ADVERTISEMENT

‘ಸಮಾನತೆ ಮಾರ್ಗ ತೋರಿದ ಮಹಾಪುರುಷ’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 7:28 IST
Last Updated 15 ಏಪ್ರಿಲ್ 2017, 7:28 IST

ಹಾನಗಲ್: ‘ಶತಮಾನಗಳಿಂದ ತುಳಿತಕ್ಕೆ ಒಳಗಾದ ಜನರ ಕಷ್ಟಗಳನ್ನು ಅನುಭವಿಸಿದ್ದ ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಮೂಲಕ ಸಮಾನತೆಗೆ ಮಾರ್ಗ ತೋರಿದವರು’ ಎಂದು ಶಾಸಕ ಮನೋಹರ ತಹಸೀಲ್ದಾರ್‌ ಹೇಳಿದರು.ಇಲ್ಲಿನ ಅಂಬೇಡ್ಕರ್‌ ಭವನದಲ್ಲಿ ತಾಲ್ಲೂಕು ಆಡಳಿತ ಮತ್ತು ದಲಿತ ಸಂಘ ಟನೆಗಳು ಆಯೋಜಿಸಿದ್ದ ಡಾ.ಬಿ.ಆರ್‌. ಅಂಬೇಡ್ಕರ್‌ ಮತ್ತು ಡಾ.ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

‘ಅನಕ್ಷರಸ್ಥರು ಶಿಕ್ಷಣ ಪಡೆದು ಸ್ವಾವಲಂಬಿ ಆಗುವಲ್ಲಿ, ಜಾತಿ ವ್ಯವಸ್ಥೆ ಕೊನೆಗೊಳಿಸುವ ನಿಟ್ಟಿನಲ್ಲಿ ಅಂಬೇಡ್ಕರ್‌ ಅವರ ಶ್ರಮ ಮಹತ್ವದ್ದಾಗಿದೆ. ಸಮ ಸಮಾಜ ನಿರ್ಮಾಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯವಿದೆ. ಅಂಬೇಡ್ಕರ್‌ ಹಾಕಿಕೊಟ್ಟ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಸೂತ್ರಗಳು ಎಲ್ಲ ಕಾಲಕ್ಕೂ ಪ್ರಸ್ತುತ’ ಎಂದರು.

ಇದಕ್ಕೂ ಮುನ್ನ ಇಲ್ಲಿನ ಗಾಂಧಿ ವೃತ್ತದಿಂದ ಹೊರಟ ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು  ಡಾ.ಬಾಬು ಜಗಜೀವನರಾಂ ಅವರ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾ ಪಂಚಾಯ್ತಿ ಸದಸ್ಯ ರಾಘವೇಂದ್ರ ತಹಸೀಲ್ದಾರ್‌ ಚಾಲನೆ ನೀಡಿದರು.ಪುರಸಭೆ ಅಧ್ಯಕ್ಷೆ ಯಲ್ಲವ್ವ ಕಂಚಿಗೊಲ್ಲರ, ಉಪಾಧ್ಯಕ್ಷ ಗಣೇಶ ಮೂಡ್ಲಿಯವರ, ಸದಸ್ಯರಾದ ಹಸಿನಾಭಿ ನಾಯ್ಕನವರ, ರವಿರಾಜ ಕಲಾಲ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಉಪಾಧ್ಯಕ್ಷೆ ಸರಳಾ ಜಾಧವ, ಜಿಲ್ಲಾ ಪಂಚಾಯ್ತಿ ಸದಸ್ಯೆ ಗೌರಮ್ಮ ಶೇತಸನದಿ, ದಲಿತ ಮುಖಂಡರಾದ ನಿಂಗಪ್ಪ ಕಾಳೇರ, ಹನುಮಂತಪ್ಪ ಯಳ್ಳೂರ, ಪರಶುರಾಮ ಹುಳ್ಳಿಕಾಶಿ, ರಾಜಕುಮಾರ ಶಿರಪಂತಿ ಮತ್ತಿತರರು ಇದ್ದರು.

ADVERTISEMENT

ಸ್ವಚ್ಛತಾ ಅಭಿಯಾನ

ಹಾನಗಲ್: ತಾಲ್ಲೂಕಿನ ಆಡೂರ ಗ್ರಾಮದಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತಿ ಮತ್ತು ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಬೆಂಗಳೂರಿನ ಸಿದ್ಧ ಸಮಾಧಿ ಯೋಗದ ಸ್ಥಳೀಯ ಶಿಬಿರಾರ್ಥಿಗಳಿಂದ ಅಂಬೇಡ್ಕರ್‌ ಜಯಂತಿ ಪ್ರಯುಕ್ತ ಶುಕ್ರವಾರ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗಿತ್ತು.

ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗಪ್ಪ ಪೊಲೀಸಿ ಅವರು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.ಪಂಚಾಯ್ತಿ ಆವರಣದ ಮತ್ತು ಮುಖ್ಯ ರಸ್ತೆಗುಂಟ ಸ್ವಚ್ಛತಾ ಕಾರ್ಯ ನಡೆಯಿತು.ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಬಾಬುಲಾಲ ನಾಯ್ಕರ, ಪಿಡಿಓ ಶಾರದಾ ಜಾಲವಾಡ, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.