ADVERTISEMENT

ಸೇತುವೆ ಇದ್ದರೂ ಸಂಚಾರ ದುಸ್ತರ!

ನದಿದಾಟಲು ಮಳಗಿ ಗ್ರಾಮಸ್ಥರಿಗೆ ತಪ್ಪುತ್ತಿಲ್ಲ ಪರದಾಟ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 6:27 IST
Last Updated 10 ಜನವರಿ 2017, 6:27 IST
-ವಿನಾಯಕ ಭೀಮಪ್ಪನವರ
 
*
ರಟ್ಟೀಹಳ್ಳಿ: ಮಳಗಿ ಇಲ್ಲಿಗೆ ಸಮೀಪದ ಪುಟ್ಟ ಗ್ರಾಮ. ಅದಕ್ಕೆ ಯಾವ ದಿಕ್ಕಿನಿಂದ ನೋಡಿದರೂ ರಸ್ತೆ ಮಾರ್ಗ ಇಲ್ಲ. ಕುಮದ್ವತಿ ನದಿ ದಾಟಿ ರಟ್ಟೀಹಳ್ಳಿ ಪಟ್ಟಣಕ್ಕೆ ಬರುವ ಅನಿವಾರ್ಯತೆ ಇಲ್ಲಿನ ಗ್ರಾಮಸ್ಥರದ್ದು.
 
ಮಳೆಗಾಲದಲ್ಲೂ ಇಲ್ಲಿನ ಜನರು ಕುಮದ್ವತಿ ನದಿ ದಾಟಿಯೇ ಬರುತ್ತಾರೆ. ಆಗೆಲ್ಲ ತೆಪ್ಪದ ಬಳಕೆ ಸಾಮಾನ್ಯ.
 
ಇಲ್ಲಿ ಒಟ್ಟು 60 ಕುಟುಂಬಗಳಿವೆ. 257 ಜನಸಂಖ್ಯೆ ಇದೆ. ಇಲ್ಲಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಿದ್ದು, 22 ವಿದ್ಯಾರ್ಥಿಗಳಿದ್ದಾರೆ. 5ನೇ ತರಗತಿ ಮುಗಿದ ಬಳಿಕ ಹೆಚ್ಚಿನ ಶಿಕ್ಷಣಕ್ಕೆ ರಟ್ಟೀಹಳ್ಳಿ ಪಟ್ಟಣ ಅವಲಂಬಿಸುವ ಅನಿವಾರ್ಯತೆ ಅವರದ್ದು.
 
ಸೇತುವೆ ಇದ್ದರೂ, ರಸ್ತೆ ಇಲ್ಲ:  ಇಲ್ಲಿನ ಸಂಚಾರ ಸುಗಮಗೊಳಿಸಲು ನಬಾರ್ಡ್ ಯೋಜನೆಯ ಆರ್ಐಡಿಎಫ್–18ರಲ್ಲಿ ₹4 ಕೋಟಿ 80 ಲಕ್ಷ ವೆಚ್ಚದಲ್ಲಿ ಬೃಹತ್ ಸೇತುವೆ ನಿರ್ಮಿಸಲಾಗಿದೆ.
 
ಆದರೆ, ಸೇತುವೆ ಕಾಮಗಾರಿ ಮುಗಿದು ಅನೇಕ ತಿಂಗಳಾದರೂ ಜನರ ಓಡಾಟಕ್ಕೆ ಲಭ್ಯವಾಗಿಲ್ಲ. ಸೇತುವೆ ಎರಡೂ ಅಂಚಿಗೂ ರಸ್ತೆ ನಿರ್ಮಿಸಿಲ್ಲ. ಹೀಗಾಗಿ ಜನರು ನೀರಿಲ್ಲದ ನದಿ ಪಾತ್ರದಲ್ಲಿ ಓಡಾಡುವಂತಾಗಿದೆ.
 
ರಸ್ತೆ ನಿರ್ಮಾಣವಾಗಿ ಸಂಚಾರಕ್ಕೆ ಮುಕ್ತವಾದರೆ ಕೇವಲ ಮಳಗಿ ಮಾತ್ರವಲ್ಲದೇ, ಕಣವಿಸಿದ್ಗೇರಿ, ಪರ್ವತಸಿದ್ಗೇರಿ, ಜೋಕನಹಳ್ಳಿ, ತಡಕನಹಳ್ಳಿ, ಅಣಜಿ, ನಾಗವಂದ, ಚಪ್ಪರದಹಳ್ಳಿ, ಅಂಗರಗಟ್ಟಿ ಮತ್ತಿತರ ಗ್ರಾಮಗಳಿಗೂ ಇದು ಅನುಕೂಲವಾಗಲಿದೆ.
 
‘ರಸ್ತೆ ನಿರ್ಮಾಣಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅನೇಕ ಸಲ ಮನವಿ ಸಲ್ಲಿಸಲಾಗಿದೆ. ಆದರೆ ಪ್ರಗತಿ ಆಗಿಲ್ಲ’ ಎಂದು ಗ್ರಾ. ಪಂ. ಸದಸ್ಯ ಮಾಲತೇಶ ಬಳಗಾವಿ, ಮಹಮ್ಮದ ರಫೀಕ್ ಗಾಂಜಿ ಮತ್ತಿತರರು ದೂರುತ್ತಾರೆ.
 
ಹಣ ಮೀಸಲು: ಈ ಕುರಿತು ಪ್ರಶ್ನಿಸಿದಾಗ, ‘ಶಾಸಕರ ಅನುದಾನದಲ್ಲಿ ರಸ್ತೆ ಕಾಮಗಾರಿಗೆ ಹಣ ಮೀಸಲಿಡಲಾಗುವುದು’ ಎಂದು ಶಾಸಕ ಯು.ಬಿ.ಬಣಕಾರ ತಿಳಿಸಿದ್ದಾರೆ.
 
**
ವಿದ್ಯುತ್ ಕಂಬ ಸ್ಥಳಾಂತರ,  ರಸ್ತೆ ಕಾಮಗಾರಿಗೆ ಸರ್ಕಾರಕ್ಕೆ ₹ 7 ಕೋಟಿ ಅಂದಾಜು ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಸಿಕ್ಕ ತಕ್ಷಣ ಕಾಮಗಾರಿ ಆರಂಭಿಸುತ್ತೇವೆ.
-ಜಿ.ಪಿ. ನಾಗರಾಜ
ಎಂಜಿನಿಯರ್, ಲೋಕೋಪಯೋಗಿ ಇಲಾಖೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.