ADVERTISEMENT

ಹಸಿರು ಹಾವೇರಿ ಸಾಕಾರವೇ ನಮ್ಮ ಹೆಗ್ಗುರಿ

ಹಾವೇರಿ ಜಿಲ್ಲಾ ಉತ್ಸವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 6:50 IST
Last Updated 20 ಮಾರ್ಚ್ 2017, 6:50 IST
ಹಾವೇರಿ ಜಿಲ್ಲಾ ಉತ್ಸವದಲ್ಲಿ ಭಾನುವಾರದ ಸಂಗೀತ ಕಾರ್ಯಕ್ರಮ ಆಸ್ವಾದಿಸುತ್ತಿರುವ ಜಿಲ್ಲಾಧಿಕಾರಿ ಡಾ.ವೆಂಕಟೇಶ ಎಂ.ವಿ, ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ಮಾಜಿ ಸಚಿವ ಸಿ.ಎಂ. ಉದಾಸಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ.
ಹಾವೇರಿ ಜಿಲ್ಲಾ ಉತ್ಸವದಲ್ಲಿ ಭಾನುವಾರದ ಸಂಗೀತ ಕಾರ್ಯಕ್ರಮ ಆಸ್ವಾದಿಸುತ್ತಿರುವ ಜಿಲ್ಲಾಧಿಕಾರಿ ಡಾ.ವೆಂಕಟೇಶ ಎಂ.ವಿ, ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ಮಾಜಿ ಸಚಿವ ಸಿ.ಎಂ. ಉದಾಸಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ.   

ಹಾವೇರಿ: ‘ಜಿಲ್ಲೆಯಲ್ಲಿ 6 ಲಕ್ಷ ಸಸಿಗಳನ್ನು ನೆಡುವ ಮೂಲಕ ‘ಹಸಿರು ಹಾವೇರಿ’ ಮಾಡುವುದೇ ನಮ್ಮ ಪ್ರಮುಖ ಗುರಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ಇಲ್ಲಿನ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ಭಾನುವಾರ ಹಾವೇರಿ ಜಿಲ್ಲಾ ಉತ್ಸವ ‘ಸಂಸ್ಕೃತಿ ದರ್ಪಣ‘ದ ಸಮಾರೋಪ ಸಮಾರಂಭ’ದಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಹಸಿರಿನಿಂದ ತುಂಬಿ ತುಳುಕುವಂತೆ ಮಾಡುತ್ತೇವೆ. ಜಿಲ್ಲೆಯಲ್ಲಿ ಹರಿಯುವ ನಾಲ್ಕು ನದಿಗಳ ನೀರನ್ನು ಸಮರ್ಪಕವಾಗಿ ಬಳಸಿಕೊಂಡು, ಲಕ್ಷಾಂತರ ಹೆಕ್ಟೇರ್‌ ಭೂಮಿಗೆ ನೀರು ಒದಗಿಸಲಾಗುವುದು’ ಎಂದರು.

‘ಹೆಗ್ಗೇರಿ ಕೆರೆಯನ್ನು ರಾಜ್ಯದಲ್ಲಿಯೇ ಪ್ರಸಿದ್ಧ ಪ್ರವಾಸಿ ತಾಣವನ್ನಾಗಿ ಮಾಡುವ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ, ಜಿಲ್ಲಾ ಉತ್ಸವಕ್ಕೆ ಚಾಲನೆ ನೀಡಿದ್ದೇವೆ. ಈ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ’ ಎಂದರು.

ಮಾಜಿ ಶಾಸಕ ಬಿ.ಸಿ.ಪಾಟೀಲ್‌ ಮಾತನಾಡಿ, ‘ಸರ್ವಜ್ಞ ಪ್ರಾಧಿಕಾರಕ್ಕೆ ₹5ಕೋಟಿ, ಹಿರೇಕೆರೂರ ತಾಲ್ಲೂಕಿನ ಮೂರು ನೀರಾವರಿ ಯೋಜನೆಗಳು, ಮೈಲಾರ ಹಾಗೂ ದೇವರಗುಡ್ಡದ ಪ್ರಾಧಿಕಾರ ರಚನೆ, ವೈದ್ಯಕೀಯ ಕಾಲೇಜಿಗೆ ಹಣವನ್ನು ಈ ಬಾರಿಯ ಬಜೆಟ್‌ನಲ್ಲಿ ನೀಡುವ ಮೂಲಕ ರಾಜ್ಯ ಸರ್ಕಾರವು ಜಿಲ್ಲೆಗೆ ಬಹುದೊಡ್ಡ ಉತ್ಸವವನ್ನೇ ಮಾಡಿಸಿದೆ’ ಎಂದರು.

