ADVERTISEMENT

ಸಿ.ಐ.ಡಿ.ಯಿಂದ ಎ.ಸಿ.ಬಿ.ಗೆ ಪ್ರಕರಣ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 9:44 IST
Last Updated 14 ಜುಲೈ 2017, 9:44 IST

ರಾಣೆಬೆನ್ನೂರು: ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಧನದಾಹದಿಂದ ಹಲವು ಮಹಿಳೆಯರ ಗರ್ಭಕೋಶಗಳನ್ನು ತೆಗೆದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ. ಪಿ. ಶಾಂತ ವಿರುದ್ಧದ ತನಿಖೆಯನ್ನು ಸರ್ಕಾರವು ಸಿ.ಐ.ಡಿಯಿಂದ ಎ.ಸಿ.ಬಿಗೆ ವರ್ಗಾಯಿಸಿದೆ.

ಈ ಪ್ರಕರಣವು ಭ್ರಷ್ಟಾಚಾರ ತಡೆ ಕಾಯಿದೆ ಅಡಿಯಲ್ಲಿ ದಾಖಲಾಗಿರುವ ಕಾರಣ ಸಿ.ಐ.ಡಿ.ಗಿಂತ ಎ.ಸಿ.ಬಿ.ಗೆ ವಹಿಸವುದೇ ಸೂಕ್ತ ಎಂದು ಸಿ.ಐ.ಡಿ. ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.  ಈ ಕುರಿತು ಸಿ.ಐ.ಸಿ ಡಿಐಜಿ ಅವರು ಮೇ 2 ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು.

ಆ ಪ್ರಸ್ತಾವವನ್ನು  ಪರಿಶೀಲಿಸಿದ ಸರ್ಕಾರವು ಪ್ರಕರಣವನ್ನು ಎ.ಸಿ.ಬಿಗೆ ವಹಿಸಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಂಚೆಗೌಡ ಮುಂದಿನ ತನಿಖೆ ಕೈಗೊಳ್ಳುವಂತೆ ಜೂನ್ 23ಕ್ಕೆ ಆದೇಶ ಹೊರಡಿಸಿದ್ದಾರೆ.

ADVERTISEMENT

‘ಹಲವು ಮಹಿಳೆಯರ ಗರ್ಭಕೋಶವನ್ನೇ ತೆಗೆದ ಅಮಾನವೀಯ ಪ್ರಕರಣವನ್ನು ಕೇವಲ ಭ್ರಷ್ಟಾಚಾರ ಕಾಯಿದೆ ಅಡಿಯಲ್ಲಿ ದಾಖಲಿರಿಸಿರುವುದೇ ಹಾಸ್ಯಾಸ್ಪದ. ಬಡವರು,
ಪರಿಶಿಷ್ಟ ಮಹಿಳೆಯರ ಜೀವದ ಜೊತೆ ಆಟವಾಡಿದ ಪ್ರಕರಣವು ಇವರಿಗೆ ಕೇವಲ ‘ಭ್ರಷ್ಟಾಚಾರ’ವಾಗಿದೆ.

ಆ ಮೂಲಕ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಡಾ.ಪಿ. ಶಾಂತ ಅವರ ರಕ್ಷಣೆಗೆ ಸಂಚು ನಡೆಸಿರುವುದು ಸ್ಪಷ್ಟವಾಗಿದೆ’ ಎಂದ ಪ್ರಕರಣದ ಬಗ್ಗೆ ಹೋರಾಟ ನಡೆಸುತ್ತಿರುವ ರಾಜ್ಯ ರೈತ ಸಂಘ  (ಅಖಂಡಾ ನಂದ ಸ್ವಾಮಿ) ಬಣದ ಅಧ್ಯಕ್ಷ ಶಿವಪುತ್ರಪ್ಪ ಮಲ್ಲಾಡದ ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.