ADVERTISEMENT

ಮಳೆಗಾಲದಲ್ಲಿ ಮಕ್ಕಳು ಪಾಠ ಎಲ್ಲಿ ಕೇಳಬೇಕು?

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 6:21 IST
Last Updated 23 ಏಪ್ರಿಲ್ 2017, 6:21 IST
ನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ 4ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಳಪೆ ಎನ್ನಲಾದ ಕಾಮಗಾರಿಗಳ ಚಿತ್ರಗಳನ್ನು ತೋರಿಸಿದ ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ಧರಾಜ ಕಲಕೋಟಿ
ನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ 4ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಳಪೆ ಎನ್ನಲಾದ ಕಾಮಗಾರಿಗಳ ಚಿತ್ರಗಳನ್ನು ತೋರಿಸಿದ ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ಧರಾಜ ಕಲಕೋಟಿ   

ಹಾವೇರಿ: ‘ಪ್ರಾಥಮಿಕ ಶಾಲೆಯಲ್ಲಿ ₹1 ಲಕ್ಷ ಅನುದಾನದಲ್ಲಿ ನಿರ್ಮಿಸಿದ ಶೌಚಾಲಯ ಉಪಯೋಗಕ್ಕೆ ಬರುವುದಿಲ್ಲ ಎಂದಾದರೆ, ನೀವು ಯಾವ ಮಟ್ಟಿಗೆ ಕಳಪೆ ಕಾಮಗಾರಿ ಮಾಡುತ್ತಿದ್ದಿರಿ...’ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿ ವಿಶ್ವನಾಥ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಶನಿವಾರ ಪ್ರಶ್ನಿಸಿದರು.ನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ 4ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಳಪೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ತಾಲ್ಲೂಕಿನ ಕಳ್ಳಿಹಾಳ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಅದು ಉಪಯೋಗಕ್ಕೆ ಬಾರದಂತಿದೆ. ನಿರ್ಮಿತಿ ಕೇಂದ್ರದಿಂದ ನಡೆಯುತ್ತಿರುವ ಅನೇಕ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿದ್ದು, ಕಾಮಗಾರಿಗಳ ಗುಣಮಟ್ಟವೂ ಕಳಪೆಯಿಂದ ಕೂಡಿದೆ. ಕಳೆದ ವರ್ಷದಲ್ಲಿ ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದ್ದ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿಗಳು ಈಗಲೂ ಸ್ಲ್ಯಾಬ್ ಹಂತದಲ್ಲಿಯೇ ಇವೆ. ಹೀಗಾದರೆ, ಮಳೆಗಾಲದಲ್ಲಿ ಮಕ್ಕಳು ಎಲ್ಲಿ ಪಾಠ ಕೇಳಬೇಕು’ ಎಂದು ಪ್ರಶ್ನಿಸಿದರು.

‘ಈ ರೀತಿ ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ. ಇದೇ ರೀತಿ ಮಾಡುತ್ತಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು. ಸಚಿವರೊಂದಿಗೆ ಧ್ವನಿಗೂಡಿಸಿದ ಜಿಲ್ಲಾ ಪಂಚಾಯ್ತಿ ಸದಸ್ಯ ವಿರೂಪಾಕ್ಷಪ್ಪ ಕಡ್ಲಿ ಹಾಗೂ ತಾಲ್ಲೂಕು ಪಂಚಾಯ್ತಿ ಸದಸ್ಯ ಮಾಂತೇಶ ಬನ್ನಿಮಟ್ಟಿ, ‘ನಿರ್ಮಿತಿ ಕೇಂದ್ರದವರಿಗೆ ಕೇವಲ ₹12 ಸಾವಿರಕ್ಕೆ ಒಂದು ಲಾರಿ ಮರಳು ದೊರೆಯುತ್ತಿದೆ. ಆದರೆ, ಅದನ್ನು ₹25ರಿಂದ  ₹30 ಸಾವಿರಕ್ಕೆ ಮಾರಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

