ADVERTISEMENT

ರೈತರ ಸಮಸ್ಯೆ ಪರಿಹರಿಸಲು ವಿಫಲ: ಆರೋಪ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 9:02 IST
Last Updated 5 ಡಿಸೆಂಬರ್ 2017, 9:02 IST

ಬ್ಯಾಡಗಿ:‘ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಸೇರಿದಂತೆ ರೈತರ ಹಲವು ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗುತ್ತಿಲ್ಲ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್‌.ಪುಟ್ಟಣಯ್ಯ ದೂರಿದರು.

ಹಾವೇರಿಯಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರು ಭಾನುವಾರ ರಾಣೆಬೆನ್ನೂರು ತಾಲ್ಲೂಕಿನ ಅಸುಂಡಿ ಕೆರೆಯನ್ನು ವೀಕ್ಷಿಸಿ ಬಳಿಕ ಅವರು ಮಾತನಾಡಿದರು.

ಅಸುಂಡಿ ಕೆರೆಯ ಮೂಲಕ ತಾಲ್ಲೂಕಿನ ಮಾಸಣಗಿ, ಆಣೂರು ಕೆರೆಗಳನ್ನು ತುಂಬಿಸುವ ಕುರಿತು ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುವ ಭರವಸೆ ನೀಡಿದರು.

ADVERTISEMENT

‘ಕೃಷಿ ಉತ್ಪನ್ನಗಳಿಗೆ ರೈತರೇ ಬೆಲೆ ನಿಗದಿ ಮಾಡುವಂತಾಗಬೇಕು. ಅಂದಾಗ ಮಾತ್ರ ರೈತರ ಅಭಿವೃದ್ಧಿ ಸಾಧ್ಯ. ಭೂಮಿಯನ್ನೇ ನಂಬಿದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕಾಗಿದೆ. ರಾಜ್ಯದ ಒಟ್ಟು 42 ಸಾವಿರ ಕೆರೆಗಳ ಪೈಕಿ 28 ಸಾವಿರ ಕೆರೆಗಳು ದುರಸ್ತಿಯಲ್ಲಿವೆ.

ಕೃಷ್ಣಾ ಹಾಗೂ ಮಹದಾಯಿ ನದಿಗಳ ಹೋರಾಟಕ್ಕೆ ಮನ್ನಣೆ ದೊರೆಯದೇ ಇರುವುದು ತುಂಬ ವಿಷಾದನೀಯ’ ಎಂದರು. ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ರುದ್ರಗೌಡ ಕಾಡನಗೌಡ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.