ADVERTISEMENT

ಲಾರಿ, ಟಿಪ್ಪರ್‌ ತಡೆದು ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 5:58 IST
Last Updated 22 ಸೆಪ್ಟೆಂಬರ್ 2017, 5:58 IST

ರಾಣೆಬೆನ್ನೂರು: ‘ಭಾರಿ ವಾಹನ ಸಂಚಾರದಿಂದ ಬೆಳೆಗಳಿಗೆ ಹಾನಿಯಾಗುತ್ತಿದೆ’ ಎಂದು ಆರೋಪಿಸಿ ತುಂಗಭದ್ರಾ ನದಿ ತೀರದ ರೈತರು ಬುಧವಾರ ತಾಲ್ಲೂಕಿನ ಮುದೇನೂರು ಬಳಿ ಮರಳು ಅಕ್ರಮ ಸಾಗಾಟದ ಲಾರಿ, ಟಿಪ್ಪರ್ ಮತ್ತಿತರ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.

‘ಮುದೇನೂರು ಮತ್ತು ನಾಗೇನಹಳ್ಳಿ ಗ್ರಾಮಗಳ ನಡುವೆ ಮರಳು ಶೇಖರಣಾ ಘಟಕ ನಿರ್ಮಿಸಲಾಗಿದೆ. ಮುಖ್ಯ ರಸ್ತೆಯಿಂದ ಇಲ್ಲಿಗೆ 3 ಕಿ.ಮೀ. ದೂರವಿದ್ದು, 50 ರೈತರ ಜಮೀನುಗಳ ನಡುವಿನ ರಸ್ತೆ ಮೂಲಕ ಸಾಗಬೇಕು. ಇದರಿಂದ ನೀರಿನ ಪೈಪ್‌ಲೈನ್‌ಗಳು ಒಡೆದು ಹೋಗಿ, ಭತ್ತದ ಬೆಳೆ ನಷ್ಟವಾಗಿದೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

‘ಇನ್ನೂ ಕೆಲವು ಲಾರಿ, ಟಿಪ್ಪರ್‌ಗಳು ನೇರವಾಗಿ ನದಿಗೆ ತೆರಳಿ ಮರಳನ್ನು ಅಕ್ರಮವಾಗಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿವೆ. ಮಂಗಳವಾರ ಸರ್ಕಾರಿ ರಜೆ ಇದ್ದರೂ, ಲಾರಿ ಮರಳು ತುಂಬಿಕೊಂಡು ಹೋಗಿವೆ. ಅಕ್ರಮ ದಂಧೆ ಎಗ್ಗಿಲ್ಲದೆ ನಡೆಯುತ್ತಿವೆ’ ಎಂದು ರೈತರು ದೂರಿದರು.

ADVERTISEMENT

ಸ್ಥಳಕ್ಕೆ ಬಂದ ಗ್ರಾಮೀಣ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಆರ್.ಡಿ ಮರುಳಸಿದ್ದಪ್ಪ, ಸಬ್‌ ಇನ್‌ಸ್ಪೆಕ್ಟರ್ ಶ್ರೀಶೈಲ ಚೌಗಲಾ ‘ ಮರಳು ಅಕ್ರಮ ಸಾಗಾಟದ ಲಾರಿಗಳ ಮೇಲೆ ಪ್ರಕರಣ ದಾಖಲಿಸಲಾಗುವುದು. ಇಂದಿನಿಂದಲೇ ಮರಳು ಸಾಗಾಟ ಸ್ಥಗಿತಗೊಳಿಸಲಾಗುವುದು’ ಎಂದು ಭರವಸೆ ನೀಡಿದ ಮೇಲೆ ರೈತರು ಪ್ರತಿಭಟನೆ ಹಿಂಪಡೆದರು.
ಗಣಿ ಇಲಾಖೆ ಸಿಬ್ಬಂದಿ ಶಿವಪುತ್ರಪ್ಪ ಕೋಳಿ, ಮುದೇನೂರ ಪಿಡಿಒ ಇದ್ದರು.

ರೈತಸಂಘದ ಹನುಮಂತಪ್ಪ ಕಬ್ಬಾರ, ಈರನಗೌಡ ಬೆಂಕಿಗೌಡ್ರ, ಮಹಾದೇವಪ್ಪ ಮಲ್ಲಾಪುರ, ಶಿವಕುಮಾರ ಕೆಂಪಣ್ಣನವರ, ಬಸವರಾಜ ನಿಟ್ಟೂರ, ಪ್ರಭು ಅಂಗಡಿ, ಭೀಮನಗೌಡ ಹುಲಿಗಿನಹೊಳಿ, ಧರ್ಮಪ್ಪ ದಾವಣಗೇರಿ, ಚಂದ್ರಪ್ಪ ಜಾಡರ, ಮಂಜಪ್ಪ ಬಣಕಾರ, ವಿರೂಪಾಕ್ಷಪ್ಪ ಸಣ್ಣಹನುಮನಗೌಡ್ರ, ಮಲ್ಲಿಕಾರ್ಜುನ ಹಲಗೇರಿ, ಹರೀಶ ಗೋವಿಂದಗೌಡ್ರ, ಪರಸಪ್ಪ ಮಲ್ಲಾಪುರ, ಶಿವಾಜಪ್ಪ ಅಂಗಡಿ, ವಿಕ್ರಮ ಮರಡೇರ, ರಘು ಗೋವಿಂದಗೌಡ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.