ADVERTISEMENT

ಮದ್ಯ ಮಾರಾಟ ಮುಕ್ತ, ಕೆರೆಯೂ ಅಭಿವೃದ್ಧಿ

ಹರ್ಷವರ್ಧನ ಪಿ.ಆರ್.
Published 13 ಸೆಪ್ಟೆಂಬರ್ 2017, 6:26 IST
Last Updated 13 ಸೆಪ್ಟೆಂಬರ್ 2017, 6:26 IST
ಹಾವೇರಿ ತಾಲ್ಲೂಕಿನ ಗಣಜೂರು ಕೆರೆ
ಹಾವೇರಿ ತಾಲ್ಲೂಕಿನ ಗಣಜೂರು ಕೆರೆ   

ಹಾವೇರಿ: ಸತತ ಬರದ ಪರಿಣಾಮ ಜಿಲ್ಲೆಯ ಬಹುತೇಕ ಕೆರೆ, ಹಳ್ಳಗಳು ಬತ್ತಿ ಹೋಗಿ ಕೊಳವೆಬಾವಿಗಳ ಅಂತರ್ಜಲ ಮಟ್ಟವೂ ಕುಸಿದಿದೆ. ಈ ಬಾರಿ ಬೇಸಿಗೆಯಲ್ಲಿ ನದಿ ತೀರದ ಹಳ್ಳಿಗಳಲ್ಲೇ ನೀರಿಗೆ ತತ್ವಾರ ಉಂಟಾಗಿತ್ತು. ದೂರದ ಊರುಗಳಿಂದ ನೀರು ತರಬೇಕಾದ ಸ್ಥಿತಿ ಬಂದಿತ್ತು.

ಈ ಪೈಕಿ ತಾಲ್ಲೂಕಿನ ಗಣಜೂರ ಗ್ರಾಮವೂ ಒಂದು. ಸಮಸ್ಯೆಗೆ ಸ್ಪಂದಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ)ಯು ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿ ಕೆರೆ ಅಭಿವೃದ್ಧಿ ಮಾಡಿದೆ. ಹೂಳೆತ್ತುವ ಹಾಗೂ ಪಿಚ್ಚಿಂಗ್ ಕಾಮಗಾರಿಗಳ ಮೂಲಕ ಕೆರೆ ಪುನಶ್ಚೇತನಗೊಳಿಸಿದೆ.

ಮೊದಲು: 3 ಎಕರೆ 12 ಗುಂಟೆಯ ಈ ಕೆರೆಯಲ್ಲಿ ಕಾಮಗಾರಿಗೆ ಮೊದಲು ಹೂಳು ತುಂಬಿಕೊಂಡಿತ್ತು. ಗಿಡ, ಕಳೆ, ಕಸಗಳಿಂದ ಕೆರೆಯೇ ನಿಷ್ಪ್ರಯೋಜಕವಾ ಗಿತ್ತು. ನೀರು ಹರಿದು ಬರುವ ನಾಲಾ ಗಳೂ ಮುಚ್ಚಿಹೋಗಿದ್ದವು. ಮಳೆ ಇಲ್ಲದೇ ಭಣಗುಟ್ಟಿತ್ತಿತ್ತು. ಹೀಗಾಗಿ ಅಂತರ್ಜಲ ಮಟ್ಟವೂ ಕುಸಿದಿತ್ತು. ಗ್ರಾಮದ ಸುಮಾರು 370 ಕುಟುಂಬಗಳ ಸದಸ್ಯರು ನಳದ ನೀರಿಗಾಗಿ ಸರದಿ ಕಾಯಬೇಕಿತ್ತು ಎಂದು ಗ್ರಾಮಸ್ಥರು ಕಷ್ಟವನ್ನು ಮೇಲುಕು ಹಾಕುತ್ತಾರೆ.

ADVERTISEMENT

ಅಭಿವೃದ್ಧಿ: ಕೆರೆ ಅಭಿವೃದ್ಧಿಗಾಗಿ ₹ 10 ಲಕ್ಷ ಮಂಜೂರು ಮಾಡಿದ ಎಸ್‌ಕೆಡಿಆರ್‌ಡಿಪಿ, ಸ್ಥಳೀಯವಾಗಿ ‘ಕೆರೆ ಅಭಿವೃದ್ಧಿ ಸಮಿತಿ’ ರಚಿಸಿತು. ಕೊಳೂರು ಗ್ರಾಮ ಪಂಚಾಯ್ತಿ ಸಹಕಾರದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿತ್ತು.

‘ಕೆರೆಯ ಹೂಳೆತ್ತಲು ಮತ್ತು ಪಿಚ್ಚಿಂಗ್ ಕಾಮಗಾರಿಗಾಗಿ ₹ 8.79 ಲಕ್ಷ ವಿನಿಯೋಗಿಸಲಾಗಿದೆ. ಮಳೆ ಕೊರತೆ ಕಾರಣ, 3 ಕಿ.ಮೀ.ದೂರದ ವರದಾ ನದಿಯಿಂದ ಪೈಪ್‌ಲೈನ್ ಮೂಲಕ ನೀರು ಹರಿಸಲಾಗುತ್ತಿದೆ. ಈಗ ಪ್ರತಿನಿತ್ಯ ಸುಮಾರು ೮೫ ಸಾವಿರ ಲೀಟರ್‌ನಷ್ಟು ನೀರನ್ನು ವಿವಿಧ ಕಾರ್ಯಗಳಿಗಾಗಿ ಗ್ರಾಮಸ್ಥರು ಪಡೆಯುತ್ತಿದ್ದಾರೆ’ ಎನ್ನುತ್ತಾರೆ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್‌.

