ADVERTISEMENT

ಬಿಸಿಲಿನ ಝಳಕ್ಕೆ ತತ್ತರಿಸಿದ ಜನ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 8:36 IST
Last Updated 21 ಏಪ್ರಿಲ್ 2017, 8:36 IST
ಹಾವೇರಿ ಸಮೀಪದ ರಸ್ತೆಯೊಂದರಲ್ಲಿ ಬಿಸಿಲಿನ ಝಳ ತಾಳದೇ ಟ್ರ್ಯಾಕ್ಟರ್‌ನಲ್ಲಿ ಕೊಡೆ ಹಿಡಿದು ಪ್ರಯಾಣಿಸಿದ ಜನ
ಹಾವೇರಿ ಸಮೀಪದ ರಸ್ತೆಯೊಂದರಲ್ಲಿ ಬಿಸಿಲಿನ ಝಳ ತಾಳದೇ ಟ್ರ್ಯಾಕ್ಟರ್‌ನಲ್ಲಿ ಕೊಡೆ ಹಿಡಿದು ಪ್ರಯಾಣಿಸಿದ ಜನ   

ಹಾವೇರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಬಿಸಿಲಿನ ಝಳಕ್ಕೆ ಜನ ತತ್ತರಿಸಿ ಹೋಗಿದ್ದು,  ತಂಪು ಪಾನೀಯ, ಫ್ಯಾನ್, ಏರ್ ಕೂಲರ್‌ ಹಾಗೂ ಮರಗಳ ನೆರಗಳಿಗೆ ಮೊರೆ ಹೋಗುತ್ತಿದ್ದಾರೆ.ಬೆಳಿಗ್ಗೆ 10ರಿಂದ ಏರುಗತಿ ಕಾಣುವ ಬಿಸಿಲು, ಮಧ್ಯಾಹ್ನ ಹೊತ್ತಿಗೆ ಉಚ್ಛ್ರಾಯ ಸ್ಥಿತಿ ತಲುಪಿರುತ್ತದೆ. ಬಿಸಿಲಿನ ಝಳಕ್ಕೆ ಕೆಲವು ಜನ ಮಜ್ಜಿಗೆ, ಪಾನಕ, ಲಸ್ಸಿ ಸೇರಿದಂತೆ ತಂಪು ಪಾನೀಯಗಳಿಗೆ ಮೊರೆ ಹೋದರೆ, ಮತ್ತೆ ಕೆಲವರು ಫ್ಯಾನ್, ಏರ್ ಕೂಲರ್‌ಗಳ ಮೊರೆ ಹೋಗುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿ ಹೈರಾಣಾದ ಜನ ಗುಡಿ, ಕಟ್ಟೆ ಹಾಗೂ ಮರದ ನೆರವಳನ್ನು ಆಶ್ರಯಿಸುತ್ತಿದ್ದಾರೆ. ನಗರದ ಪುರಸಿದ್ದೇಶ್ವರ ಪಾರ್ಕ್‌ ಮರಗಳ ನೆರಳು ಅರಸಿ ವಿರಮಿಸುವ ಜನರನ್ನು ಮಧ್ಯಾಹ್ನ ಕಾಣಬಹುದು.ವಿದ್ಯಾರ್ಥಿಗಳಂತೂ ಬಿಸಿಲಿನ ಝಳ ದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡು ತ್ತಿದ್ದಾರೆ. ಹಲವರು ಕೊಡೆಗಳನ್ನು ಹಿಡಿ ದುಕೊಂಡೇ ಸಂಚರಿಸುತ್ತಿದ್ದಾರೆ. ವಿದ್ಯಾ ರ್ಥಿನಿಯರು ತಲೆಯ ಮೇಲೆ ಶಾಲು ಹಾಕಿಕೊಂಡು ಓಡಾಡುತ್ತಾರೆ.

ಬೆಳಿಗ್ಗೆ 10ಕ್ಕೆ ಕಚೇರಿ ಸೇರುವ ಉದ್ಯೋಗಸ್ಥರು, ಸಂಜೆ ತನಕ ಹೊರಗೆ ಬರಲು ಹಿಂಜರಿಯುತ್ತಿದ್ದಾರೆ. ಮಧ್ಯಾ ಹ್ನದ ಹೊತ್ತಿಗೆ ಹೆಚ್ಚಾಗುವ ಬಿಸಿಲಿನ ತಾಪಕ್ಕೆ ನಗರವೇ ಬಿಕೋ ಎನ್ನುವಂತಿದೆ. ಅಲ್ಲದೆ, ಕುಡಿಯುವ ನೀರಿನ ಸಮಸ್ಯೆ ಕೂಡ ಹೆಚ್ಚಿದೆ.‘ಹಿಂದೆ ಗಿಡ, ಮರಗಳು ಹೆಚ್ಚಿತ್ತು. ಮಳೆಯೂ ಚೆನ್ನಾಗಿ ಆಗುತ್ತಿತ್ತು. ಈಗ ಗಿಡಮರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಸತತ ಬರಗಾಲಕ್ಕೆ ತುತ್ತಾಗುತ್ತಿದ್ದೇವೆ. ಹೀಗೆ ಬರಗಾಲ ಮುಂದುವರಿದರೆ, ಬಿಸಿಲಿಗೆ ಸಾಯುವ ಸಂದರ್ಭ ಬಂದರೂ ಸಂಶಯವಿಲ್ಲ’ ಎಂದು ಆಲದಕಟ್ಟಿ ನಿವಾಸಿ ಷಣ್ಮುಖಪ್ಪ ಮಾಳಂಬಿಡ ಹೇಳಿದರು.

ADVERTISEMENT

ಕೃಷಿ ಕೆಲಸಗಳಿಗೆ ಹೋಗುವ ರೈತರು, ಕೃಷಿ ಕೂಲಿ ಕಾರ್ಮಿಕರು ತಮ್ಮ ಕೆಲಸದ ಅವಧಿಯನ್ನೇ ಬದಲಾಯಿಸಿಕೊಳ್ಳುತ್ತಿ ದ್ದಾರೆ. ‘ಬೆಳಿಗ್ಗೆ 7ಗಂಟೆಗೆ ಹೊಲಕ್ಕೆ ಹೋಗಿ ಮಧ್ಯಾಹ್ನ 1ಗಂಟೆ ಒಳಗೆ ಮನೆ ಸೇರುತ್ತಿದ್ದೇವೆ’ ಎಂದು ಕುಂದೂರು ಗ್ರಾಮದ ರೈತ ಗುಡ್ಡನಗೌಡ ತಳಕಲ್‌ ತಿಳಿಸುತ್ತಾರೆ.ತಂಪು ಪಾನೀಯ ಹಾಗೂ ಹಣ್ಣಿನ ವ್ಯಾಪಾರ ಹೆಚ್ಚಿದೆ. ಇದರಿಂದ ಮಧ್ಯಾ ಹ್ನದ ವೇಳೆಗೆ ತಂಪು ಪಾನೀಯ, ಅಂಗಡಿಗಳು ಜನರಿಂದ ಗಿಜಿಗುಡುತ್ತಿ ರುತ್ತವೆ. ಇನ್ನು ರಸ್ತೆ ಬದಿಯ ಕಲ್ಲಂಗಡಿ, ಕರ್ಬೂಜಾ ಮತ್ತು ಕಬ್ಬಿನ ಹಾಲಿನ ವ್ಯಾಪಾರ ಕೂಡ ಜೋರಾಗಿ ನಡೆದಿದೆ.
ಪ್ರವೀಣ ಸಿ. ಪೂಜಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.