ADVERTISEMENT

ಮಕ್ಕಳ ಆವಿಷ್ಕಾರಗಳ ಅನಾವರಣ

ಗಮನ ಸೆಳೆದ ವಿಜ್ಞಾನ ಮಾದರಿಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2014, 7:00 IST
Last Updated 17 ಸೆಪ್ಟೆಂಬರ್ 2014, 7:00 IST
ಹಾವೇರಿ ಟಿ.ಎಂ.ಎ.ಇ.ಎಸ್‌ ಕಾಲೇಜಿನಲ್ಲಿ ಮಂಗಳವಾರ ನಡೆದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಸ್ಪರ್ಧೆಯಲ್ಲಿ  ವಿವಿಧ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸುತ್ತಿರುವ ವಿದ್ಯಾರ್ಥಿಗಳು
ಹಾವೇರಿ ಟಿ.ಎಂ.ಎ.ಇ.ಎಸ್‌ ಕಾಲೇಜಿನಲ್ಲಿ ಮಂಗಳವಾರ ನಡೆದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಸ್ಪರ್ಧೆಯಲ್ಲಿ ವಿವಿಧ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸುತ್ತಿರುವ ವಿದ್ಯಾರ್ಥಿಗಳು   

ಹಾವೇರಿ: ಒಂದಡೆ ಮಳೆ ನೀರಿನ ಕೊಯ್ಲು, ಪಕ್ಕದಲ್ಲೇ ಖನಿಜ ತೈಲದ ಮರು ಸಂಗ್ರಹ ಘಟಕ, ಮತ್ತೊಂದೆಡೆ ಶಕ್ತಿಯ ಆಕರಗಳ ಘಟಕ, ನೀರಿನ ಶುದ್ಧಿಕರಣ ಘಟಕ... ಸುತ್ತ ನೋಡಿದರಲ್ಲಿ ಒಂದೊಂದು ಆವಿಷ್ಕಾರ! ಮರಿ ವಿಜ್ಞಾನಿಗಳಂತೆ ವಿವರಣೆ ನೀಡುವ ವಿದ್ಯಾರ್ಥಿಗಳ ಉತ್ಸಾಹ.

ನಗರದ ಟಿ.ಎಂ.ಎ.ಇ.ಎಸ್‌ ಕಾಲೇಜಿನಲ್ಲಿ ಮಂಗಳವಾರ ನಡೆದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ವಿಜ್ಞಾನ ಮಾದರಿಗಳ ಸ್ಪರ್ಧೆ, ಪ್ರದರ್ಶನ ಹಾಗೂ ಇನ್‌ಸ್ಪಾಯರ್‌ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕಂಡುಬಂದ ವಿಜ್ಞಾನ ಮಾದರಿಗಳ ಸ್ಪರ್ಧೆಯ ಚಿತ್ರಣ.

ಹಾವನೂರು ಸರ್ಕಾರಿ ಪ್ರೌಢ ಶಾಲೆಯ ಶರಣಪ್ಪ ಗೌಡಪ್ಪನವರ ಹಾಗೂ ಸಂತೋಷ ಹಾಲವಣ್ಣನವರ ನೈಸರ್ಗಿಕ ತೈಲ ಮರು ಸಂಗ್ರಹಿಸಿ ಉತ್ಪಾದಿಸುವ ಶಕ್ತಿ, ಮಲ್ಲೂರು ಗ್ರಾಮಂತರ ಪ್ರೌಢ ಶಾಲೆ ಕೃಷ್ಣಾಜಿ ಬೋಸಲೆ ತಯಾರಿಸಿದ ಬಹುಪಯೋಗಿ ಸೌರಶಕ್ತಿ ವಿನ್ಞಾನ ಮಾದರಿ ವಸ್ತು ಪ್ರದರ್ಶನ ಗಮನ ಸೆಳೆಯಿತು. 

