ADVERTISEMENT

‘ಸ್ವಾಭಿಮಾನ ಜಾಗೃತಿ ಅಭಿಯಾನ’

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 9:20 IST
Last Updated 23 ಮಾರ್ಚ್ 2017, 9:20 IST

ಹಾವೇರಿ: ‘ಇದೇ 15ರಂದು ಗದಗದ ಕೋಗನೂರಿನಿಂದ ಆರಂಭಗೊಂಡ ‘ಸ್ವಾಭಿಮಾನಿ ಜಾಗೃತಿ ಅಭಿಯಾನ’ವು ಏಪ್ರಿಲ್ 1ರಂದು ಹೊಸರಿತ್ತಿಯ ಸಮಾಧಿಗೆ ಬಂದು ತಲುಪಲಿದೆ’ ಎಂದು ವಿಶ್ವಮಾನವ ಮಂಟಪ ಟ್ರಸ್ಟ್‌ನ ಸಂಸ್ಥಾಪಕ ಆವರಗೆರೆ ರುದ್ರಮುನಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ಹೋರಾಟಗಾರರಾದ ಮೈಲಾರ ಮಹದೇವಪ್ಪ, ತಿರುಕಪ್ಪ ಮಡಿವಾಳರ ಹಾಗೂ ವೀರಯ್ಯ ಹಿರೇಮಠ ಅವರು 1943 ಏಪ್ರಿಲ್‌ 1ರಂದು ತಾಲ್ಲೂಕಿನ ಹೊಸರಿತ್ತಿಯಲ್ಲಿ ಹುತಾತ್ಮರಾದರು. ಈ ಸ್ಮರಣಾರ್ಥ ‘ಸ್ವಾಭಿಮಾನ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘ಮಹಾತ್ಮ ಗಾಂಧಿಜೀಯವರ ಉಪ್ಪಿನ ಸತ್ಯಾಗ್ರಹದಲ್ಲಿ ಕರ್ನಾಟಕದಿಂದ ಭಾಗವಹಿಸಿದ ಏಕೈಕ ವ್ಯಕ್ತಿ ಮೈಲಾರ ಮಹದೇವಪ್ಪ. ಹಾವೇರಿಯ ರೈಲು ನಿಲ್ದಾಣಕ್ಕೆ ಮೈಲಾರ ಮಹದೇವಪ್ಪ ಹಾಗೂ ಗದಗ ರೈಲು ನಿಲ್ದಾಣಕ್ಕೆ  ತಿರುಕಪ್ಪ ಮಡಿವಾಳರ ಹೆಸರನ್ನು ಇಡಬೇಕು’ ಎಂದು ಒತ್ತಾಯಿಸಿದರು.

‘ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಈ ಮೂವರು ಹೋರಾಟ ನಡೆಸಿದ ವಿವಿಧ ಸ್ಥಳಗಳಿಗೆ ಸ್ವಾಭಿಮಾನ ಜಾಗೃತಿ ಅಭಿಯಾನ ಭೇಟಿ ಮಾಡಲಿದೆ. ಹೋರಾಟಗಾರ ಬಗ್ಗೆ ಜಾಗೃತಿಯ ಜೊತೆಗೆ ಕರಪತ್ರಗಳನ್ನು ಹಂಚಲಾಗು ವುದು’ ಎಂದರು.

ಟ್ರಸ್ಟ್‌ ಜಿಲ್ಲಾ ಸಂಚಾಲಕ ವೀರಪ್ಪ ಶಿವಪ್ಪ ವಟ್ಲಳ್ಳಿ, ಭಾರತೀಯ ವಿದ್ಯಾರ್ಥಿ ಫೆಡರೇಶನ್‌ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಸ್‌ ಎಂ, ತಾಲ್ಲೂಕು ಘಟಕದ ಕಾರ್ಯದರ್ಶಿ ಪ್ರದೀಪ ಅಕ್ಕಿವಳ್ಳಿ ಹಾಗೂ ಹಸೀನಾ ಹೆಡಿಯಾಲ ಇದ್ದರು.

*
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗದಗ ಹಾಗೂ ಹಾವೇರಿಯ ಹೋರಾಟಗಾರರ ಕೊಡುಗೆ ಅಪಾರವಾಗಿದೆ.
-ಅವರಗೆರೆ ರುದ್ರಮುನಿ,
ಟ್ರಸ್ಟ್‌ ಸಂಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT