ADVERTISEMENT

ಯುವಕರು ಪರಂಪರೆಯ ಪ್ರವರ್ತಕರು

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 9:41 IST
Last Updated 14 ಜುಲೈ 2017, 9:41 IST

ಶಿಗ್ಗಾವಿ: ‘ಭಾರತವು ಜಗತ್ತಿನಲ್ಲಿ ಅತ್ಯಂತ ಮಹತ್ವದ ಐತಿಹಾಸದ ಪರಂಪರೆ ಹೊಂದಿದೆ. ಅಂಥ ಐತಿಹಾಸಿಕ ಪರಂ ಪರೆಯ ವಾರಸುದಾರರು ಇಂದಿನ ಯುವಪೀಳಿಗೆ. ಪರಂಪರೆಯನ್ನು ಮುಂದಿನ ತಲೆಮಾರಿಗೆ ಸಾಗಿಸುವ ಜವಾಬ್ದಾರಿ ಅವರದ್ದೆ’ ಎಂದು  ದ್ವಿತೀಯ ಪಿಯುಸಿ ಕನ್ನಡ ಪಠ್ಯ ಪುಸ್ತಕ ಮಂಡಳಿ ಸಂಚಾಲಕ ಡಾ. ಎಚ್.ಎಸ್.ಸತ್ಯನಾರಾಯಣ ಹೇಳಿದರು.

ಪಟ್ಟಣದ ಚನ್ನಪ್ಪ ಕುನ್ನೂರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಚನ್ನಪ್ಪ ಕುನ್ನೂರ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ನಡೆದ ‘ಹಳೇಗನ್ನಡ ಓದು’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪರಂಪರೆ ಅರ್ಥೈಯಿಸಿಕೊಂಡಾಗ ಮಾತ್ರ ನಾಡು, ನುಡಿ ಕುರಿತು ಸ್ವಪ್ರೇರಣೆ ಮೂಡಲು ಸಾಧ್ಯವಿದೆ.  ಜೈನ ಪರಂಪರೆ, ಶರಣರ ಪರಂಪರೆ, ನಂತರದ ರನ್ನ–ಪಂಪರ ಪರಂಪರೆ ಕನ್ನಡ ಸಾಹಿತ್ಯದ ಹಿರಿಮೆ ಹೆಚ್ಚಿಸಿದೆ. ಕವಿ ಕವಿರಾಜ ಮಾರ್ಗ ಹೇಳಿದಂತೆ ಯುವಕರು ಯಾವುದೇ ದೇಶದ ಅಮೂಲ್ಯ ಸಂಪತ್ತು. ಇತರರ ಜಾತಿ, ಧರ್ಮಗಳನ್ನು ಸಹಿಕೊಳ್ಳುವುದೆ ನಿಜವಾದ ಧರ್ಮ’ ಎಂದರು.

ADVERTISEMENT

ಮಾಜಿ ಸಂಸದ ಮಂಜುನಾಥ ಕುನ್ನೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘ಪಠ್ಯ ಪುಸ್ತಕಗಳು ಮಕ್ಕಳಿಗೆ ಹೊರೆಯಾಗದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸಬೇಕು. ಅದರಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಕಲಿಕೆಗೆ ವಯಸ್ಸಿನ ಇತಿ–ಮಿತಿಗಳಿಲ್ಲ. ಆದರೆ ಅದಕ್ಕೆ ಭಾಷೆ ಕುರಿತು ಆಸಕ್ತಿ, ಅಭಿರುಚಿ ಅಗತ್ಯ’ ಎಂದರು.

ಚನ್ನಪ್ಪ ಕುನ್ನೂರ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರಾಜು ಕುನ್ನೂರ ಮಾತನಾಡಿ, ‘ಬಳಕೆ ಹೆಚ್ಚಿದಂತೆ ಭಾಷೆಯ ಬೆಳವಣಿಗೆಗೆ ಕಾರಣವಾಗುತ್ತದೆ’ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ.ನಾಗರಾಜ ದ್ಯಾಮನಕೊಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಕನ್ನಡ ಭಾಷೆ ಕುರಿತು ಅಭಿರುಚಿ ಮೂಡಿಸಿಕೊಳ್ಳಬೇಕು. ಅದು ಬದುಕಿನ ಅಧ್ಯಯನವಾಗಿದೆ. ವಿದ್ಯಾರ್ಥಿಗಳು ಹಳೇಗನ್ನಡ ಓದು ಹವ್ಯಾಸ ಬೆಳೆಯಬೇಕು’ ಎಂದರು. ಹಿರಿಯ ಮುಖಂಡ ಶಿವಾನಂದ ರಾಮಗೇರಿ ಮಾತನಾಡಿ, ‘ಮಕ್ಕಳಲ್ಲಿ ಹಳೇಗನ್ನಡ ಕುರಿತು ಆಸಕ್ತಿ ಮೂಡಿಸಬೇಕು ಎಂದರು.

ವೀರಣ್ಣ ಬಡ್ಡಿ, ನಿಂಗಪ್ಪ ಸೋಮಣ್ಣವರ, ಮಹಾರುದ್ರಪ್ಪ ಯಲಿಗಾರ, ಶಿವಪುತ್ರಪ್ಪ ಜಕ್ಕನವರ, ಸಿ.ಎನ್‌.ಶಿಗ್ಗಾವಿ,ಗೊಳಪ್ಪ ಪ್ಯಾಟಿ, ಕೆ.ಎಸ್‌.ಬರದೆಲಿ, ಎಂ.ಎಸ್‌.ಕುರಂದವಾಡ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.