ADVERTISEMENT

ನಿಲ್ಲದ ಪಶುವೈದ್ಯಕೀಯ ನೌಕರರ ಮುಷ್ಕರ, ಬೈಕ್‌ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 19 ಮೇ 2017, 6:01 IST
Last Updated 19 ಮೇ 2017, 6:01 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಶು ವೈದ್ಯಕೀಯ ಇಲಾಖೆಯ ಅಧಿಕಾರಿಗಳು, ನೌಕರರು ಮತ್ತು ಸಿಬ್ಬಂದಿ ಹಾವೇರಿಯಲ್ಲಿ ಗುರುವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಶು ವೈದ್ಯಕೀಯ ಇಲಾಖೆಯ ಅಧಿಕಾರಿಗಳು, ನೌಕರರು ಮತ್ತು ಸಿಬ್ಬಂದಿ ಹಾವೇರಿಯಲ್ಲಿ ಗುರುವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು   

ಹಾವೇರಿ: ಪಶು ವೈದ್ಯಕೀಯ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಅಂತಿಮ ಅಧಿಸೂಚನೆ ಹೊರಡಿಸುವಂತೆ ಆಗ್ರಹಿಸಿ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆಸುತ್ತಿರುವ ಪ್ರತಿಭಟನೆಯು ಗುರುವಾರ ಮೂರು ದಿನ ಪೂರೈಸಿದ್ದು, ನಗರದ ಪಶು ಆಸ್ಪತ್ರೆಯಿಂದ ಜಿಲ್ಲಾಡಳಿತದ ವರೆಗೆ ಬೈಕ್‌ ರ್‍ಯಾಲಿ ನಡೆಸಿದರು. 

ಕರ್ನಾಟಕ ಪಶುವೈದ್ಯಕೀಯ ಸಂಘ, ಕರ್ನಾಟಕ ರಾಜ್ಯ ಪಶುವೈದ್ಯಕೀಯ ಪರೀಕ್ಷಕರ ಸಂಘ ಹಾಗೂ ಕರ್ನಾಟಕ ರಾಜ್ಯ ಪಶುವೈದ್ಯಕೀಯ ಸಹಾಯಕರ ಸಂಘದ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಜಿಲ್ಲೆಯ  ಪಶು ಆಸ್ಪತ್ರೆಗಳನ್ನು ಬಂದ್‌ ಮಾಡಿ, ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರಿಸಿದ್ದಾರೆ.

ಪಶು ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕಿರಣಕುಮಾರ ಕೊಪ್ಪದ ಮಾತನಾಡಿ, ‘ಏಪ್ರಿಲ್‌ನಲ್ಲಿ ನಡೆದ ‘ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ’ದ ವೇಳೆ ಸಚಿವರು ನೀಡಿದ ಭರವಸೆ ತಿಂಗಳು ಕಳೆದರೂ,  ಈಡೇರಿಲ್ಲ. ಜೊತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ಜಿಲ್ಲೆಯ ಎಲ್ಲ ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯ ಮತ್ತು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಬಂದ್‌ ಮಾಡಿ, ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸುತ್ತಿದ್ದೇವೆ’ ಎಂದರು.

ADVERTISEMENT

ಡಾ.ರಾಜೀವ್ ಕೂಲೇರ, ಡಾ.ಪರಮೇಶ ಎಲೆದಹಳ್ಳಿ, ಡಾ. ಬಿ.ಎಚ್.ಜಲ್ಲೇರ, ಡಾ.ಯುವರಾಜ ಚವ್ಹಾಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

3 ದಿನದಿಂದ  ಆಸ್ಪತ್ರೆಗಳು ಬಂದ್
ಪ್ರತಿಭಟನೆಯ ಕಾರಣ ಮೂರು ದಿನದಿಂದ ಜಿಲ್ಲೆಯ 7 ತಾಲ್ಲೂಕು ಪಶುವೈದ್ಯಕೀಯ ಆಸ್ಪತ್ರೆಗಳು, 71 ಪಶು ಚಿಕಿತ್ಸಾಲಯಗಳು, 55 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು, 7 ಸಂಚಾರಿ ಪಶು ವೈದ್ಯಕೀಯ ಚಿಕಿತ್ಸಾ ಘಟಕಗಳು ಬಹುತೇಕ ಕಾರ್ಯ ಸ್ಥಗಿತಗೊಳಿಸಿವೆ.

ಜಿಲ್ಲೆಯಲ್ಲಿ ಈಗಾಗಲೇ ಪಶು ವೈದ್ಯರ ಕೊರತೆ ಇದ್ದು, ಇತರ ಇಲಾ ಖೆಗೆ ನಿಯೋಜನೆಗೊಂಡವರನ್ನು ಸರ್ಕಾರದ ನಿಯಮಾಳಿಯಂತೆ ವಾಪಸ್ ಕರೆಯಿಸಿ ನೆರವಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.