‘ಜಿಲ್ಲಾ ಉತ್ಸವವನ್ನು ಪ್ರತಿವರ್ಷ ಒಂದೊಂದು ತಾಲ್ಲೂಕಿಗೆ ನೀಡುವ ಮೂಲಕ ಅವರಿಗೂ ಜಿಲ್ಲಾ ಉತ್ಸವ ಮಾಡಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ಹರಸೂರ ಬಣ್ಣದಮಠದ ಅಭಿನವ ರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಜಿಲ್ಲೆಯು ಸಾಧು, ಸಂತರ ಹಾಗೂ ಮಹಾತ್ಮರು ಹುಟ್ಟಿದ ನಾಡು. ಜಿಲ್ಲೆಯ ಸಂಸ್ಕೃತಿಯೂ ವಿಶಿಷ್ಟವಾಗಿದೆ’ ಎಂದರು.

ಜಿಲ್ಲಾಧಿಕಾರಿ ಡಾ ವೆಂಕಟೇಶ ಎಂ.ವಿ., ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಉಪಾಧ್ಯಕ್ಷೆ ಮಮತಾಜಬಿ ತಡಸ, ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಯಲ್ಲಪ್ಪ ಮಣ್ಣೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಸಿಇಓ ಕೆ.ಬಿ.ಅಂಜನಪ್ಪ ಇದ್ದರು.

ಕಿಕ್ಕಿರಿದು ತುಂಬಿದ ಜನಸಾಗರ
ಜಿಲ್ಲಾ ಉತ್ಸವದ ಮೂರನೇ ದಿನವಾದ ಭಾನುವಾರ ಹಾವೇರಿ ಜಿಲ್ಲಾ ಕ್ರೀಡಾಂಗಣ, ಸಮೀಪದ ಮುನ್ಸಿಪಲ್ ಮೈದಾನ ಸೇರಿದಂತೆ ಎಲ್ಲೆಡೆ ಜನಸಾಗರದಿಂದ ತುಂಬಿತ್ತು. ಸಭಾಂಗಣದಲ್ಲಿ ಕಲ್ಪಿಸಿದ ಆಸನಗಳ ನಾಲ್ಕು ಪಟ್ಟಿಗೂ ಅಧಿಕ ಜನ ಅಲ್ಲಲ್ಲಿ ನಿಂತು, ಕುಳಿತು ಕಾರ್ಯಕ್ರಮ ವೀಕ್ಷಿಸಿದರು.

ವಿವಿಧ ಪಕ್ಷಗಳ ಮುಖಂಡರು, ಅಧಿಕಾರಿಗಳು ಸೇರಿದಂತೆ ಎಲ್ಲರೂ ಜಿಲ್ಲೆಯ ಉತ್ಸವವನ್ನು ಸಂಭ್ರಮಿಸಿದರು. ಮಾಜಿ ಸಚಿವ ಸಿ.ಎಂ. ಉದಾಸಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ ಮತ್ತಿತರ ಪ್ರಮುಖರು ಸಾಕ್ಷಿಯಾದರು.

ADVERTISEMENT

*
ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಅತೀ ಹೆಚ್ಚು ಒತ್ತು ನೀಡುವ ಮೂಲಕ, ಜಿಲ್ಲೆಯ ಜನತೆಗೆ ‘ಜಿಲ್ಲಾ ಉತ್ಸವದ ದರ್ಶನ’ ಮಾಡಿಸಿದೆ.
-ಬಿ.ಸಿ.ಪಾಟೀಲ್‌,
ಮಾಜಿ ಶಾಸಕ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.