ADVERTISEMENT

ಬಿಜೆಪಿಯಿಂದ ಪಶ್ಚಾತ್ತಾಪ ಯಾತ್ರೆ: ಪಾಟೀಲ್‌

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 9:29 IST
Last Updated 24 ಡಿಸೆಂಬರ್ 2017, 9:29 IST

ಹಾವೇರಿ: ‘ರೈತರ ಸಾಲಮನ್ನಾ. ಮಹದಾಯಿ ನೀರು ಕೊಡಿಸಲಾಗದ ಬಿಜೆಪಿಯು ‘ಪರಿವರ್ತನೆ’ಯ ಹೆಸರಿನಲ್ಲಿ ‘ಪಶ್ಚಾತ್ತಾಪ’ ಯಾತ್ರೆ ಮಾಡುತ್ತಿದೆ’ ಎಂದು ಸಚಿವ ಎಚ್.ಕೆ.ಪಾಟೀಲ್‌ ಲೇವಡಿ ಮಾಡಿದರು.

ನಗರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮುಂದಿನ ವರ್ಷ ಹಾವೇರಿ ಜಿಲ್ಲೆಯಲ್ಲಿ ಸಂಪೂರ್ಣ ಬಯಲು ಶೌಚ ಮುಕ್ತ, ಸಂಪೂರ್ಣ ಶುದ್ಧ ಕುಡಿಯುವ ನೀರು ಯುಕ್ತ ಜಿಲ್ಲೆಯಾಗಿ ಮಾಡಲಾಗುವುದು’ ಎಂದರು.

ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ‘ಸಿ.ಎಂ. ಸಿದ್ದರಾಮಯ್ಯ ಅವರ ಅಭಿವೃದ್ಧಿ ಚಿಂತನೆಯಿಂದ ಹಾವೇರಿ ಯ ಚಿತ್ರಣವೇ ಬದಲಾಗತ್ತಿದೆ. ಹೆಗ್ಗೇರಿ ಕೆರೆಗೆ ಮುಂದಿನ ವರ್ಷ ತುಂಗಾ ಮೇಲ್ದಂಡೆ ಯೋಜನೆ ನೀರು ಹರಿದು ಬರಲಿದ್ದು, ನಗರಕ್ಕೆ 24*7 ಕುಡಿಯುವ ನೀರು ಆರಂಭಿಸಲಾಗುವುದು’ ಎಂದರು.

ADVERTISEMENT

ವಿಧಾನ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ, ಸರ್ಕಾರದ ದೆಹಲಿ ಹೆಚ್ಚುವರಿ ವಿಶೇಷ ಪ್ರತಿನಿಧಿ ಕೆ. ಸಲೀಂ ಅಹ್ಮದ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ್‌ ನೀರಲಗಿ, ಮಾಜಿ ಶಾಸಕರಾದ ಅಜ್ಜಂಪೀರ್ ಖಾದ್ರಿ, ಬಿ.ಸಿ. ಪಾಟೀಲ್, ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ., ಜಿಲ್ಲಾ ಪಂಚಾಯ್ತಿ ಸಿಇಓ ಕೆ.ಬಿ. ಅಂಜನಪ್ಪ ಇದ್ದರು. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಸರ್ಕಾರದ ಸಾಧನೆಗಳ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು.

ಆರು ಅಭ್ಯರ್ಥಿಗಳನ್ನು ಗೆಲ್ಲಿಸಿ: ರಾಣೆಬೆನ್ನೂರಿನಿಂದ ಕೆ.ಬಿಇ. ಕೋಳಿವಾಡ, ಹಾವೇರಿಯಿಂದ ರುದ್ರಪ್ಪ ಲಮಾಣಿ, ಹಾನಗಲ್‌ನಿಂದ್‌ ಮನೋಹರ ತಹಸೀಲ್ದಾರ್, ಬ್ಯಾಡಗಿ ಯಿಂದ ಬಸವರಾಜ ಶಿವಣ್ಣ ನವರ, ಹಿರೇಕೆರೂರಿನಿಂದ ಬಿ.ಸಿ. ಪಾಟೀಲ್ ಹಾಗೂ ಸವಣೂರು–ಶಿಗ್ಗಾವಿಯಿಂದ ಅಜ್ಜಂಪೀರ್ ಖಾದ್ರಿ ಸೇರಿದಂತೆ ಆರಕ್ಕೆ ಆರು ಮಂದಿಯನ್ನು ಗೆಲ್ಲಿಸಿ ಕಳುಹಿಸಿ ಎಂದು ಸಿದ್ದರಾಮಯ್ಯ ಹೇಳಿದರು.

ಕಾಗಿನೆಲೆ: ಮುಖ್ಯಮಂತ್ರಿ ಭೇಟಿ

ಬ್ಯಾಡಗಿ: ತಾಲ್ಲೂಕಿನ ಕಾಗಿನೆಲೆಯ ಕನಕ ಗುರುಪೀಠಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಶನಿವಾರ ಸಂಜೆ ಭೇಟಿ ನೀಡಿದರು. ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಜೊತೆ ಸುಮಾರು ಒಂದು ತಾಸಿಗೂ ಹೆಚ್ಚು ಸಮಾಲೋಚನೆ ನಡೆಸಿದರು. ಕಾಗಿನೆಲೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿದರು. ಬಳಿಕ ಪರಿಸರಸ್ನೇಹಿ ಉದ್ಯಾನಕ್ಕೆ ತೆರಳಿ ಅಲ್ಲಿ ಸಂಗೀತ ಕಾರಂಜಿ ವೀಕ್ಷಿಸಿದರು.

ಹೊಸದುರ್ಗ ತಾಲ್ಲೂಕು ಕೆಲ್ಲೋಡ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ, ಸಚಿವ ಎಚ್. ಆಂಜನೇಯ, ರುದ್ರಪ್ಪ ಲಮಾಣಿ, ಶಾಸಕ ಬಸವರಾಜ ಶಿವಣ್ಣನವರ ,ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಜಂಪೀರ್‌ ಖಾದ್ರಿ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಲ್ಲೇಶಪ್ಪ ಹೊರಪೇಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.