ADVERTISEMENT

ಸರ್ಕಾರಿ ಕಾಲೇಜಿನಲ್ಲಿ ಕುಡಿವ ನೀರೂ ಇಲ್ಲ

ಕೊಳವೆ ಬಾವಿ ಇದ್ದರೂ ಮೋಟಾರ್ ಅಳವಡಿಕೆಗೂ ಮೀನಮೇಷ

​ಪ್ರಜಾವಾಣಿ ವಾರ್ತೆ
Published 27 ಮೇ 2018, 13:20 IST
Last Updated 27 ಮೇ 2018, 13:20 IST

ರಟ್ಟೀಹಳ್ಳಿ: ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಸುಸಜ್ಜಿತ ಶೌಚಾಲಯ, ಕುಡಿಯುವ ನೀರು,  ವಿದ್ಯುತ್‌ ಸಂಪರ್ಕ, ಕಾಂಪೌಂಡ್‌ನಂಥ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.

60ಕ್ಕೂ ಅಧಿಕ ಗ್ರಾಮಗಳ ಬಡ ಮಕ್ಕಳಿಗೆ ಆಸರೆ ಆಗಿರುವ ಈ ಕಾಲೇಜು ಆರಂಭಗೊಂಡಿದ್ದು, 2007ರಲ್ಲಿ ಆದರೆ, ಕಾಲೇಜಿಗೆ ಈ ವರೆಗೂ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ.

ಸಿಬ್ಬಂದಿ ಕೊರತೆ: ಸುಮಾರು 11 ವರ್ಷಗಳಿಂದ ಸಿಬ್ಬಂದಿ ಕೊರತೆ ಸೇರಿದಂತೆ ಹಲವು ಸಮಸ್ಯೆಗಳ ನಡುವೆಯೇ ಕಲಾ ಹಾಗೂ ವಾಣಿಜ್ಯ ವಿಭಾಗಗಳು ನಡೆಯುತ್ತಿವೆ. ಕಾಲೇಜಿಗೆ ಮಂಜೂರಾದ ಒಟ್ಟು 9 ಹುದ್ದೆಗಳ ಪೈಕಿ ಕೇವಲ ನಾಲ್ಕು ಉಪನ್ಯಾಸಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

ದ್ವಿತೀಯ ದರ್ಜೆ ಸಹಾಯಕ, ‘ಡಿ’ ದರ್ಜೆ ನೌಕರರು, ಪ್ರಾಚಾರ್ಯ, ಇಂಗ್ಲಿಷ್ ಮತ್ತು ಶಿಕ್ಷಣಶಾಸ್ತ್ರ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಅಲ್ಲದೇ, ಕಾಲೇಜು ಸ್ವಚ್ಛಗೊಳಿಸುವ ಸಿಬ್ಬಂದಿಯೂ ಇಲ್ಲಿ ಇಲ್ಲ.

ಕಾಂಪೌಂಡ್‌: ಕಾಲೇಜಿಗೆ ಕಾಂಪೌಂಡ್ ಇಲ್ಲ. ಹೀಗಾಗಿ ಕಾಲೇಜು ಆವರಣ ಪುಂಡ– ಪೋಕರಿ ಹುಡುಗರು ರಾತ್ರಿ ಇದನ್ನು ಮದ್ಯ ಕುಡಿಯುವ ಅಡ್ಡಾ ಮಾಡಿಕೊಂಡಿದ್ದಾರೆ. ಅಲ್ಲದೇ, ಮದ್ಯದ ಬಾಟಲಿಗಳನ್ನು ಇಲ್ಲಿಯೇ ಎಸೆದು ಹೋಗುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ: ಕಾಲೇಜಿನಲ್ಲಿ ಸುಮಾರು 70ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಈ ಪೈಕಿ 50ಕ್ಕೂ ಅಧಿಕ ವಿದ್ಯಾರ್ಥಿನಿಯರು ಇದ್ದಾರೆ. ಆದರೆ, ಯಾವುದೇ ಕುಡಿಯುವ ನೀರಿನ ಸೌಲಭ್ಯವಿಲ್ಲ. ಕಳೆದ ವರ್ಷ ಕಾಲೇಜು ಆವರಣದಲ್ಲಿ ಕೊರೆಸಿದ ಕೊಳವೆಬಾವಿಯಲ್ಲಿ ನೀರಿದ್ದರೂ ಕೂಡ, ಅನುದಾನದ ಕೊರೆತೆಯಿಂದ ಈ ವರೆಗೂ ಮೋಟಾರ್‌ ಅಳವಡಿಸಿಲ್ಲ’ ಎಂದು ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಲೇಜಿನಲ್ಲಿ ನೀರಿನ ಸೌಲಭ್ಯ ಇಲ್ಲದ ಕಾರಣಕ್ಕೆ, ಕೆಲವು ಬಾರಿ ಮಧ್ಯಾಹ್ನದ ಊಟದ ಬಳಿಕ ಕೈ ತೊಳೆಯಲು ಕೂಡಾ ನೀರು ಸಿಗುವುದಿಲ್ಲ. ಮನೆಯಿಂದ ತಂದ ಬಾಟಲ್ ನೀರು ಕುಡಿಯಲು ಸಾಕಾಗುವುದಿಲ್ಲ’ ಎಂದು ವಿದ್ಯಾರ್ಥಿಯೊಬ್ಬರು ಅಳಲು ತೋಡಿಕೊಂಡರು.

ಶೌಚಾಲಯ ಸಮಸ್ಯೆ: ನೀರಿನ ಸೌಲಭ್ಯ ಇಲ್ಲದೇ ಇರುವ ಕಾರಣಕ್ಕೆ ಶೌಚಾಲಯಗಳು ದುರ್ನಾತ ಬೀರುತ್ತಿವೆ. ಹೀಗಾಗಿ, ಯಾವೊಬ್ಬ ವಿದ್ಯಾರ್ಥಿಯೂ ಕೂಡಾ ಅತ್ತ ಮುಖ ಮಾಡುವುದಿಲ್ಲ.ಇದರಿಂದ, ವಿದ್ಯಾರ್ಥಿಗಳು ಹೇಳಿಕೊಳ್ಳಲಾಗದ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.

‘ಕಾಲೇಜಿನಲ್ಲಿ ಕುಡಿಯುವ ನೀರಿಗೆ ವಿಪರೀತ ಸಮಸ್ಯೆ ಇದ್ದು, ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿದಂತೆ ಎಲ್ಲರೂ ಮನೆಯಿಂದ ಬಾಟಲ್‌ ನೀರನ್ನು ತಂದು ಬಳಸುತ್ತಿದ್ದೇವೆ. ಆವರಣದಲ್ಲಿ ಇರುವ ಕೊಳವೆ ಬಾವಿಗೆ ಮೋಟಾರ್‌ ಅಳವಡಿಸಿದರೆ ತುಂಬ ಅನುಕೂಲವಾಗುತ್ತದೆ’ ಎನ್ನುತ್ತಾರೆ ಪ್ರಭಾರ ಪ್ರಾಚಾರ್ಯ ಕೆ.ವಿ.ಪೂಜಾರ.

**
ರಟ್ಟೀಹಳ್ಳಿ ಪಿ.ಯು ಕಾಲೇಜಿನ ಕೊಳವೆಬಾವಿಗೆ ಮೋಟರ್‌ ಅಳವಡಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು
ಪ್ರಕಾಶ ಬನ್ನಿಕೋಡ, ಸದಸ್ಯ, ಜಿಲ್ಲಾ ಪಂಚಾಯ್ತಿ 

–ರಿಜ್ವಾನ್‌ ಕಪ್ನಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.