ADVERTISEMENT

ರೈತರ ಪ್ರತಿಭಟನೆಗೆ ಜೆಡಿಎಸ್ ಬೆಂಬಲ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 7:15 IST
Last Updated 3 ಮಾರ್ಚ್ 2017, 7:15 IST

ಸವಣೂರ:  ಬೆಳೆವಿಮೆ ವಿತರಣೆಗಾಗಿ ಜಿಲ್ಲಾಡಳಿತ ಹಾಗೂ ಕೆಸಿಸಿ ಬ್ಯಾಂಕ್ ಅಧಿಕಾರಿಗಳ ವಿಳಂಬ ನೀತಿಯನ್ನು ಖಂಡಿಸಿ ಅಖಂಡ ಕರ್ನಾಟಕ ರೈತ ಸಂಘದ ಸದಸ್ಯರು ಹಾಗೂ ವಿವಿಧ ಗ್ರಾಮಗಳ ರೈತರು ಸೋಮವಾರದಿಂದ ಕೆಸಿಸಿ ಬ್ಯಾಂಕ್‌ಗೆ ಬೀಗ ಜಡಿದು ಬ್ಯಾಂಕ್ ಮುಂಭಾಗದಲ್ಲಿ ಕೈಗೊಳ್ಳುತ್ತಿರುವ ಪ್ರತಿಭಟನೆಗೆ ಗುರುವಾರ ಜೆಡಿಎಸ್ ಪಕ್ಷ ಬೆಂಬಲ ಸೂಚಿಸಿದೆ.

ಜೆ.ಡಿ.ಎಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬೇವಿನಮರದ ಮಾತನಾಡಿ, 2015 ನೇ ಸಾಲಿನ ಬೆಳೆ ವಿಮೆಗಾಗಿ ರೈತರು ಹಣವನ್ನು ಭರಿಸಿ ದ್ದಾರೆ. ಈ ಕುರಿತು ವಿಮಾಕಂಪೆನಿಯಿಂದ ಹಣವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಲಿಖಿತ ರೂಪದಲ್ಲಿ ರೈತರಿಗೆ ಮಾಹಿತಿಯನ್ನು ನೀಡಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಬ್ಯಾಂಕ್‌ನ ವಿಳಂಬದಿಂದಾಗಿ ರೈತರು ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಜಿಲ್ಲಾ ಕಾರ್ಯಾಧ್ಯಕ್ಷರಾದ ಡಿ.ಎಸ್ ಮಾಳಗಿಯವರು ಮಾತನಾಡಿ, ಸವಣೂರ ತಾಲ್ಲೂಕು ಭೀಕರ ಬರಗಾಲಕ್ಕೆ ತುತ್ತಾಗಿದ್ದು, ರೈತರಿಗೆ ಕೂಲಿ ಕಾರ್ಮಿಕರಿಗೆ ಬಹಳ ತೊಂದರೆಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದವರು ತಕ್ಷಣ ಬೆಳೆ ಪರಿಹಾರವನ್ನು ಪ್ರತಿ ಎಕರೆಗೆ ₹ 25 ಸಾವಿರ ನೀಡಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಮುಖಂಡರಾದ ಡಾ. ಸಂಜಯ ಡಾಂಗೆ, ಖತಲಸಾಬ ಬಣಗಾರ, ರಮೇಶಗೌಡ ಪಾಟೀಲ, ಸುನೀಲ್ ದಂಡೆಮ್ಮನವರ, ಇಕ್ಬಾಲ್ ಕೊಲ್ಲಾಪುರ, ಸುರೇಶ ಸೂರದ, ರಶೀದ ಲಕ್ಷ್ಮೇಶ್ವರ, ಅರೀಫ್ ಗೂಳಿಹಳ್ಳಿ, ಮಂಜುನಾಥ ಕನ್ನಾಯಕ, ರೈತ ಸಂಘದ ಜಿಲ್ಲಾಕಾರ್ಯಾಧ್ಯಕ್ಷ ಪ್ರಕಾಶ ಬಾರ್ಕಿ,ರಾಜು ಗುಂಜಳ,ನೀಲಪ್ಪ ಹರಿಜನ, ಎನ್.ಸಿ.ಗೊಡ್ಡೆಮ್ಮಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.