ADVERTISEMENT

ನೋಟು ರದ್ದತಿ: ಜನ ವಿರೋಧಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 6:41 IST
Last Updated 4 ಮಾರ್ಚ್ 2017, 6:41 IST

ಅಕ್ಕಿಆಲೂರ: ಕೇಂದ್ರ ಸರ್ಕಾರ ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಜನಸಾಮಾನ್ಯರನ್ನು ತೊಂದ ರೆಗೆ ಸಿಲುಕಿಸಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನೋಟು ರದ್ದತಿ ಮಾಡಿರುವ ಕ್ರಮ ಜನವಿರೋಧಿ ಎಂದು ಶಾಸಕ ಮನೋಹರ ತಹಸೀಲ್ದಾರ್ ಹರಿಹಾಯ್ದರು.

ಇಲ್ಲಿಯ ಸಿಂಧೂರ ಸಿದ್ದಪ್ಪ ವೃತ್ತದಲ್ಲಿ ಶುಕ್ರವಾರ ಕೇಂದ್ರ ಸರ್ಕಾರದ ನೋಟು ರದ್ದತಿ ನಿರ್ಧಾರ ಹಾಗೂ ದುರಾಡಳಿತ ಖಂಡಿಸಿ ಸ್ಥಳೀಯ ಬ್ಲಾಕ್‌ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ‘ಸತ್ಯಮೇವ ಜಯತೆ’ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದೇಶಿ ಬ್ಯಾಂಕುಗಳಲ್ಲಿನ ಕಪ್ಪು ಹಣ ಭಾರತಕ್ಕೆ ತರುತ್ತೇವೆ. ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸುತ್ತೇವೆ ಎನ್ನುವ ಬಣ್ಣ ಬಣ್ಣದ ಮಾತುಗಳಿಂದ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ಅವರದ್ದು ಇದುವರೆಗೂ ಸುಳ್ಳು ಮಾತನಾಡಿದ್ದೇ ದೊಡ್ಡ ಸಾಧನೆ.

ಬಡವರು, ದೀನ–ದಲಿತರು, ಕೃಷಿಕರು, ಅಲ್ಪಸಂಖ್ಯಾತರ ಬಗೆಗೆ ಮೋದಿ ಅವರಿಗೆ ಯಳ್ಳಷ್ಟೂ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿರುವ ಬಿಜೆಪಿ ಕಾಂಗ್ರೆಸ್ ಬಗೆಗೆ ಇಲ್ಲಸಲ್ಲದ ಸುಳ್ಳು ಆರೋಪ ಮಾಡುತ್ತಿದೆ ಎಂದರು.

ಇದೇ ವೇಳೆ ಕೇಂದ್ರ ಸರ್ಕಾರದ ದುರಾಡಳಿತ, ನೋಟು ರದ್ದತಿ ಕ್ರಮ ಖಂಡಿಸಿ ಸ್ಥಳೀಯ ಉಪತಹಶೀಲ್ದಾರ್ ಆರ್.ವೈ.ಬೋಗಾರ ಅವರ ಮೂಲಕ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಟಾಕನಗೌಡ ಪಾಟೀಲ, ರಾಘವೇಂದ್ರ ತಹಶೀಲ್ದಾರ್, ಪ್ರಮುಖ ರಾದ ರಾಜಶೇಖರ ಸಾಲಿಮಠ, ಎ.ಎಂ. ಪಠಾಣ, ಯಾಸೀರ್‌ಖಾನ ಪಠಾಣ, ಯಾಸೀರ್ಅರಾಫತ್ ಮಕಾನ ದಾರ, ಬಷೀರಖಾನ ಪಠಾಣ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.