‘ಜೀವ ಜಲ ಮೂಲವಾದ ಕೆರೆ, ಹಳ್ಳ –ಕೊಳ್ಳ, ಕೊಳವೆ ಬಾವಿಗಳ ಮರುಪೂರಣವಾದಾಗ ಮಾತ್ರ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯ’ ಎಂಬುದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ.ಹೆಗ್ಗಡೆ ದೃಢ ನಿಲುವು. ಅವರ ಮಾರ್ಗದರ್ಶನದಂತೆ ಅಂತರ್ಜಲ ಹೆಚ್ಚಳಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ’ ಎಂದು ವಿವರಿಸಿದರು.

‘ಮಾರ್ಚ್‌ ತಿಂಗಳಲ್ಲಿ ಕೆರೆ ಅಭಿವೃದ್ಧಿ ಪಡಿಸುವ ನಿರ್ಧಾರಕ್ಕೆ ಬಂದಿದ್ದೆವು. ಧರ್ಮಸ್ಥಳ ಯೋಜನೆ, ಕೋಳೂರು ಗ್ರಾಮ ಪಂಚಾಯ್ತಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಯಶಸ್ವಿಯಾಯಿತು. ಆದರೆ, ಮಳೆ ಕೊರತೆ ಕಾರಣ,  ನೀರಿನ ಮೂಲ ಇರಲಿಲ್ಲ. ವರದಾ ನದಿಯಿಂದ ನೀರು ಪೂರೈಸುವ ಸಲುವಾಗಿ, ತೀರದಲ್ಲಿ ಮೋಟಾರು ಇರಿಸಲು ಡೆಕ್ಕನ್‌ಮೈನ್ಸ್‌ ಕಂಪೆನಿ ಜಾಗ ಖರೀದಿಸಿ ಮಾಡಿಕೊಟ್ಟಿತು’ ಎಂದು ಗಣಜೂರು ಕೆರೆ ಅಭಿವೃದ್ಧಿ ಸಮಿತಿ  ಅಧ್ಯಕ್ಷ ಮಲ್ಲಪ್ಪ ಚಿಕ್ಕಪ್ಪ ಬಣಕಾರ ತಿಳಿಸಿದರು.

‘ಕೆರೆಯಲ್ಲಿ ಒಂದು ಎಕರೆ ಹೊಂಡ ವಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿ ಅಭಿವೃದ್ಧಿ ಪಡಿಸುವ ಚಿಂತನೆ ಗ್ರಾಮ ಪಂಚಾಯ್ತಿಗೆ ಇದೆ. ಒಟ್ಟಾರೆ ಧರ್ಮಸ್ಥಳ ಯೋಜನೆಯು ಪ್ರೇರಣೆಯಾಗಿದೆ’ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಈ ಕೆರೆಯ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮೀಸಲು ಇಡಲು ಗ್ರಾಮದ ಜನತೆ ತೀರ್ಮಾನಿಸಿದ್ದಾರೆ. ‘ನಮ್ಮೂರು’ ಮತ್ತು ‘ನಮ್ಮ ಕೆರೆ’ಯನ್ನು ನಾವೇ ಕಾಪಾಡಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಕೆರೆ ಹಸ್ತಾಂತರ ನಾಳೆ
ಹಾವೇರಿ: ಅಭಿವೃದ್ಧಿ ಪಡಿಸಿದ ಗಣಜೂರು ಕೆರೆ ಹಸ್ತಾಂತರ ಕಾರ್ಯಕ್ರಮವು ಇದೇ 14ರಂದು ಬೆಳಿಗ್ಗೆ 11.30ಕ್ಕೆ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಜಿಲ್ಲಾಧಿಕಾರಿ ಡಾ. ವೆಂಕಟೇಶ್‌ ಎಂ.ವಿ. ಪಾಲ್ಗೊಳ್ಳು ವರು ಎಂದು ಪ್ರಕಟಣೆ ತಿಳಿಸಿದೆ

* * 

ನಮ್ಮ ಗ್ರಾಮವು ಮದ್ಯ ಮಾರಾಟದಿಂದ ಮುಕ್ತವಾಗಿದೆ. ಈಗ ಅಂತರ್ಜಲ ವೃದ್ಧಿಗಾಗಿ ಕೆರೆಯನ್ನೂ ಅಭಿವೃದ್ಧಿ ಪಡಿಸಲಾಗಿದೆ
ಮಲ್ಲಪ್ಪ ಚಿಕ್ಕಪ್ಪ ಬಣಕಾರ
ಅಧ್ಯಕ್ಷ, ಗಣಜೂರು ಕೆರೆ ಅಭಿವೃದ್ಧಿ ಸಮಿತಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.