ADVERTISEMENT

ಮಾದಕ ದ್ರವ್ಯ ನಿಯಂತ್ರಣಕ್ಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 5:48 IST
Last Updated 8 ಸೆಪ್ಟೆಂಬರ್ 2017, 5:48 IST

ಹಾವೇರಿ: ‘ಗಾಂಜಾ, ಚರಸ್ ಮತ್ತಿತರ ಮಾದಕ ದ್ರವ್ಯಗಳ ನಿಯಂತ್ರಣ ಮಾಡುವ ಕುರಿತು ಕಾರ್ಯಕ್ರಮ ರೂಪಿಸಲಾಗುವುದು’ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು. ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿದ್ಯಾರ್ಥಿಗಳು, ಯುವಜನತೆ ಮಾದಕ ದ್ರವ್ಯ ವ್ಯಸನಕ್ಕೆ ತುತ್ತಾಗುತ್ತಿರುವ ಕುರಿತು ದೂರುಗಳಿವೆ. ಇಂತಹ ನಿಷೇಧಿತ ವಸ್ತುಗಳ ಮಾರಾಟ ತಡೆಗಟ್ಟಲು ಇಲಾಖಾ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕಾರ್ಯಕ್ರಮ ಹಾಕಿಕೊಳ್ಳಲಾಗುವುದು’ ಎಂದರು.

‘ಅಕ್ರಮ ಮದ್ಯ ಮಾರಾಟದ ಬಗ್ಗೆ ಕಠಿಣ ಕ್ರಮಕೈಗೊಂಡಿದ್ದೇವೆ. ಅಲ್ಲದೇ, ಮಾರಾಟ ಮಳಿಗೆಗಳಿಂದ ಖರೀದಿಸಿದ ಮದ್ಯವನ್ನು ಗ್ರಾಮೀಣ ಭಾಗದ ದಿನಸಿ, ಗೂಡಂಗಡಿ, ಚಹಾ ಅಂಗಡಿಗಳಲ್ಲಿ ಹೆಚ್ಚಿನ ದರಕ್ಕೆ  ಅಕ್ರಮವಾಗಿ ಮಾರಾಟ ಮಾಡುವ ಬಗ್ಗೆಯೂ ದೂರುಗಳಿವೆ. ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಸಂಗ್ರಹಸಿಕೊಂಡು ಕ್ರಮಕೈಗೊಳ್ಳುತ್ತೇನೆ’ ಎಂದರು.

‘ಮದ್ಯ ಮಾರಾಟ ಮಳಿಗೆಗಳಿಗೆ ಪರವಾನಗಿ ನೀಡುವ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಒಂದೆಡೆ, ಸಣ್ಣ ವ್ಯಾಪಾರಿಗಳು, ಪರಿಶಿಷ್ಟರಿಗೆ ಪರವಾನಗಿ ನೀಡಬೇಕು ಎಂಬ ಬೇಡಿಕೆ ಇದೆ. ಇನ್ನೊಂದೆಡೆ ಹೆಚ್ಚುವರಿ ಪರವಾನಗಿ ನೀಡುವುದಕ್ಕೆ ವಿರೋಧವೂ ಇದೆ. ಎರಡೂ ಅಭಿಪ್ರಾಯಗಳ ಬಗ್ಗೆ ಪರಿಶೀಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ರಾಷ್ಟ್ರೀಯ ಹೆದ್ದಾರಿ ಬದಿಯ ಮದ್ಯದಂಗಡಿಗಳನ್ನು ಮುಚ್ಚಬೇಕು ಎಂಬ ಸುಪ್ರೀಂ ಕೋರ್ಟ್ ನೀಡಿದ ಆದೇಶವು ಸುಮಾರು 800 ಮದ್ಯದಂಗಡಿಗಳ ಮೇಲೆ ಪ್ರಭಾವ ಬೀರಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು’ ಎಂದ ಅವರು, ‘ಇದರಿಂದ ಆದಾಯದ ಮೇಲೂ ಪ್ರಭಾವ ಬೀರುವುದನ್ನು ನಿರಾಕರಿಸುವಂತಿಲ್ಲ’ ಎಂದರು.

ಮಂಗಳೂರು ಚಲೋ: ‘ಯಾರೇ ಕೋಮವಾದ, ಸಮಾಜ ಒಡೆಯುವ, ಧರ್ಮಗಳ ನಡುವೆ ಭೇದ ಸೃಷ್ಟಿಸಲು ಕಾರ್ಯಕ್ರಮ ಹಾಕಿಕೊಂಡರೆ, ಸರ್ಕಾರ ಅನುಮತಿ ನೀಡಲು ಸಾಧ್ಯವಿಲ್ಲ. ಕೋಮುವಾದಕ್ಕೆ ಪ್ರೇರಣೆ ನೀಡುವ ಕಾರ್ಯಕ್ರಮಗಳಿಗೆ ಸಂವಿಧಾನವೂ ಅವಕಾಶ ನೀಡುವುದಿಲ್ಲ’ ಎಂದು ‘ಮಂಗಳೂರು ರ್‍ಯಾಲಿ’ ಕುರಿತ ಪ್ರಶ್ನೆಗೆ ಉತ್ತರಿಸಿದರು.

‘ಸಿ.ಎಂ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಯಶಸ್ಸಿನಿಂದಾಗಿ ಬಿಜೆಪಿಗೆ ಗೊತ್ತು –ಗುರಿ ಇಲ್ಲದಾಗಿದೆ. ಹೀಗಾಗಿ ರಾಜ್ಯಪಾಲರಿಗೆ ದೂರು ನೀಡುವುದು, ಕೋಮುವಾದ ಪ್ರೋತ್ಸಾಹಿಸುವುದು, ಸುಳ್ಳು ಆರೋಪ ಮಾಡುವುದರಲ್ಲಿ ತೊಡಗಿದ್ದಾರೆ’ ಎಂದು ದೂರಿದರು.

ಬಿಬಿಎಂಪಿ: ‘ನಾನು ಬೆಂಗಳೂರಿನಲ್ಲಿ ವಾಸ್ತವ್ಯ ಇರಬೇಕೇ? ಅಥವಾ ಬಾಗಲಕೋಟೆಯಲ್ಲಿ ಇರಬೇಕೇ? ಎಂಬುದು ವೈಯಕ್ತಿಕ ಇಚ್ಛೆ. ನನ್ನ ವಾಸ್ತವ್ಯದ ಪ್ರಕಾರ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುತ್ತಾರೆ. ಭಾರತೀಯರು ದೇಶದ ಯಾವುದೇ ಪ್ರದೇಶದಲ್ಲಿ ವಾಸಿಸಬಹುದು’ ಎಂದು ಬಿಬಿಎಂಪಿ ಮೇಯರ್ ಚುನಾವಣೆ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಸಿ.ಎಂ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಜನರಿಗೆ ಹಲವು ಯೋಜನೆಗಳನ್ನು ನೀಡಿದೆ. ಈ ಬಗ್ಗೆ ಮುಂಬೈ ಕರ್ನಾಟಕ ಭಾಗದಲ್ಲಿ ಸಮಾವೇಶ ನಡೆಸುವ ಸಲುವಾಗಿ ಬುಧವಾರ ಧಾರವಾಡದಲ್ಲಿ ಪೂರ್ವಭಾವಿ ಸಭೆ ನಡೆಸಿದ್ದೇವೆ’ ಎಂದ ಅವರು ಸ್ಪಷ್ಟಪಡಿಸಿದರು.

‘ಮಹದಾಯಿಗೆ ರ್‍ಯಾಲಿ ಮಾಡಲಿ’
‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲಮನ್ನಾ, ಮಹದಾಯಿ ಮತ್ತಿತರ ಜನಪರ ವಿಚಾರಕ್ಕೆ ಬಿಜೆಪಿ ಬೈಕ್‌ ರ್‍ಯಾಲಿ ನಡೆಸಲಿ. ಆದರೆ, ಕೋಮುವಾದದ ಮೂಲಕ ಸಮಾಜ ಒಡೆಯುವ ರ್‍ಯಾಲಿಗಳಿಗೆ ಸರ್ಕಾರ ಮಾತ್ರವಲ್ಲ,  ಜನರೂ ಬೆಂಬಲಿಸುವುದಿಲ್ಲ’ ಎಂದು ಬಿಜೆಪಿ ಯುವ ಮೋರ್ಚಾದ ‘ಮಂಗಳೂರು ಚಲೋ ಬೈಕ್‌ ರ್‍ಯಾಲಿ’ ಕುರಿತ ಪ್ರಶ್ನೆಗೆ ಸಚಿವ ಆರ್.ಬಿ. ತಿಮ್ಮಾಪೂರ ಪ್ರತಿಕ್ರಿಯಿಸಿದರು.

* * 

ರಾಜ್ಯದ 10 ಮನೆಗಳ ಪೈಕಿ ಕನಿಷ್ಠ 9 ಮನೆಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ತಲುಪಿದೆ
ಆರ್.ಬಿ.ತಿಮ್ಮಾಪುರ
ಅಬಕಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.