ADVERTISEMENT

ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ಧರಾಜ ಕಲಕೋಟಿ ಮಾತನಾಡಿ, ‘ಸಣ್ಣ ನಿರಾವರಿ ಇಲಾಖೆಯಿಂದ ಕೈಗೊಳ್ಳಲಾದ ಹೊಸರಿತ್ತಿ ಹಾಗೂ ಕಳ್ಳಿಹಾಳ ಬಾಂದಾರ್‌ಗಳು ಸಂಪೂರ್ಣ ಕಳಪೆಯಿಂದ ಕೂಡಿವೆ. ಕೈಯಿಂದ ಕೆದರಿದರೂ ಮರಳು ಬೀಳುತ್ತಿದೆ’ ಎಂದು ಆರೋಪಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಣ್ಣ ನಿರಾವರಿ ಇಲಾಖೆ ಅಧಿಕಾರಿ, ‘ಕ್ಯೂರಿಂಗ್‌ ಕೊರತೆ ಯಿಂದ ಇಂಥ ಸನ್ನಿವೇಶ ಎದುರಾಗಿದೆ. ತಕ್ಷಣವೇ ಅದನ್ನು ಸರಿಪಡಿಸ ಲಾಗುವುದು’ ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಮಾತ ನಾಡಿ, ‘ತಾಲ್ಲೂಕಿನ ಕುಳೆನೂರ, ದೇವಗಿರಿ, ಕೆಂಚಾರಗಟ್ಟಿ, ಹಂದಿಗನೂರು, ಬೆಳವಗಿ ಸೇರಿದಂತೆ ವಿವಿಧೆ ಆರೋಗ್ಯ ಕೇಂದ್ರಗಳ ಕಟ್ಟಡಗಳು ಶಿಥಿಲಗೊಂಡಿವೆ. ಅವುಗಳ ಪುನರ್ ನಿರ್ಮಿಸಬೇಕು’ ಎಂದು ಮನವಿ ಮಾಡಿದರು.‘ಜಿಲ್ಲೆಯ ಮೂರು ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ‘ಡಯಾಲಿಸಿಸ್‌’ ಘಟಕ ಸ್ಥಾಪಿಸಲು ಅನುಮತಿ ನೀಡಲಾಗಿದೆ. ಕೆಲವೇ ತಿಂಗಳಲ್ಲಿ ಆರಂಭಗೊಳ್ಳಲಿವೆ’ ಎಂದರು.

ಶಿಶು ಅಭಿವೃದ್ಧಿ ಅಧಿಕಾರಿ ಡಿ.ಎಚ್‌.ಲಲತಾ ಮಾತನಾಡಿ, ‘ನರೇಗಾ ಯೋಜನೆ ಅಡಿಯಲ್ಲಿ ಒಟ್ಟು 7 ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಆದರೆ, ಇಲಾಖೆ ವತಿಯಿಂದಲೇ ಕಟ್ಟಡ ಕಟ್ಟಿಸಿ ಕೊಡುವಂತೆ ಕೆಲವು ಗ್ರಾಮಗಳು ಕೋರಿವೆ’ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಯಾವ ಗ್ರಾಮದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಕಟ್ಟಡವಿಲ್ಲವೋ, ಅಲ್ಲಿ ನರೇಗಾ ಯೋಜನೆಯಲ್ಲಿಯೇ ಅಂಗನ ವಾಡಿ ಕೇಂದ್ರಗಳನ್ನು ನಿರ್ಮಿಸಿಕೊಳ್ಳಲು ಗ್ರಾಮಸ್ಥರಿಗೆ ಮನವರಿಕೆ ಮಾಡಿಸಿ’ ಎಂದು ಸೂಚಿಸಿದರು. ತಾಲ್ಲೂಕ ಪಂಚಾಯ್ತಿ ಅಧ್ಯಕ್ಷ ಯಲ್ಲಪ್ಪ ಮಣ್ಣೂರ, ಉಪಾಧ್ಯಕ್ಷೆ ನಾಗಮ್ಮ ಬಂಕಾಪುರ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶಿಶಿಕಲಾ ಲಮಾಣಿ, ತಾಲ್ಲೂಕ ಪಂಚಾಯ್ತಿ ಇಓ ಪಾಟೀಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.