ADVERTISEMENT

‘ಬೆಳೆವಿಮೆ: 27ರ ಬಳಿಕ ಸೆಗಣಿ ಎರಚಾಟ’

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 5:08 IST
Last Updated 21 ಫೆಬ್ರುವರಿ 2017, 5:08 IST
ಹಾವೇರಿ: ‘2015–16ನೇ ಸಾಲಿನ ಬೆಳೆವಿಮೆ ಪರಿಹಾರದ ಹಣವನ್ನು ಇದೇ 27ರೊಳಗಾಗಿ ಎಲ್ಲ ಅರ್ಹ ರೈತರ ಖಾತೆಗೆ ಜಮಾ ಮಾಡದಿದ್ದರೆ ಬ್ಯಾಂಕ್‌ಗಳು, ಕಚೇರಿಗಳು, ಅಧಿಕಾರಿಗಳ ವಿರುದ್ಧ ಸೆಗಣಿ ಎರಚಿ ಪ್ರತಿಭಟನೆ ನಡೆಸಲಾಗುವುದು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ ಎಚ್ಚರಿಕೆ ನೀಡಿದರು. 
 
‘ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಖಂಡನೆ ಹಾಗೂ ರೈತರ ಮತ್ತು ಜನಸಾಮಾನ್ಯರ ಸಮಸ್ಯೆಗಳ ಈಡೇರಿಕೆಗೆ ಆಗ್ರಹಿಸಿ’ ಬಿಜೆಪಿ ಜಿಲ್ಲಾ ಘಟಕವು ನಗರದ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿ ಸೋಮವಾರ ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. 
 
‘ಸರ್ಕಾರವು ಬೆಳೆವಿಮೆ ಪರಿಹಾರದ ಹಣವನ್ನು 9 ತಿಂಗಳಿನಿಂದ ರೈತರಿಗೆ ನೀಡದೇ ಸತಾಯಿಸುತ್ತಿದೆ. ಇದೇ 27ರೊಳಗೆ ಎಲ್ಲ ಅರ್ಹ ರೈತರ ಖಾತೆಗೆ ಹಣ ಹಾಕಬೇಕು. ಇಲ್ಲದಿದ್ದರೆ, ಸೆಗಣಿ ಎರಚುವ ಮೂಲಕ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು. 
 
‘ಸಿ.ಎಂ. ಸಿದ್ದರಾಮಯ್ಯನವರು ಕಾಂಗ್ರೆಸ್ ಹೈಕಮಾಂಡ್‌ಗೆ ಸಾವಿರ ಕೋಟಿ ರೂಪಾಯಿ ಕಪ್ಪ  ನೀಡಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಚಿವ ರಮೇಶ ಜಾರಕಿಹೊಳಿ ಹಾಗೂ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಮನೆಗೆ ದಾಳಿ ಮಾಡಿ ₹162 ಕೋಟಿ ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ. ಬೆಂಗಳೂರಿನ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಸರ್ಕಾರವು ₹65 ಕೋಟಿ ಕಿಕ್ ಬ್ಯಾಕ್ ಪಡೆದಿದೆ. ಇಷ್ಟೆಲ್ಲ ಭ್ರಷ್ಟಾಚಾರ ನಡೆದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ’ ಎಂದು ಖಂಡಿಸಿದರು. 
 
ಇ.ಡಿ.ಗೆ ಸಿಎಂ ಪತ್ರ: ಸಂಸದ ಶಿವಕುಮಾರ್ ಉದಾಸಿ ಮಾತನಾಡಿ, ‘ಹೈಕಮಾಂಡ್‌ಗೆ ಕಪ್ಪ ನೀಡಿಲ್ಲ’ ಎಂದು ಸಿ.ಎಂ. ಹೇಳುತ್ತಿದ್ದಾರೆ. ಆದರೆ, ‘ಡೈರಿಯಲ್ಲಿ ಏನಿದೆ?’ ಎಂದು ಸಿ.ಎಂ. ಜಾರಿ ನಿರ್ದೇಶನಾಲಯ (ಇ.ಡಿ)ಕ್ಕೆ ಪತ್ರ ಬರೆದು ಕೇಳಿದ್ದಾರೆ. ಈ ದ್ವಂದ್ವ ನಿಲುವಿನಿಂದಲೇ ಕಪ್ಪ ಸಲ್ಲಿಸಿದ್ದು ಸಾಬೀತಾಗುತ್ತದೆ’ ಎಂದರು.
 
