ADVERTISEMENT

‘ಶಿಷ್ಯನ ಹಣೆಬರಹ ಬದಲಿಸುವ ಗುರು’

ಸಾಯಿಬಾಬಾ ಸೇವಾ ಅಭಿವೃದ್ಧಿ ಟ್ರಸ್ಟ್‌ನಿಂದ ಗುರು ಪೂರ್ಣಿಮೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 11:05 IST
Last Updated 10 ಜುಲೈ 2017, 11:05 IST

ಹಿರೇಕೆರೂರ: ‘ಪರಕೀಯರು ನೂರಾರು ವರ್ಷ ಭಾರತದ ಸಂಪತ್ತು ಕೊಳ್ಳೆ ಹೊಡೆದರೂ ದೇಶದ ಸಾಂಸ್ಕೃತಿಕ ವೈಭವ, ಧಾರ್ಮಿಕ ಪ್ರಜ್ಞೆಯನ್ನು ಕೊಳ್ಳೆ ಹೊಡೆಯಲು ಸಾಧ್ಯವಾಗಲಿಲ್ಲ, ಕಾರಣ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದನ್ನು ಗುರುಗಳು ನಮಗೆ ಕಲಿಸಿದ್ದಾರೆ. ಶಿಷ್ಯನ ಹಣೆಬರಹ ಬದಲಿಸುವ ಶಕ್ತಿ ಗುರುವಿಗೆ ಇದೆ’ ಎಂದು ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.

ಪಟ್ಟಣದ ವಿಠ್ಠಲ ನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸಾಯಿ­ಬಾಬಾ ಸೇವಾ ಅಭಿವೃದ್ಧಿ ಟ್ರಸ್ಟ್‌ನಿಂದ ಭಾನುವಾರ ಹಮ್ಮಿಕೊಂಡಿದ್ದ ಗುರು ಪೂರ್ಣಿಮೆ ಉತ್ಸವದ ನಿಮಿತ್ತ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.

‘ಶಿರಡಿ ಸಾಯಿಬಾಬಾ ಅವರಂತಹ ಮಹಾಪುರುಷರ ಕಾರಣದಿಂದ ಧರ್ಮ ಸಂಸ್ಕೃತಿಯಲ್ಲಿ ನಡೆಯುತ್ತಿದ್ದೇವೆ. ಧಾರ್ಮಿಕ ವೈಭವವನ್ನು ಹೊಂದಿರುವ ದೇಶದಲ್ಲಿ ಗುರುಗಳನ್ನು ಶ್ರದ್ಧೆ, ನಿಷ್ಠೆಯಿಂದ ಸ್ಮರಿಸುವ, ಗೌರವಿಸುವ ದಿನ ಇದಾಗಿದ್ದು, ಇಂತಹ ಕೆಲಸ ಭಾರತದಲ್ಲಿ ಮಾತ್ರ ಸಾಧ್ಯ’ ಎಂದರು.

ADVERTISEMENT

‘ಎಲ್ಲರೂ ನಮ್ಮವರು ಎಂಬ ವಿಶಾಲ ಮನೋಭಾವ ಇರಬೇಕು. ಧರ್ಮ ಪ್ರಜ್ಞೆ ಸದಾಕಾಲ ಇರಬೇಕು. ‘ಸಬ್ ಕಾ ಮಾಲೀಕ್ ಏಕ್ ಹೈ’ ಎಂಬ ಸಂದೇಶ ನೀಡಿದ ಸಾಯಿಬಾಬಾ ಅವರು ಪೂಜಿ­ಸುವ, ಪ್ರಾರ್ಥಿಸುವ ವಿಧಾನ ಬೇರೆ­ಯಾದರೂ ದೇವರು ಒಬ್ಬನೇ. ಅವನಿಗೆ ಪೂಜೆ, ಪ್ರಾರ್ಥನೆ ಸಲ್ಲುತ್ತವೆ. ಶ್ರದ್ಧೆಯಿಂದ ಇದ್ದವರಿಗೆ ದೇವರ ಆಶೀರ್ವಾದ ಇರುತ್ತದೆ ಎಂದು ಸಾರಿದ್ದರು’ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಸಾಯಿ ಮಂದಿರ ಟ್ರಸ್ಟಿ ಶಿವಾಜಿರಾವ್ ಮಧೂರಕರ, ‘ಸಾಯಿಬಾಬಾ ಮಂದಿರದಲ್ಲಿ ಕಳೆದ ಅನೇಕ ವರ್ಷಗಳಿಂದ ಧಾರ್ಮಿಕ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದು, ಬಡ ರೋಗಿಗಳಿಗೆ ಕಳೆದ 9 ವರ್ಷ­ಗಳಿಂದ ಉಚಿತವಾಗಿ ಆಯುರ್ವೇದ ಚಿಕಿತ್ಸೆ ಹಾಗೂ ಔಷಧಿ ವಿತರಣೆ ಮಾಡುತ್ತಿದ್ದೇವೆ. ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ನೀಡುವ ಉದ್ದೇಶವಿದೆ’ ಎಂದು ತಿಳಿಸಿದರು.

ಇಂಗಳಗೊಂದಿ ಗ್ರಾಮದ ವಾಲ್ಮೀಕಿ ಸಮಾಜದಿಂದ ಸಾಯಿ ಮಂದಿರ ಟ್ರಸ್ಟಿ ಶಿವಾಜಿರಾವ್ ಡಿ. ಮಧೂರಕರ ಅವರನ್ನು ಸನ್ಮಾನಿಸಲಾಯಿತು.

ನಿವೃತ್ತ ಮುಖ್ಯ ಶಿಕ್ಷಕ ಎಲ್.ಬಿ. ತೆಂಬದ, ವಕೀಲ ಎಸ್.ಎಸ್. ರಾಮಲಿಂಗಣ್ಣನವರ, ಶಾರದಮ್ಮ ಮಧೂರಕರ, ಮಾರುತಿ ಮಧೂರಕರ, ರುದ್ರಪ್ಪ ಶೆಟ್ಟರ್, ಬಸವರಾಜ ಚಕ್ರಸಾಲಿ, ಸಿದ್ಧಲಿಂಗಸ್ವಾಮಿ, ಚಂದ್ರು ಮಧೂರಕರ ಹಾಜರಿದ್ದರು. ಶಿಕ್ಷಕ ನಾಗರಾಜ ಹುಲ್ಲಿನಕೊಪ್ಪ ನಿರೂಪಿಸಿದರು.

ಗುರು ಪೂರ್ಣಿಮೆ ನಿಮಿತ್ತ ಬೆಳಿಗ್ಗೆ ಸಾಯಿ ಸಚ್ಚರಿತಾ ಅಖಂಡ ಪಾರಾಯಣ ಮುಕ್ತಾಯಗೊಂಡ ಬಳಿಕ ಶಿರಡಿ ಸಾಯಿಬಾಬಾ ಮೂರ್ತಿಗೆ ವಿಶೇಷ ಅಭಿಷೇಕ, ಪೂಜೆ ನಡೆಯಿತು.
ಸದಾಶಿವ ಸ್ವಾಮೀಜಿ ಅವರ ಪಾದ­ಪೂಜೆ ನೆರವೇರಿಸಿದ ನಂತರ ಮಹಾ ಮಂಗಳಾರತಿ ನಡೆದು ಅನ್ನಸಂತರ್ಪಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.