ADVERTISEMENT

ನೀರಿಗಾಗಿ ಪರದಾಟ, ರಸ್ತೆ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 6:33 IST
Last Updated 24 ಮಾರ್ಚ್ 2017, 6:33 IST

ರಾಣೆಬೆನ್ನೂರು: ‘ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು’ ಎಂದು ಒತ್ತಾಯಿಸಿ ನಗರದ ದೊಡ್ಡಪೇಟೆಯ ಓಂ ವೃತ್ತ ಹಾಗೂ ಕರಡಿಯವರ ಓಣಿಯ ಮಹಿಳೆಯರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಗುರುವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ದೊಡ್ಡಪೇಟೆಯ ರಸ್ತೆ ಎರಡು  ಗಂಟೆ ಬಂದ್ ಮಾಡಿ, ನಗರಸಭೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ತಡೆಯಿಂದ ವಾಹನಗಳ ಓಡಾಟಕ್ಕೆ ತೊಂದರೆ ಆಯಿತು.

ಪ್ರತಿಭಟನೆ ನೇತೃತ್ವ ವಹಿಸಿದ ನಾಗವ್ವ ಹಿರೇಬಿದರಿ ಮತ್ತು ಗೌರಮ್ಮ ಬಳ್ಳಾರಿ ಮಾತನಾಡಿ, ‘ಕಳೆದ 8 ದಿನದಿಂದ ಕೊಳವೆ ಬಾವಿ ಕೆಟ್ಟಿದೆ. ಕೊಳವೆ ಬಾವಿ ದುರಸ್ತಿ ಬಗ್ಗೆ ನಗರಸಭೆ ಪೌರಾಯಕ್ತರಿಗೂ ಮತ್ತು 9ನೇ ವಾರ್ಡ್‌ನ ನಗರಸಭೆ ಸದಸ್ಯ ಶಿವರಾಜ ಬ್ಯಾಡಗಿ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

‘ಅಧಿಕಾರಿಗಳು ಕೂಡಲೇ ನೀರು ಪೂರೈಸುವ ಕ್ರಮಕ್ಕೆ ಮುಂದಾಗದಿದ್ದರೆ  ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯ’ ಎಂದು ಎಚ್ಚರಿಸಿದರು.
‘ಮಕ್ಕಳ ಪರೀಕ್ಷೆಗಳು ಪ್ರಾರಂಭವಾಗಿದ್ದು, ಓದುವುದನ್ನು ಬಿಟ್ಟು ನೀರು ಹಿಡಿಯುವಂತಾಗಿ ಅಭ್ಯಾಸಕ್ಕೆ ತೀವ್ರ ತೊಂದರೆಯಾಗಿದೆ’ ಎಂದರು.

ಕೊಳವೆ ಬಾವಿಯಿಂದ ಸಣ್ಣ ಪ್ರಮಾಣದಲ್ಲಿ ಬರುವುದರಿಂದ ನೀರು ಸಾಕಾಗುತ್ತಿಲ್ಲ.  ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಕರಡಿಯವರ ಓಣಿ ಮತ್ತು ಓಂ ವೃತ್ತದ ಬಳಿ ಕೊಳವೆ ಬಾವಿ ಕೊರೆಸಿ ಸಮರ್ಪಕ ನೀರು ಬಿಡುವಂತೆ ಆಗ್ರಹಿಸಿದರು.

ಜನಪ್ರತಿನಿಧಿಗಳು ಮುಂದಿನ ಚುನಾವಣೆಗೆ ಮತ ಕೇಳಲು ಬಂದಾಗ ಮತದಾನ ಮಾಡದೇ ಚುನಾವಣೆಗೆ ಬಹಿ ಷ್ಕಾರ ಹಾಕುತ್ತೇವೆ ಎಂದು
ಎಚ್ಚರಿಸಿದರು. ನಗರಸಭೆ ಎಂಜಿನಿಯರ್‌ ಎಂ.ಆರ್ ಗಿರಡ್ಡಿ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿದರು.

‘ಪಂಪಸೆಟ್‌ ಸರಿಪಡಿಸಿ ನೀರು ಬೀಡುವ ವ್ಯವಸ್ಥೆ ಮಾಡಲಾಗುವುದು. ದ್ಯಾಮವ್ವನ ಗುಡಿಯ ಬಳಿ ಕೊಳವೆ ಬಾವಿ ಕೊರೆಸಲಾಗುವುದು’ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ನೀಲವ್ವ ಬಳ್ಳಾರಿ, ಸುನೀತಾ ಬಣಕಾರ, ಅಕ್ಕಮ್ಮ ಅಂಗಡಿ, ಶಶಿಕಲಾ ರೊಡ್ಡನವರ, ರೇಣುಕಾ ಪಿ, ಶ್ಯಾಲಿನಿ ಅದರಗಂಜಿ, ಶಂಕ್ರಮ್ಮ ಹರಿಹರ, ಶಂಕ್ರವ್ವ ಬಳ್ಳಾರಿ, ಗೌರಮ್ಮ ಹರಿಹರ, ಗಿರಿಜವ್ವ ಮೋಟೆಬೆನ್ನೂರ, ಶಾಂತವ್ವ ಮುಳವಳ್ಳಿ, ಗೀತಮ್ಮ ಹರಿಹರ, ಶ್ರೀದೇವಿ ಬಗಾಡೆ, ಎಚ್.ಎಂ.ತಿಪ್ಪಯ್ಯ, ಚಿಕ್ಕಪ್ಪ ಹೊನ್ನತ್ತಿ, ಪುಟ್ಟಪ್ಪ ಕರಡಿ, ಕಿರಣ ಉದಗಟ್ಟಿ, ವಿಜಯ ಹರಿಹರ, ರಾಜು ಹರಿಹರ, ಮಾಲತೇಶ ಹೊನ್ನತ್ತಿ, ಪ್ರಕಾಶ ವೈ, ಮಂಜಪ್ಪ ಗೌರಕ್ಕಳವರ ಮತ್ತು ಶಾಲಾ ಮಕ್ಕಳು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.