ಸವಣೂರಿನ ಗುರು ರಾಚೋಟೇಶ್ವರ ಪ್ರೌಢ ಶಾಲೆ ವಿದ್ಯಾರ್ಥಿಗಳ ನಿರ್ಮಿಸಿದ ವಿದ್ಯುತ್‌ ಶಕ್ತಿಯಿಂದ ಜೀವನಗಳ ರಕ್ಷಣೆ ಮಾಡುವುದು, ಅತ್ತಿಕಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯ ವರುಣಾ ಕುಲುಮಿ ತಯಾರಿಸಿದ ಪ್ಲೈ ಓವರ್‌ನಿಂದ ನೀರಿನಿಂದ ವಿದ್ಯುತ್‌ ಉತ್ಪಾದನೆ, ಗುಂಗರಗೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆ ಮಮತಾ ಶಿರಗುಂಬಿ ಸಿದ್ದಪಡಿಸಿದ ಭೂ ಉಷ್ಣ ವಿದ್ಯುತ್‌ ಉತ್ಪಾದನಾ ಘಟಕ, ಬಡಪ್ಪನಹಳ್ಳಿ ನೀಲಮ್ಮ ಪಾಟೀಲ ಸರ್ಕಾರಿ ಪ್ರೌಢ ಶಾಲೆ ಸುಜಾತಾ ಪೂಜಾರ ತಯಾರಿಸಿದ ಕಡಿಮೆ ವೆಚ್ಚದ ಗೀಸರ್‌ ಮಾದರಿಗಳು ಹುಬ್ಬೇರಿಸುವಂತಿತ್ತು.

ಹಾವೇರಿ, ಸವಣೂರು ಹಾಗೂ ಬ್ಯಾಡಗಿ ಸೇರಿದಂತೆ ವಿವಿಧೆಡೆಯ ಒಟ್ಟು 557 ವಿದ್ಯಾರ್ಥಿಗಳು 1249 ವಿಜ್ಞಾನ ಮಾದರಿಗಳನ್ನು ಪ್ರದರ್ಶನ ಮಾಡಿದರು. ಒಟ್ಟಾರೆ ಮಕ್ಕಳ ಆವಿಷ್ಕಾರದ, ಸೃಜನಶೀಲತೆಯ ಹೊಸ ಲೋಕವೇ ಕಣ್ಣಮುಂದೆ ತೆರೆದಿತ್ತು. ಬುಧವಾರವೂ ಈ ಮಾದರಿ ಪ್ರದರ್ಶನ ನಡೆಯಲಿದ್ದು, ಆಸಕ್ತರು ಭೇಟಿ ನೀಡಬಹುದು ಎಂದು ಸಂಘಟಕರು ತಿಳಿಸಿದರು.

ಉದ್ಘಾಟನೆ: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಮೂಲಕ ಹೊಸ ಯುಗದ ವಿಜ್ಞಾನಿಗಳನ್ನು ತಯಾರಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯ್ತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸಂತೋಷಕುಮಾರ ಪಾಟೀಲ ಹೇಳಿದರು.

ರಾಜ್ಯ ಶಿಕ್ಷಣ ಮತ್ತು ತರಬೇತಿ ನಿರ್ದೇಶನಾಲಯ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಗಳವಾರ ಆಯೋಜಿಸಿತ್ತು.  ಗಣ್ಯರು ಹಾಗೂ ಅಧಿಕಾರಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಗಂಗವ್ವ ಹಿತ್ತಲಮನಿ, ನಗರಸಭೆ ಉಪಾಧ್ಯಕ್ಷೆ ರತ್ನಾ ಭೀಮಕ್ಕನವರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವನಗೌಡ ಪಾಟೀಲ, ಜಿಲ್ಲಾ ವಾರ್ತಾಧಿಕಾರಿ ಎಂ.ಜುಂಜಣ್ಣ, ಡಯಟ್‌ ಕಾಲೇಜಿನ ಪ್ರಾಚಾರ್ಯ ಎಂ.ಡಿ ಬಳ್ಳಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ ಅಂಬಿಗೇರ, ಝಡ್‌.ಎಂ ಖಾಜಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.