‘ಕಳೆದ ಮೂರು ವರ್ಷದಿಂದ ಲೋಕಾಯುಕ್ತವೇ ಅಸ್ತಿತ್ವದಲ್ಲಿ ಇಲ್ಲದಂತೆ ಮಾಡಿದ ಸಿ.ಎಂ, ‘ತಮ್ಮ ವಿರುದ್ಧ ಈ ತನಕ ಯಾವುದೇ ದೂರುಗಳು ದಾಖಲಾಗಿಲ್ಲ’ ಎಂದು ಹೇಳುತ್ತಾರೆ’ ಎಂದ ಅವರು, ‘ಈಗ ಲೋಕಾಯುಕ್ತ ಬಂದಿದ್ದಾರೆ. ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕಠಿಣ ಕಾನೂನುಗಳನ್ನು ಜಾರಿ ತಂದಿದೆ. ‘ಇನ್ನು ಕಾಂಗ್ರೆಸ್‌ ಭ್ರಷ್ಟಾಚಾರ ಜಗಜ್ಜಾಹೀರು ಆಗುತ್ತದೆ. ಕಾದು ನೋಡಿ’ ಎಂದರು. 
 
ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಜನತೆ ಕಾಂಗ್ರೆಸ್ ಕಿತ್ತೊಗೆಯಲು ತೀರ್ಮಾನಿಸಿದ್ದಾರೆ.  ಬಿಜೆಪಿ ಕಾರ್ಯಕರ್ತರು ಸಕ್ರಿಯರಾಗಿ, ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರಲು ಹೋರಾಡಬೇಕು’ ಎಂದರು. 
 
ಪ್ರಭು ಹಿಟ್ನಳ್ಳಿ, ಸುರೇಶ ಗೌಡ್ರ ಪಾಟೀಲ, ಸಿದ್ದರಾಜ ಕಲಕೋಟಿ, ವಿರೂಪಕ್ಷಪ್ಪ ಕಡ್ಲಿ, ನಿರಂಜನ ಹೇರೂರ, ಶಿವಬಸವ ವನಳ್ಳಿ, ಪರಮೇಶ್ವರಪ್ಪ ಮೇಗಳಮನಿ, ಈರಪ್ಪ ಲಮಾಣಿ, ಗಿರೀಶ ತುಪ್ಪದ, ಕೆ.ಸಿ. ಕೋರಿ, ಸುರೇಶ ಹೊಸ್ಮನಿ, ಶೋಭಾ ನಿಸ್ಸೀಮಗೌಡ್ರ, ಶೋಭಾ ಗಂಜಿಗಟ್ಟಿ, ರಾಜೇಂದ್ರ ಸಜ್ಜನರ, ಶಂಭುಲಿಮಗ, ವಿಜಯಕುಮಾರ್ ಚಿನ್ನಿಕಟ್ಟಿ, ಮಲ್ಲಿಕಾರ್ಜುನ, ಗಿರೀಶ, ವೀರಣ್ಣ, ಸಂತೋಷ, ಮಂಗಳಗೌರಿ, ಬಸಮ್ಮಾ, ಕಾವ್ಯಶ್ರೀ, ಕಲ್ಯಾಣ ಕುಮಾರ್ ಶೆಟ್ಟರ್ ಮತ್ತಿತರರು ಇದ್ದರು. 
 
**
‘ಮುಳುಗುವ ಹಡಗು...’
‘ರಾಜ್ಯದಲ್ಲಿ ತಳಮಟ್ಟದಿಂದಲೇ ಭ್ರಷ್ಟಾಚಾರ ತಾಂಡವವಾಡುತ್ತಿದೆ. ರಾಜ್ಯ ಕಾಂಗ್ರೆಸ್‌ ಮುಳುಗುತ್ತಿರುವ ಹಡಗಿನಂತಾಗಿದೆ. ಹೀಗಾಗಿ ಎಸ್‌.ಎಂ. ಕೃಷ್ಣ ಸೇರಿದಂತೆ ಹಿರಿಯ ನಾಯಕರೇ ಒಬ್ಬೊಬ್ಬರಾಗಿ ಹೊರಗೆ ಧುಮುಕುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರೇ ಪಕ್ಷ ಬಿಟ್ಟು ಹೋಗುವ ಅಧೋಗತಿ ಬಂದಿದೆ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.
 
**
ರಾಜ್ಯದಲ್ಲಿ 3 ವರ್ಷ ಲೋಕಾಯುಕ್ತವೇ ಅಸ್ತಿತ್ವದಲ್ಲಿ ಇರದಂತೆ ಸಿ.ಎಂ. ಮಾಡಿದ್ದಾರೆ. ಇನ್ನು ಅವರ ವಿರುದ್ಧ ದೂರು ದಾಖಲಿಸುವುದಾದರು ಎಲ್ಲಿ?
-ಶಿವಕುಮಾರ್ ಉದಾಸಿ 
ಸಂಸದ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.