ADVERTISEMENT

ವಸತಿ ಯೋಜನೆ ಅನುದಾನ ಬಿಡುಗಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2017, 9:04 IST
Last Updated 17 ಡಿಸೆಂಬರ್ 2017, 9:04 IST

ಶಿಗ್ಗಾವಿ: ವಾಜಪೇಯಿ ನಗರ ವಸತಿ ಯೋಜನೆಗೆ ಅನುದಾನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರ ಹಿತರಕ್ಷಣೆ ಮತ್ತು ಜಾಗೃತಿ ವೇದಿಕೆ ಸದಸ್ಯರು ಶಿಗ್ಗಾವಿಯಲ್ಲಿ ಶುಕ್ರವಾರ ಪುರಸಭೆ ಎದುರು ಪ್ರತಿಭಟನೆ ನಡೆಸಿದರು.

‘ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಯೋಜನೆ ಮತ್ತು ವಾಜಪೇಯಿ ನಗರ ವಸತಿ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ಮನೆಗಳ ಫಲಾನುಭವಿಗಳಿಗೆ ಬಾಕಿ ಉಳಿದ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು.  ಹಣ ಬಿಡುಗಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಳಂಬ ನೀತಿ ಅನುಸರಿಸುತ್ತಿವೆ. ಅದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ದೂರಿದರು.

‘ಮಾರುಕಟ್ಟೆಯಲ್ಲಿ ಮರಳು ಸಿಗುತ್ತಿಲ್ಲ. ಮನೆ ನಿರ್ಮಾಣದ ಸಾಮಗ್ರಿ ದರ ಹೆಚ್ಚುತ್ತಲೇ ನಡೆದಿದೆ. ಕಾರ್ಮಿಕರ ಕೂಲಿಯೂ ಹೆಚ್ಚುತ್ತಿದೆ. ಮನೆಗಳ ಕಾಮಗಾರಿ ಅರ್ಧಕ್ಕೆ ನಿಂತಿವೆ.ಒಂದೆಡೆ ಕೈಯಲ್ಲಿದ್ದ ಹಣವೂ ಮುಗಿದಿದೆ. ಮತ್ತೊಂದೆಡೆ ಮನೆಯೂ ಪೂರ್ಣಗೊಂಡಿಲ್ಲ. ಸಾಲಗಾರರು ಮನೆ ಬಾಗಿಲಿಗೆ ಅಲೆಯುತ್ತಿದ್ದಾರೆ. ಹೀಗಾಗಿ ಸರ್ಕಾರ ತಕ್ಷಣ ಉಳಿದ ಬಾಕಿ ಅನುದಾನ ಬಿಡುಗಡೆ ಮಾಡುಬೇಕು’ ಎಂದು ಆಗ್ರಹಿಸಿದರು.

ADVERTISEMENT

ಕಾರ್ಮಿಕರ ಹಿತರಕ್ಷಣೆ ಮತ್ತು ಜಾಗೃತಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಫಕ್ಕೀರೇಶ ಶಿಗ್ಗಾವಿ, ತಾಲ್ಲೂಕು ಘಟಕದ ಅಧ್ಯಕ್ಷ ಜಲ್ಲಾನಿ ಜಂಗ್ಲಿ, ರೇಖಾ ಕಳಸದ, ಪ್ರೇಮವ್ವ ಕಟ್ಟಿಮನಿ, ಅಬ್ದುಲ್‌ಖಾದರ್‌, ಸಿದ್ದಿಕ್‌ಅಹ್ಮದ ಅಂಬೂರ, ಹುಸೇನ್‌ ಶೇಖವಲ್ಲಿ, ಪ್ರೇಮಾ ದಾಸರ, ಅಕ್ಕಮ್ಮ, ದೇವಕ್ಕಾ, ಈರವ್ವ, ಶಾಂತವ್ವ, ರೇಣುಕಾ ಸೇರಿದಂತೆ ಅನೇಕ ಫಲಾನುಭವಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.