ADVERTISEMENT

‘ಸಣ್ಣ ಹಿಡುವಳಿದಾರರಿಗೂ ‘ನರೇಗಾ’ ವಿಸ್ತರಣೆ’

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 5:28 IST
Last Updated 5 ಸೆಪ್ಟೆಂಬರ್ 2017, 5:28 IST

ಹಾವೇರಿ: ‘ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯನ್ನು ಸಣ್ಣ ಹಾಗೂ ಅತೀ ಸಣ್ಣ ಹಿಡುವಳಿದಾರರಿಗೆ ವಿಸ್ತರಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ’ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

ರಾಣೆಬೆನ್ನೂರ ತಾಲ್ಲೂಕಿನ ಹನು ಮನಮಟ್ಟಿಯಲ್ಲಿನ ಧಾರವಾಡ ಕೃಷಿ ವಿಶ್ವವಿದ್ಯಾಲಯ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಸೋಮವಾರ ನಡೆದ ‘ಸಂಕಲ್ಪದಿಂದ ಸಿದ್ಧಿ’ಯ ‘ನವ ಭಾರತ ಮಂಥನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಸುಮಾರು 12 ಕೋಟಿ ರೈತರ ಪೈಕಿ 4ರಿಂದ 5 ಕೋಟಿ ರೈತರು ಮಾತ್ರ ಸರ್ಕಾರದಿಂದ ಸಾಲ ಪಡೆಯುತ್ತಿ ದ್ದಾರೆ. ಇನ್ನೊಂದೆಡೆ ರೈತರಲ್ಲದವರೂ ಕೃಷಿ ಸಾಲ ಪಡೆದಿದ್ದಾರೆ’ ಎಂದ ಅವರು. ‘ನರೇಗಾ  ಇತರರಿಗೂ ವಿಸ್ತರಿಸುವುದು ಹಾಗೂ ಬಿಪಿಎಲ್‌ ಪಡಿತರ ಚೀಟಿದಾರರಿಗೆ ಬಡ್ಡಿರಹಿತ ಸಾಲ ನೀಡುವ ಬಗ್ಗೆ ಚಿಂತನೆ ನಡೆದಿದೆ’ ಎಂದರು.

ADVERTISEMENT

‘ರಾಜ್ಯಕ್ಕೆ ಒಟ್ಟು ₹944 ಕೋಟಿ ಬೆಳೆ ವಿಮೆ ಬಿಡುಗಡೆಯಾಗಿದೆ. ಈ ಪೈಕಿ ನಮ್ಮ ಜಿಲ್ಲೆಗೆ ₹191 ಕೋಟಿ ಬಿಡುಗಡೆಯಾಗಿದ್ದು, ₹150 ಕೋಟಿ ರೈತರ ಖಾತೆಗೆ ಜಮಾ ಮಾಡಲಾಗಿದೆ’ ಎಂದರು.

‘ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯ ಲಾಭವನ್ನು ಶೇ 30ರಷ್ಟು ರೈತರು ಮಾತ್ರ ಪಡೆದುಕೊಳ್ಳುತ್ತಿದ್ದಾರೆ. ಎಲ್ಲರೂ ಪಡೆದುಕೊಳ್ಳಬೇಕು’ ಎಂದ ಅವರು, ‘ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡರೆ, ಕೃಷಿ ನಷ್ಟ ಆಗುವುದಿಲ್ಲ’ ಎಂದರು.

ಕೃಷಿ ಮಹಾವಿದ್ಯಾಲಯದ ಡೀನ್‌ ಡಾ.ಚಿದಾನಂದ ಮನ್ಸೂರ ಮಾತನಾಡಿ, ‘ರೈತರ ಕೃಷಿ ಆದಾಯವನ್ನು 2022ರೊಳಗೆ ದುಪ್ಪಟ್ಟುಗೊಳಿಸಲು ಕೇಂದ್ರವು ಜಾರಿಗೆ ತಂದ ‘ಸಂಕಲ್ಪದಿಂದ ಸಿದ್ಧಿ’ಯಲ್ಲಿ ಏಳು ಅಂಶಗಳಿವೆ’ ಎಂದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿಯ ಸದಸ್ಯ ಈಶ್ವರಚಂದ್ರ ಹೊಸಮನಿ ಮಾತನಾಡಿ, ‘ಈ ಹಿಂದೆ ನವಣೆ ಉಣ್ಣುವವರು ‘ಬಡವರು’, ಅನ್ನ ತಿನ್ನುವವರು ‘ಶ್ರೀಮಂತರು’ ಎನ್ನುತ್ತಿದ್ದರು. ಈಗ ಅದು ತದ್ವಿರುದ್ಧವಾಗಿದೆ’ ಎಂದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ವಿ.ಐ.ಬೆಣಗಿ ಮಾತನಾಡಿದರು. ‘ಸಂಕಲ್ಪದಿಂದ ಸಿದ್ಧಿ’ ಹಸ್ತಪ್ರತಿ ಬಿಡುಗಡೆ ಹಾಗೂ ಕೃಷಿ ಕುರಿತ ಚಲನಚಿತ್ರವನ್ನು ಪ್ರದರ್ಶನ ಮಾಡಲಾಯಿತು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಮಂಗಳಗೌರಿ, ಪ್ರಮುಖರಾದ ಡಾ.ತಿಪ್ಪಣ್ಣ ಹಠಾರಿ, ಮುರುಗೇಶ ಶೆಟ್ಟರ, ರವೀಂದ್ರ ಪಟ್ಟಣಶೆಟ್ಟಿ, ಜಿ.ಆರ್‌.ಗುರುಪ್ರಸಾದ, ವಿ.ಐ.ಅಣ್ಣಿಗೇರಿ, ಬೆಳವಪ್ಪ ಕೆ., ಎಲ್‌. ಮಂಜುನಾಥ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.