ADVERTISEMENT

‘ರೈತರು ಉಪ ಕಸುಬು ಅಳವಡಿಸಿಕೊಳ್ಳಲಿ’

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 9:22 IST
Last Updated 7 ಜುಲೈ 2017, 9:22 IST

ಹಾನಗಲ್: ‘ಉಪ ಕಸುಬುಗಳ ಮೂಲಕ ರೈತರು ಆರ್ಥಿಕವಾಗಿ ಸದೃಢರಾಗಬೇಕು. ಪಶು ಇಲಾಖೆಯ ಸಲಹೆ ಪಡೆದುಕೊಂಡು ಹಾಲು ಉತ್ಪಾದನೆ ಪ್ರಮಾಣ ಹೆಚ್ಚಿಸಬೇಕು’ ಎಂದು ಶಾಸಕ ಮನೋಹರ ತಹಶೀಲ್ದಾರ್‌ ಹೇಳಿದರು.

ತಾಲ್ಲೂಕಿನ ಗೊಂದಿಯಲ್ಲಿ ಮಂಗಳವಾರ ಪಶು ಇಲಾಖೆ ಹಾಗೂ  ಹಾಲು ಉತ್ಪಾದಕರ ಮಹಿಳಾ ಸಂಘ ಆಯೋಜಿಸಿದ್ದ ‘ಮಿಶ್ರತಳಿ ಹಸು, ಎಮ್ಮೆ ಹಾಗೂ ಕರುಗಳ ಪ್ರದರ್ಶನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೈನುಗಾರಿಕೆ ಹೆಚ್ಚಿಸುವ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ಉತ್ತಮ ತಳಿಯ ಜಾನುವಾರುಗಳ ಪ್ರದರ್ಶನ ಏರ್ಪಡಿಸಿ ರೈತರನ್ನು ಉತ್ತೇಜಿಸಬೇಕು ಎಂದರು.
‘ಪಶು ಭಾಗ್ಯ ಯೋಜನೆ ಜಾರಿಗೊಳಿಸುವ ಮೂಲಕ ರಾಜ್ಯ ಸರ್ಕಾರ ಹೈನುಗಾರಿಕೆ ಉತ್ತೇಜನ ನೀಡುತ್ತಿದೆ’ ಎಂದರು.

ADVERTISEMENT

ಧಾರವಾಡ ಕೆಎಂಎಫ್‌ ನಿರ್ದೇಶಕ ಹನುಮಂತಗೌಡ ಭರಮಣ್ಣನವರ ಮಾತನಾಡಿ, ‘ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ರಾಜಕೀಯ ಬೆರೆಯಬಾರದು. ಹಾಲಿಗೆ ಜಾತಿಯ ಸೊಂಕಿಲ್ಲ. ಹಾಗೆಯೇ ಉತ್ಪಾದಕ ಸಂಘವು ಜಾತಿ, ರಾಜಕೀಯ ಹೊರತಾಗಿ ಇದ್ದಾಗ ಮಾತ್ರ ಪ್ರಗತಿ ಸಾಧ್ಯವಿದೆ’ ಎಂದರು.

‘ಹಾಲು ಉತ್ಪಾದನೆ ಮುಖ್ಯ ಕಸುಬಾಗಿ ಪರಿವರ್ತಿತಗೊಂಡಿದೆ. ಹಾಲಿಗೆ ನೀರು ಬೆರೆಸುವ ಕಲಬೇರಿಕೆ ಪದ್ಧತಿ ಬೇಡ. ಇದರಿಂದ ಗುಣಮಟ್ಟ ಕುಸಿತಗೊಂಡು ಸಂಘದ ಶ್ರೇಯಸ್ಸಿಗೆ ಮಾರಕವಾಗುತ್ತದೆ. ಜಿಲ್ಲೆಯಲ್ಲಿ ಹಾನಗಲ್‌ ಹಾಲು ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ರಾಘವೇಂದ್ರ ತಹಶೀಲ್ದಾರ್‌, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಸದಸ್ಯೆ ವಿದ್ಯಾ ಪಾಟೀಲ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರಭಾವತಿ ಕರಬುಳ್ಳೇರ, ಉಪಾಧ್ಯಕ್ಷೆ ರತ್ನವ್ವ ಪಾಟೀಲ, ಸದಸ್ಯರಾದ ಶ್ರೀಕಾಂತ ಪಾಟೀಲ, ಮಂಜುನಾಥ ಪಾಟೀಲ, ಕುಮಾರ ಶಂಕ್ರಿಕೊಪ್ಪ, ಪ್ರಕಾಶ ರೊಟ್ಟೇರ, ಮಲ್ಲವ್ವ ಶೇಷಗಿರಿ, ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಅಮಿತ್‌ ಪುಠಾಣಿಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.