈಗೊಳ್ಳಬೇಕು’ ಎಂದರು.

‘ಪ್ರಶ್ನೆ ಪತ್ರಿಕೆ ಅಥವಾ ಉತ್ತರ ಪತ್ರಿಕೆಗಳು ಯಾವುದೇ ಕಾರಣಕ್ಕೂ ನಕಲು ಆಗದಂತೆ ಕಟ್ಟೆಚ್ಚರ ವಹಿಸಬೇಕು.  ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ನಿಷೇಧಿಸಲಾಗಿದೆ’ ಎಂದು ತಿಳಿಸಿದರು.

‘ನಿಷೇಧಿತ ಪ್ರದೇಶದಲ್ಲಿ ಸಾರ್ವಜನಿಕರ ಪ್ರವೇಶ ಹಾಗೂ ಝರಾಕ್ಸ್ ಅಂಗಡಿಗಳನ್ನು ತೆಗೆಯುವಂತಿಲ್ಲ, ಶಾರೀರಿಕ ನ್ಯೂನ್ಯತೆ ಇರುವ ವಿದ್ಯಾರ್ಥಿಗಳಿಗೆ ನೆಲದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಪರೀಕ್ಷೆ ಆರಂಭದ ಮುನ್ನ 15 ನಿಮಿಷಗಳ ಒಳಗೇ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಬೇಕು’ ಎಂದರು.

‘ಪ್ರಶ್ನೆ ಪತ್ರಿಕೆ ಬಂಡಲ್‌ಗಳ ವಿತರಣೆ, ಉತ್ತರ ಪತ್ರಿಕೆ ಸಂಗ್ರಹ, ರವಾನೆ ಕುರಿತಂತೆ ಪರೀಕ್ಷಾ ನಿಯಮಾವಳಿಯಂತೆ ಕ್ರಮ ವಹಿಸಬೇಕು. ಯಾವುದೇ ಕಾರಣಕ್ಕೂ ಆಯಾ ವಿಷಯ ಶಿಕ್ಷಕರನ್ನು ಆಯಾ ವಿಷಯ ಪರೀಕ್ಷೆಯ ಕೊಠಡಿಗೆ ಮೇಲ್ವಿಚಾರಕರಾಗಿ ನೇಮಿಸುವಂತಿಲ್ಲ’ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವನಗೌಡ ಪಾಟೀಲ್‌ ಮಾತನಾಡಿ, ‘70 ಪರೀಕ್ಷಾ ಕೇಂದ್ರಗಳ ಪೈಕಿ 60 ಪರೀಕ್ಷಾ ಕೇಂದ್ರಗಳಿಗೆ ‘ಸಿ.ಸಿ ಟಿ.ವಿ ಕ್ಯಾಮೆರಾ’ ಅಳವಡಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಒಬ್ಬರಂತೆ ಶಿಕ್ಷಣ ಇಲಾಖೆ ಹೊರತು ಪಡಿಸಿ, ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ವೀಕ್ಷರನ್ನಾಗಿ ನಿಯೋಜಿಸಲಾಗಿದೆ’ ಎಂದರು.

‘ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಇಬ್ಬರು ಜಾಗೃತದಳದ ಸಿಬ್ಬಂದಿಯನ್ನು ನಿಯೋಜಿಸಿದೆ. ಪರೀಕ್ಷೆಯಲ್ಲಿ ನಕಲು ಮಾಡುವುದು ಅಥವಾ ಬದಲಿ ವ್ಯಕ್ತಿ ಪರೀಕ್ಷೆ ಬರೆಯುವ ಬಗ್ಗೆ ತೀವ್ರ ತಪಾಸಣೆ ನಡೆಸಲಾಗುವುದು. ಪ್ರತಿದಿನ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30ರ ವರೆಗೆ ಪರೀಕ್ಷೆಗಳು ನಡೆಯಲಿವೆ.

ಪರೀಕ್ಷೆ ಆರಂಭವಾದ 30 ನಿಮಿಷಗಳ ನಂತರಬಂದ ವಿದ್ಯಾರ್ಥಿಗಳಿಗೆ, ಪರೀಕ್ಷಾ ಕೊಠಡಿಗೆ ಪ್ರವೇಶವಿಲ್ಲ’ ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಜಿ.ಗೋವಿಂದಸ್ವಾಮಿ ಇದ್ದರು.

*
ಪ್ರತಿ ದಿನ ಲಾಟರಿ ಮೂಲಕ ಕೊಠಡಿಯ ಮೇಲ್ವಿಚಾರಕರನ್ನು ನೇಮಕ ಮಾಡಲಾಗುವುದು. ನಕಲು ಆಗದಂತೆ ಕಟ್ಟೆಚ್ಚರ ವಹಿಸಬೇಕು.
-ಡಾ.ಎಂ.ವಿ.ವೆಂಕಟೇಶ,
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT