ADVERTISEMENT

ಸತ್ಯ–ಧರ್ಮ ಕಾಯಲು ಪೊಲೀಸ್

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 9:42 IST
Last Updated 14 ಜುಲೈ 2017, 9:42 IST

ಹಾವೇರಿ: ‘ಸತ್ಯ–ಧರ್ಮ ಪಾಲನೆಗೆ ಕಾನೂನು ಬೇಕಾಗಿಲ್ಲ. ಆದರೆ, ಅದರ ರಕ್ಷಣೆ ಮಾಡಲು ಕಾನೂನು ರಚಿಸಲಾಗಿದೆ. ಕಾಯುವ ಕೆಲಸವು ಪೊಲೀಸರ ಕರ್ತವ್ಯವಾಗಿದೆ’ ಎಂದು ಕರ್ನಾಟಕ ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷ ನ್ಯಾ. ಎ.ಎಸ್.ಪಾಶ್ಚಾಪೂರೆ ಹೇಳಿದರು.

ಇಲ್ಲಿನ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಗುರುವಾರ ನಡೆದ ‘ಕರ್ನಾಟಕ ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಕುರಿತು ಸಂವೇದನಾ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು. 

‘ಸಾರ್ವಜನಿಕರಲ್ಲಿ ಸಂತೃಪ್ತಿ ಮೂಡಿಸುವುದೇ ಪೊಲೀಸ್ ಶಕ್ತಿ. ನೀವು ಜನರಿಂದ ದೂರವಾದಷ್ಟು ಸಮಸ್ಯೆ ಹೆಚ್ಚುತ್ತದೆ. ಅದಕ್ಕಾಗಿ ಜನಸ್ನೇಹಿ ಆಗಬೇಕು’ ಎಂದರು.
‘ನ್ಯಾಯ ಕೇಳಿ ಬರುವ ನಾಗರಿಕರಿಗೆ ನೆಮ್ಮದಿ ನೀಡುವುದೇ ಪೊಲೀಸರ ಕೆಲಸ. ದೇವರು ಇಲ್ಲಿ ಬಂದು ಎಲ್ಲರ ಸಮಸ್ಯೆ ಇತ್ಯರ್ಥ ಪಡಿಸಲು ಸಾಧ್ಯವಿಲ್ಲ.

ADVERTISEMENT

ಅದಕ್ಕಾಗಿಯೇ ಪೊಲೀಸ್ ಇಲಾಖೆ ಇದೆ. ನೀವು ಪ್ರಾಮಾಣಿಕವಾಗಿ ಸಮಸ್ಯೆ ಬಗೆಹರಿಸಿದರೆ, ನಿಮ್ಮ ಜೀವನದಲ್ಲೂ ನೆಮ್ಮದಿ ಸಿಗಲು ಸಾಧ್ಯ’ ಎಂದರು. ‘ಠಾಣೆಗೆ ಬಂದ ವ್ಯಕ್ತಿ ನಗುನಗುತ್ತಾ ಹೊರಹೋಗಬೇಕು. ಅದಕ್ಕೆ ಸಮರ್ಥ, ಪ್ರಾಮಾಣಿಕ ಪೊಲೀಸ್‌ ಇರಬೇಕು’ ಎಂದರು. 

‘ಅಧ್ಯಾತ್ಮ ’ ಎಲ್ಲ ಧರ್ಮದ ತಾಯಿ. ಶಾಂತಿಗಾಗಿ ಮಹಾನ್ ನಾಯಕರು ಹೋರಾಡಿದ್ದಾರೆ. ಆದರೆ, ಸಮಾಜದಲ್ಲಿ ಸಂಪೂರ್ಣ ಶಾಂತಿ ಕಲ್ಪಿಸುವುದು ಇನ್ನೂ ಸಾಧ್ಯವಾಗಿಲ್ಲ’ ಎಂದರು. ‘ಪ್ರತಿ ವ್ಯಕ್ತಿತ್ವದಲ್ಲಿ ‘ವಸ್ತು ಸಾಪೇಕ್ಷತಾ ಜ್ಞಾನ’ ಮತ್ತು ‘ವಸ್ತು ನಿರಪೇಕ್ಷತಾ ಜ್ಞಾನ’ ಎಂದು ಇರುತ್ತದೆ. ವಸ್ತು ಸಾಪೇಕ್ಷತಾ ಜ್ಞಾನವು ಕೊಂಡುಕೊಳ್ಳುವ ಮನೋಭಾವ ಹೆಚ್ಚಿಸುತ್ತದೆಯೇ ಹೊರತು, ನಮ್ಮನ್ನು ಸದೃಢ, ಶಾಂತಿಯುತ, ಶಕ್ತಿ ಯುತವಾಗಿ ಮಾಡುವುದಿಲ್ಲ. ನಾವು ನಮ್ಮೊಳಗೆ ನೋಡುವುದನ್ನು ಆರಂಭಿಸಬೇಕು’ ಎಂದರು.

‘ಪೊಲೀಸ್ ಪ್ರಾಧಿಕಾರವು ಪೊಲೀಸರ ಬಲವರ್ಧನೆಗಾಗಿ ಇದೆ. ಸುಪ್ರೀಂ ಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ಜಾರಿಗೆ ಬಂದಿದ್ದರೂ, ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿಲ್ಲ. ರಾಜ್ಯ ಪ್ರಾಧಿಕಾರವು ಡಿಜಿಪಿ ಹುದ್ದೆ ತನಕದ ಪೊಲೀಸ್‌ ಅಧಿಕಾರಿಗಳ ‘ಗಂಭೀರ ತಪ್ಪು ನಡವಳಿಕೆ’ ಬಗ್ಗೆ ವಿಚಾರಣೆ ನಡೆಸಿದರೆ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಪ್ರಾಧಿಕಾರದ ಸಮಿತಿಯು ಡಿವೈಎಸ್ಪಿ ಹುದ್ದೆ ತನಕದ ಪೊಲೀಸರ ‘ಸಾಮಾನ್ಯ ತಪ್ಪು ನಡವಳಿಕೆ’ ಬಗ್ಗೆ ವಿಚಾರಣೆ ನಡೆಸುತ್ತದೆ’ ಎಂದರು.

ಪ್ರಾಧಿಕಾರದ ಸದಸ್ಯ ಎಂ.ಬಿ. ಕಾಂಬಳೆ ಮಾತನಾಡಿ, ‘ಬ್ರಿಟಿಷರು ವಸಾಹತುಶಾಹಿ ಕಾನೂನುಗಳನ್ನು ನಮಗೆ ಬಿಟ್ಟು ಹೋಗಿದ್ದಾರೆ. ಆದರೆ, ಅಲ್ಲಿನ ಅಧಿಕಾರಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಾಮಾನ್ಯ ನಾಗರಿಕರಿಗೆ ಅತಿ ಹೆಚ್ಚು ಗೌರವ ನೀಡುತ್ತಿದ್ದಾರೆ’ ಎಂದರು.

ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಈಶಪ್ಪ ಭೂತೆ ಮಾತನಾಡಿ, ‘ಪೊಲೀಸರು ಅಧಿಕ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಾರೆ. ಆದರೆ, ಒತ್ತಡದ ನಡುವೆಯೂ ಜವಾಬ್ದಾರಿಯಿಂದ ಜನಸ್ನೇಹಿ ಯಾಗಿ ಸೇವೆ ನೀಡಬೇಕು. ಉತ್ತಮ ಸೇವೆ ನೀಡಿದ ಅನೇಕ ಪೊಲೀಸರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ’ ಎಂದರು.

‘ನಾವೆಲ್ಲರೂ ನಾಗರಿಕರ ಸೇವೆಗಾಗಿ ಇಂತಹ ಹುದ್ದೆಗಳನ್ನು ಅಲಂಕರಿಸಿದ್ದೇವೆ. ನಾಗರಿಕ ಸೇವೆಯ ಕರ್ತವ್ಯಕ್ಕೆ ಮೊದಲ ಆದ್ಯತೆ ನೀಡಿದಾಗ ನಾವೂ ಬೆಳೆಯಲು ಸಾಧ್ಯ’ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ವಂಶಿಕೃಷ್ಣ ಮಾತನಾಡಿ, ‘ಹಾವೇರಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಕ್ಕೆ ಈ ತನಕ ಒಂದೂ ದೂರು ಬಂದಿಲ್ಲ. ಇದಕ್ಕೆ ಜಾಗೃತಿ ಹಾಗೂ ಜನರಲ್ಲಿ ಸಾಕ್ಷರತೆಯ ಕೊರತೆಯ ಕಾರಣವೂ ಇರಬಹುದು. ಆದರೆ, ನಮ್ಮ ಪೊಲೀಸರು ಇನ್ನು ಮುಂದೆಯೂ ಯಾವುದೇ ದೂರು ಬಾರದ ರೀತಿಯಲ್ಲಿ ಉತ್ತಮ ಸೇವೆ ನೀಡುತ್ತೇವೆ’ ಎಂದರು.

ಪಾಶ್ಚಾಪೂರೆ  ಮತ್ತು ನ್ಯಾಯಾಧೀಶ ಈಶಪ್ಪ ಭೂತೆ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ವಂಶಕೃಷ್ಣ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಲಲಿತಾ ಮಾತನಾಡಿ, ‘ಕಾಡನ್ನು ನಾಡು ಮಾಡಲು ಹೊರಟ ಮನುಷ್ಯನೇ ಮೃಗವಾಗಿದ್ದಾನೆ. ಇದರ ಬದಲಾಗಿ ನಾವು ಶಾಂತಿಯಿಂದ ಮಾನವರಾಗಬೇಕು’ ಎಂದರು. 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಸಂಜೀವ ಕುಲ ಕರ್ಣಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ನೀರಲಗಿ, ಕಾರ್ಯದರ್ಶಿ ದೇವರಾಜ್ ನಾಯ್ಡು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.