ADVERTISEMENT

ಪೋಲಿಯೊ: 1.99 ಲಕ್ಷ ಮಕ್ಕಳಿಗೆ ಲಸಿಕೆ ಗುರಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 6:03 IST
Last Updated 25 ಏಪ್ರಿಲ್ 2017, 6:03 IST

ಹಾವೇರಿ: ‘2ನೇ ಸುತ್ತಿನ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ ಇದೇ 30 ರಿಂದ ನಡೆಯಲಿದ್ದು, 5ವರ್ಷದ ಒಳಗಿನ ಯಾವುದೇ ಮಗು ವಂಚಿತವಾಗದಂತೆ ಎಚ್ಚರ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್‌.ಎಂ.ವಿ ಸೂಚನೆ ನೀಡಿದರು.ಎರಡನೇ ಸುತ್ತಿನ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮದ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

‘ನಿಗದಿತ ಗುರಿಯಂತೆ ಶೇ 100ರಷ್ಟು ಮಕ್ಕಳಿಗೆ ಲಸಿಕೆ ಹಾಕಲೇಬೇಕು. ಮಕ್ಕಳಿಗೆ ಲಸಿಕೆ ಹಾಕಿಸಲು ಹಿಂದೇಟು ಹಾಕುವ ಪೋಷಕರು ಹಾಗೂ ಮಕ್ಕಳನ್ನು ಕೌನ್ಸೆಲಿಂಗ್‌ ಮೂಲಕ ಮನವೊಲಿಸಬೇಕು’ ಎಂದು ಸಲಹೆ ನೀಡಿದರು.‘ಬೇಸಿಗೆ ರಜೆಯ ಕಾರಣ ಮಕ್ಕಳು ಬೇರೆ ಊರುಗಳಿಗೆ ತೆರಳಿರುತ್ತಾರೆ. ಬೇರೆ ಪ್ರದೇಶದಿಂದ ಮಕ್ಕಳು ಬಂದಿರುತ್ತಾರೆ. ಆದರೆ, ಯಾವ ಮಗುವೂ ಲಸಿಕೆಯಿಂದ ವಂಚಿತವಾಗಬಾರದು. ಪೋಲಿಯೊ ಲಸಿಕೆ ಕುರಿತಂತೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಅಂಗನವಾಡಿ ಹಾಗೂ ಶಾಲೆಗಳು ಪೋಲಿಯೊ ದಿನದಂದು ಕಾರ್ಯನಿರ್ವಹಿಸಬೇಕು’ ಎಂದು ಅವರು ಸೂಚಿಸಿದರು.

‘ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಆಶಾ ಕಾರ್ಯಕರ್ತೆಯರು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮನೆ ಮನೆಗೆ ತೆರಳಿ ಪೋಲಿಯೊ ಹನಿ ಹಾಕಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳಬೇಕು. ಗ್ರಾಮ ಮತ್ತು ಪಟ್ಟಣ ಪಂಚಾಯ್ತಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಅಂದು, ವಿದ್ಯುತ್ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದರು.

ADVERTISEMENT

‘ಪೋಲಿಯೊ ಹನಿ ಹಾಕಿಸುವುದರಿಂದ ಅಡ್ಡಪರಿಣಾಮ ಆಗುತ್ತದೆ’ ಎಂದು ಕೆಲವರು ವದಂತಿ ಹಬ್ಬಿಸುತ್ತಾರೆ. ಇವುಗಳಿಗೆ ಯಾರೂ ಕಿವಿಗೊಡಬಾರದು. ವೈದ್ಯಕೀಯ ತಂಡವು ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ನಿಭಾಯಿಸಬೇಕು.’ ಎಂದರು.ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ಜಯಾನಂದ ಮಾತನಾಡಿ, ‘ಜಿಲ್ಲೆಯ 1,99,140 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹಾಕಿಕೊಳ್ಳಲಾಗಿದೆ. ಲಸಿಕೆಗಾಗಿ ಜಿಲ್ಲೆಯ ಏಳು ತಾಲೂಕಿನ 67 ಪ್ರಾಥಮಿಕ ಆರೋಗ್ಯ ಕೇಂದ್ರ, 307 ಕಿರಿಯ ಆರೋಗ್ಯ ಕೇಂದ್ರಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. 77 ಶಿತಲೀಕರಣ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸ ಲಾಗಿದೆ. 266 ಅತಿಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ, 930 ಬೂತ್‌ಗಳನ್ನು ಸ್ಥಾಪಿಸಲು ಉದ್ದೇಶಿಸ ಲಾಗಿದೆ, 1,860ಲಸಿಕಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. 186 ಮೇಲುಸ್ತುವಾರಿ ಅಧಿಕಾರಿಗಳು, 227 ಕಿರಿಯ ಆರೋಗ್ಯ ಸಹಾಯಕರು, 1,156 ಆಶಾ ಹಾಗೂ 1,899 ಅಂಗವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ’ ಎಂದರು.

‘ಲಸಿಕಾ ಕಾರ್ಯಕ್ರಮಕ್ಕೆ 99 ವಾಹನಗಳ ಅವಶ್ಯಕತೆ ಇದೆ’ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಬಡ್ಡಿ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು, ತಾಲ್ಲೂಕು ಆರೋಗ್ಯ ಅಧಿಕಾರಿಗಳು ಪೂರ್ವ ಸಿದ್ಧತಾ ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.