ADVERTISEMENT

ಮೌಲ್ಯಗಳನ್ನು ಎತ್ತಿಹಿಡಿದ ರಾಜ್‌ಕುಮಾರ್

ಜಿಲ್ಲಾಡಳಿತ–ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 10:56 IST
Last Updated 25 ಏಪ್ರಿಲ್ 2018, 10:56 IST

ಹಾವೇರಿ:‘ಚಲನಚಿತ್ರಗಳು, ಚಳವಳಿಗಳ ಮೂಲಕ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಮೌಲ್ಯಗಳನ್ನು ಎತ್ತಿಹಿಡಿದವರು ಕರ್ನಾಟಕ ಕಂಡ ಮೇರು ವ್ಯಕ್ತಿತ್ವದ ನಟ ರಾಜ್‌ಕುಮಾರ್’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಹೇಳಿದರು.

ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ‘ರಾಜ್‌ ಕುಮಾರ್ ಅವರ 90ನೇ ಜಯಂತಿ’ಯಲ್ಲಿ ಅವರು ಮಾತನಾಡಿದರು.

ರಾಜಕುಮಾರ್ ಒಬ್ಬ ನಟನಾಗಿ ಉಳಿದುಕೊಳ್ಳದೇ ಗಾಯಕರಾಗಿ, ನಾಡು-ನುಡಿಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ನಮ್ಮ ಭಾಷೆ, ಸಂಸ್ಕೃತಿ, ಪರಂಪರೆಗೆ ವಿಶಿಷ್ಟವಾದ ಕೊಡುಗೆಗಳನ್ನು ನೀಡಿದ್ದಾರೆ ಎಂದರು.

ADVERTISEMENT

ರಂಗಭೂಮಿ, ಚಲನಚಿತ್ರ ಹಾಗೂ ಗಾಯನದಲ್ಲಿ ಅತ್ಯುತ್ತಮ ಪ್ರತಿಭೆ ಹೊಂದಿದ ರಾಜಕುಮಾರ್ ಅವರು ಅಭಿನಯಿಸಿದ ಚಿತ್ರಗಳ ಹಾಡುಗಳು ಸದಭಿರುಚಿಯಿಂದ ಕೂಡಿವೆ. ಅವರ ಅಭಿನಯಿಸಿದ ಹಲವು ಅಧ್ಯಾತ್ಮಿಕ, ಪೌರಾಣಿಕ ಪಾತ್ರಗಳು ಜನರ ಮನಸ್ಸಿನಲ್ಲಿ ಇನ್ನೂ ಆಳವಾಗಿ ಬೇರೂರಿವೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಮಾತನಾಡಿ, ಅತ್ಯಂತ ಸರಳ ವ್ಯಕ್ತಿತ್ವದ ಮಾನವೀಯ ಗುಣಗಳ ರಾಜಕುಮಾರ್ ಅವರು ಕನ್ನಡ ಚಲನಚಿತ್ರಗಳ ಚಿಕ್ಕ ಮಾರುಕಟ್ಟೆಯನ್ನು ಬೃಹತ್ ಆಗಿ ವಿಸ್ತರಿಸಿದ್ದಾರೆ ಎಂದರು.

ಕನ್ನಡ ಸಾಂಸ್ಕೃತಿಕ ಇತಿಹಾಸವನ್ನು ಬೆಳೆಸಿದ್ದಾರೆ. ಅವರು ಹಲವು ಸಂದಿಗ್ದ ಸ್ಥಿತಿಯಲ್ಲಿಯೂ ತನ್ನ ಅದ್ಭುತ ವ್ಯಕ್ತಿತ್ವ ಮತ್ತು ಅಭಿಯನದ ಮೂಲಕ ಬೆಳೆದವರು ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಮಾತನಾಡಿ, ನಟನೆ ಹಾಗೂ ನಡವಳಿಕೆಯಿಂದ ಎಲ್ಲ ವಯೋಮಾನದವರ ಮನಗೆದ್ದ ರಾಜಕುಮಾರ್ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುತ್ತಿರುವುದು ಸಂತೋಷದ ವಿಷಯ ಎಂದರು.

ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಸರಳ ಸಜ್ಜನಿಕೆಯ ಪ್ರತಿಭಾನ್ವಿತ ವ್ಯಕ್ತಿತ್ವ ಹೊಂದಿದ ರಾಜ್ ಕುಮಾರ್ ನಾಡು –ನುಡಿಯ ಶ್ರೀಮಂತಿಕೆಯನ್ನು ಹೆಚ್ಚಿಸಿದವರು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ, ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ್ ಮಾತನಾಡಿದರು.

ರಂಜಿಸಿದ ರಾಜ್ ಗೀತೆಗಳು:

ಜಯಂತಿ ಅಂಗವಾಗಿ ಆಯೋಜಿಸಿದ್ದ ರಾಜ್‌ಕುಮಾರ್ ಚಲನಚಿತ್ರಗಳ ಗೀತೆಗಳ ಗಾಯನ’ ಕಾರ್ಯಕ್ರಮವು ವಿಶೇಷ ಮೆರಗು ನೀಡಿತು. ಗಾಯಕರಾದ ಎ.ಬಿ.ಗುಡ್ಡಳ್ಳಿ, ಆರ್.ಸಿ.ನಂದಿಹಳ್ಳಿ, ಹನುಮಂತ ಕರವಾಳ ಹಾಡಿದರು. ಕವಿ ಓಂಕಾರಪ್ಪ ಅವರು ಡಾ.ರಾಜಕುಮಾರ್ ಅವರ ಕುರಿತು ಕವನ ರಚಿಸಿ ವಾಚಿಸಿದರು. ಶಿಕ್ಷಕ ನಾಗರಾಜ ನಡುವಿನಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ನಾಗರಾಜ ಇದ್ದರು.

**
ರಾಜ್ ಅಭಿನಯದ ‘ಬಂಗಾರದ ಮನುಷ್ಯ’ ಮತ್ತಿತರ ಸಿನಿಮಾಗಳು ಸಾಮಾಜಿಕ ಮೌಲ್ಯದಿಂದ ಕೂಡಿದ್ದು, ಶ್ರಮದ ಹಾಗೂ ಸ್ವಾಭಿಮಾನದ ಬದುಕಿಗೆ ಪ್ರೇರಣೆಯಾಗಿವೆ
– ಡಾ.ವೆಂಕಟೇಶ್ ಎಂ.ವಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.