ADVERTISEMENT

ಮೂಲ ಸೌಲಭ್ಯಕ್ಕಾಗಿ ಸ್ಥಳೀಯರ ಪ್ರತಿಭಟನೆ

ಹಾವೇರಿಯ ಬಸವೇಶ್ವರ ನಗರದ 6ನೇ ವಾರ್ಡ್‌ನ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 6:16 IST
Last Updated 19 ಜನವರಿ 2017, 6:16 IST
ಮೂಲ ಸೌಲಭ್ಯಕ್ಕಾಗಿ ಸ್ಥಳೀಯರ ಪ್ರತಿಭಟನೆ
ಮೂಲ ಸೌಲಭ್ಯಕ್ಕಾಗಿ ಸ್ಥಳೀಯರ ಪ್ರತಿಭಟನೆ   

ಹಾವೇರಿ: ಇಲ್ಲಿನ ಬಸವೇಶ್ವರ ನಗರದ 6ನೇ ವಾರ್ಡ್‌ಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ನೇತೃತ್ವದಲ್ಲಿ ಬುಧವಾರ ಕೆಎಲ್‌ಇ ಶಾಲೆಯ ಎದುರಿನ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ಘಟಕದ ಅಧ್ಯಕ್ಷ ಬಸವರಾಜ ಟೀಕೆಹಳ್ಳಿ ಮಾತನಾಡಿ, ‘ಇಲ್ಲಿನ ರಸ್ತೆಗಳು ಕಾಂಕ್ರಿಟ್‌ ಇಲ್ಲದೇ ಹದಗೆಟ್ಟಿವೆ. ಇದರಿಂದ, ವಿಪರೀತ ದೂಳು ಏಳುತ್ತಿದ್ದು, ಆಸ್ತಮಾ ಮತ್ತಿತರ ರೋಗಗಳ ಭೀತಿ ಕಾಡುತ್ತಿದೆ. ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ವಾರದಲ್ಲಿ ಒಂದು ದಿನವಾದರೂ ನೀರು ಬಿಡಬೇಕು.

ವಾರ್ಡ್‌ನಲ್ಲಿ 24X7 ಕುಡಿಯುವ ನೀರಿನ ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸಬೇಕು. ಎರಡು ಕೊಳವೆ ಬಾವಿಯನ್ನು ಕೊರೆಯಿಸಬೇಕು’ ಎಂದು ಆಗ್ರಹಿಸಿದರು.

ಸ್ಥಳೀಯ ನಿವಾಸಿ ರಾಜೇಶ್ವರಿ ಜಿ.ಎಚ್ ಮಾತನಾಡಿ, ‘ರಸ್ತೆಯ ದೂಳು ಮನೆಯೊಳಗೆ ಬರುತ್ತದೆ. ಇದರಿಂದ  ರೋಗದ ಭೀತಿ ಕಾಡುತ್ತಿದೆ. ಇನ್ನೂ ಚರಂಡಿ ನಿರ್ಮಿಸಿಲ್ಲ. ಕೆಲವು ಚರಂಡಿಗಳನ್ನು ಒಮ್ಮೆಯೂ ಸ್ವಚ್ಛ ಗೊಳಿಸಿಲ್ಲ. ಬೀದಿ ದೀಪವೂ ಇಲ್ಲ’ ಎಂದು ದೂರಿದರು.

ಸ್ಥಳಕ್ಕೆ ಬಂದು ಅಹವಾಲು ಸ್ವೀಕರಿಸಿದ ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ ಹಾಗೂ ಪೌರಾಯುಕ್ತ ಶಂಕ್ರಪ್ಪ ಬಾರ್ಕಿ, ‘ಫೆಬ್ರುವರಿ ಒಳಗಾಗಿ ರಸ್ತೆ ಹಾಗೂ ಕುಡಿಯುವ ನೀರಿನ ಕಾಮಗಾರಿಗಳನ್ನು ಪ್ರಾರಂಭಿಸುತ್ತೇವೆ’ ಎಂದು ಭರವಸೆ ನೀಡಿದರು. ಭರವಸೆಯನ್ನು ಲಿಖಿತ ರೂಪದಲ್ಲಿ ನೀಡುವಂತೆ ಪ್ರತಿಭಟನಾ ಕಾರರು ಪಟ್ಟುಹಿಡಿದಾಗ, ಅಧ್ಯಕ್ಷೆ ಹಾಗೂ ಪೌರಾಯುಕ್ತರು ಸ್ಥಳದಿಂದ ವಾಪಾಸಾದರು. 

ಸ್ಥಳಕ್ಕೆ ಬಂದ ನಗರ ಪೊಲೀಸ್‌ ಠಾಣೆಯ ಸರ್ಕಲ್‌ ಇನ್ಸ್‌ಪೆಕ್ಟರ್‌ ಮಹಾಂತೇಶ ಹೋಳಿ ಪ್ರತಿಭಟನಾ ಕಾರರ ಮನವೊಲಿಸಿದರು. ಮತ್ತೆ ಸ್ಥಳಕ್ಕೆ ಬಂದ ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ, ‘15 ದಿನಗಳ ಒಳಗಾಗಿ ಕೊಳವೆಬಾವಿ ಕೊರೆಯಿಸಲಾಗುವುದು. ಚರಂಡಿಗಳನ್ನು ಸ್ವಚ್ಛಗೊಳಿಸಲಾಗು ವುದು, ರಸ್ತೆ ಡಾಂಬರೀಕರಣವನ್ನು ಮಾರ್ಚ್‌ 31ರ ಒಳಗಾಗಿ ಪೂರ್ಣ ಗೊಳಿಸಲಾಗುವುದು’ ಎಂದರು. 

ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ ವಸಂತ ಕಡತಿ, ಜಿಲ್ಲಾಧ್ಯಕ್ಷ ಅಣ್ಣಯ್ಯ ಚಾವಡಿ, ಮಾಲತೇಶ ಪಾಟೀಲ, ನವೀನ ಅಪ್ಪಾಜಿ, ಅಶೋಕ ದೇವಿಹೊಸೂರ, ಅಷ್ಪಾಕ್ ಮಳಗಿ, ಈರಯ್ಯ ಹಿರೇಮಠ, ಶಣ್ಮುಕಪ್ಪ ತಳಕಲ್ಲು, ಯಶ್ವಂತ ಬಾರಂಗಿ, ಪುಷ್ಪಾ ದಾನಪ್ಪನವರ, ವಿನೋದಾ ಬಾರಂಗಿ, ಸರೋಜಾ ಬೇವಿನಹಳ್ಳಿ, ಲಲಿತಾ ಪಾಟೀಲ, ಲೀಲಾವತಿ ತಳಕಲ್‌, ಸುಮಾ ಮಟ್ಟಿ, ರಾಜೇಶ್ವರಿ ಜಿ.ಎಚ್, ಪಾರ್ವತಿ ನರೇಂದ್ರ, ಗೌರಮ್ಮ ಪಾಟೀಲ, ಮಹೇಶ ತಳಕಲ್ಲು, ಲಕ್ಕನಗೌಡ್ರ, ಮಳೆಪ್ಪನವರ ಮತ್ತಿರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT