ADVERTISEMENT

ಹಾನಗಲ್: ಬರಗಾಲದಲ್ಲಿ ಚಿಕ್ಕು ಬಂಪರ್ ಬೆಳೆ

ಮಾರುತಿ ಪೇಟಕರ
Published 12 ಸೆಪ್ಟೆಂಬರ್ 2017, 6:13 IST
Last Updated 12 ಸೆಪ್ಟೆಂಬರ್ 2017, 6:13 IST
ಹಾನಗಲ್‌ ತಾಲ್ಲೂಕಿನ ಬೈಚವಳ್ಳಿ ಗ್ರಾಮದ ರೈತ ಚಂದ್ರಪ್ಪ ಕೋಟಿ ಅವರ ತೋಟದಲ್ಲಿ ಕಟಾವ್‌ ಮಾಡಲಾದ ಚಿಕ್ಕು ಹಣ್ಣುಗಳ ರಾಶಿ
ಹಾನಗಲ್‌ ತಾಲ್ಲೂಕಿನ ಬೈಚವಳ್ಳಿ ಗ್ರಾಮದ ರೈತ ಚಂದ್ರಪ್ಪ ಕೋಟಿ ಅವರ ತೋಟದಲ್ಲಿ ಕಟಾವ್‌ ಮಾಡಲಾದ ಚಿಕ್ಕು ಹಣ್ಣುಗಳ ರಾಶಿ   

ಹಾನಗಲ್: ಸಾವಯವ ಕೃಷಿಯಲ್ಲಿ ನಂಬಿಕೆ ಇಟ್ಟ ತಾಲ್ಲೂಕಿನ ಬೈಚವಳ್ಳಿ ಗ್ರಾಮದ ಪ್ರಗತಿಪರ ರೈತ ಚಂದ್ರಪ್ಪ ಕೋಟಿ ಅವರು ಚಿಕ್ಕು ತೋಟದಲ್ಲಿ ಬರ ಗಾಲದಲ್ಲಿಯೂ ಬಂಪರ್‌ ಬೆಳೆ ತೆಗೆದಿದ್ದಾರೆ. ಕೃಷಿ ಬಳಕೆಗೆ ನಿರುಪಯುಕ್ತ ಎಂದು ನಿರ್ಲಕ್ಷಿಸಿದ್ದ ತಮ್ಮ ಮನೆತನದ 12 ಎಕರೆ ಜಮೀನು ಸಾಗುವಳಿ ಮಾಡಿ 2000 ಇಸ್ವಿಯಲ್ಲಿ ಚಿಕ್ಕು (ಸಪೋಟ) ತೋಟ ಮಾಡಲು ಮುಂದಾದವರು. ವರ್ಷಕ್ಕೆ 4 ಎಕರೆಯಂತೆ ಮೂರು ವರ್ಷದಲ್ಲಿ 12 ಎಕರೆ ಭೂಮಿಯಲ್ಲಿ ಚಿಕ್ಕು ಗಿಡ ನೆಟ್ಟ ಕೋಟಿ ಇಂದು ವರ್ಷಕ್ಕೆ ₹ 10 ಲಕ್ಷ ಆದಾಯ ಗಳಿಸುತ್ತಿದ್ದಾರೆ.

ಆರಂಭದಲ್ಲಿ ಮಿಶ್ರ ಬೆಳೆಯಾಗಿ ಚಿಕ್ಕು ತೋಟದಲ್ಲಿ ಬಾಳೆ ಬೆಳೆದು ಕೈತುಂಬ ದುಡ್ಡು ಮಾಡಿಕೊಂಡ ಇವರು ಈ ಲಾಭವನ್ನೇ ಬಳಸಿಕೊಂಡು ವ್ಯವಸ್ಥಿತ ಚಿಕ್ಕು ತೋಟ ಮಾಡಿದ್ದಾರೆ. 6 ವರ್ಷದ ನಂತರ ಫಲ ನೀಡುವ ಚಿಕ್ಕು ಗಿಡಗಳ ನಿರ್ವಹಣೆ ವೆಚ್ಚವನ್ನು ಬಾಳೆಯ ಮಿಶ್ರ ಬೆಳೆಯ ಮೂಲಕವೇ ಸರಿದೂಗಿದರು.

ಚಿಕ್ಕು ತೋಟಕ್ಕೆ ಹೊಂದಿಕೊಂಡು 30 ಎಕರೆ ಮಾವು ತೋಟ ಮಾಡಿ ಕೊಂಡಿರುವ ಇವರು ನಾಲ್ಕು ಕೊಳವೆ ಬಾವಿಗಳ ಮೂಲಕ ತೋಟಕ್ಕೆ ನೀರು ಪೂರೈಸುತ್ತಾರೆ, ಪೂರ್ತಿ 42 ಎಕರೆ ತೋಟಕ್ಕೆ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ADVERTISEMENT

ಒಟ್ಟು 730 ಚಿಕ್ಕು ಗಿಡ ತೋಟ ದಲ್ಲಿವೆ, ಫಲ ನೀಡುವುದಕ್ಕೂ ಮುನ್ನ ಮಿಶ್ರ ಬೆಳೆಯಾಗಿದ್ದ ಬಾಳೆ, ಸಾಗವಾನಿ ಮರಗಳನ್ನು ಈಗ ತೆರವುಗೊಳಿಸಿದ್ದಾರೆ. ರಾಸಾಯನಿಕ ಗೊಬ್ಬರದ ಸ್ಪರ್ಶ ನೀಡ ದಂತೆ ತೋಟದಲ್ಲಿ ಬೆಳೆಸುವ ಹುಲ್ಲು ಬಳಸಿಕೊಂಡು ಹಸಿರೆಲೆ ಗೊಬ್ಬರ, ಸೆಗಣಿ, ಕೋಳಿ ಗೊಬ್ಬರವನ್ನು ಪ್ರಮಾಣ ಕ್ಕನುಸಾರ ನೀಡುತ್ತಾರೆ. ಕಾಂಡಕ್ಕೆ ರಿಂಗ್‌ ಮಾಡಿಸಿ ಸಾವಯವ ಗೊಬ್ಬರ ನೀಡುತ್ತಾರೆ.

ಚಿಕ್ಕು ಹಣ್ಣಿನಲ್ಲಿರುವ ಕ್ರಿಕೆಟ್‌ ಬಾಲ್‌, ಕಾಲಪತ್‌ ಜಾತಿಯ ಪೈಕಿ ಹೆಚ್ಚು ಬೇಡಿಕೆಯ ಕ್ರಿಕೆಟ್‌ ಬಾಲ್‌ ತಳಿಯನ್ನು ಬೆಳೆಯುವ ಚಂದ್ರಪ್ಪ ವರ್ಷಕ್ಕೆ ಶೇ.15 ರಷ್ಟು ಹೆಚ್ಚು ಲಾಭವನ್ನು ಚಿಕ್ಕು ತೋಟದಿಂದ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಮಾವಿಗಿಂತ ಚಿಕ್ಕು ತೋಟಕ್ಕೆ ಹೆಚ್ಚಿನ ಆದ್ಯತೆ ನೀಡುವ ಅವರು, ‘ಮಾವು ಬೆಳೆ ಅನಿಶ್ಚಿತ, ಆದರೆ ಚಿಕ್ಕು ಬೆಳೆ ಖಂಡಿತ ವಾಗಿ ರೈತನ ಕೈ ಹಿಡಿಯುತ್ತದೆ. ಅಗತ್ಯದ ನೀರು, ಸಾವಯವ ಗೊಬ್ಬರ ನೀಡಿ ಜೋಪಾನ ಮಾಡಿದರೆ ಚಿಕ್ಕು ಗಿಡಗಳು ಬೆಳೆಗಾರನಿಗೆ ವರವಾಗುವಲ್ಲಿ ಸಂಶಯ ವಿಲ್ಲ’ ಎನ್ನುತ್ತಾರೆ.

ಅರಣ್ಯಕ್ಕೆ ಹೊಂದಿ ಕೊಂಡಿರುವ ಇವರ ತೋಟ ಎರಡು ವರ್ಷದ ಹಿಂದೆ ಕರಡಿ ದಾಳಿಗೆ ತುತ್ತಾಗಿ ಸುಮಾರು 100 ಗಿಡಗಳು ಹಾನಿಯಾ ಗಿದ್ದವು, ಸಾಕಷ್ಟು ಬೆಳೆಯನ್ನೂ ಕಳೆದು ಕೊಂಡಿದ್ದರು. ‘ಪರಿಹಾರ ಸಿಗಲಿಲ್ಲ, ಅರಣ್ಯ ಇಲಾಖೆಯಿಂದ ತಂತಿ ಬೇಲಿ ರಕ್ಷಣೆಯ ಭರವಸೆಯೂ ಈಡೇರಿಲ್ಲ’ ಎಂದು ನೊಂದು ನುಡಿಯುತ್ತಾರೆ.

ತಾಲ್ಲೂಕಿನಲ್ಲಿ ಸಾಕಷ್ಟು ರೈತರು ಈಗ ಚಿಕ್ಕು ಬೆಳೆಯತ್ತ ಆಕರ್ಷಿತರಾಗಿದ್ದಾರೆ. ಆದರೆ ಮಾರುಕಟ್ಟೆ ವ್ಯವಸ್ಥೆ ಇಲ್ಲದಿ ರುವುದು ವಿಪರ್ಯಾಸ, ತೋಟಕ್ಕೆ ಬಂದು ಬೆಲೆ ನಿಗದಿ ಮಾಡಿಕೊಂಡು ಹಣ್ಣು ಕಟಾವ್‌ ಮಾಡುವ ವ್ಯಾಪಾರಿಗಳೆ ಹೆಚ್ಚು ಲಾಭ ಮಾಡಿಕೊಳ್ಳುತ್ತಿದ್ದಾರೆ.

‘ಈ ಅವಸ್ಥೆ ಕೊನೆಯಾದಲ್ಲಿ ಚಿಕ್ಕು ತೋಟಗಳ ಪ್ರಮಾಣ ತಾಲ್ಲೂಕಿನಲ್ಲಿ ಹೆಚ್ಚಳವಾಗುತ್ತದೆ. ಎಪಿಎಂಸಿ ಪ್ರಾಂಗಣ ದಲ್ಲಿ ವಾರಕ್ಕೊಮ್ಮೆ ಚಿಕ್ಕು ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು, ಆಗ ವ್ಯಾಪಾರಿಗಳ ಮಧ್ಯೆ ನಡೆಯುವ ಪೈಪೋಟಿ ರೈತನಿಗೆ ಲಾಭ ತರುತ್ತದೆ’ ಎಂದು ಚಂದ್ರಪ್ಪ ಕೋಟಿ ಅಭಿಪ್ರಾಯ ಪಡುತ್ತಾರೆ, ‘ರೈಫ ನಿಂಗ್‌ ಚೆಂಬರ್‌ (ಹಣ್ಣು ಮಾಗಿಸುವ ಘಟಕ) ಸ್ಥಾಪನೆಗೆ ಎಪಿಎಂಸಿಗೆ ಪ್ರಸ್ತಾವ ಸಲ್ಲಿಸಲಾಗಿದೆ.

ಇದಕ್ಕೆ ಅಗತ್ಯದ ಶೇ 60 ರಷ್ಟು ಹಣ ತೋಟಗಾರಿಕೆ ಇಲಾಖೆ ಭರಿ ಸಲು ಉತ್ಸುಕವಾಗಿದೆ’ ಎಂದು ತೋಟ ಗಾರಿಕೆ ಇಲಾಖೆ ಪ್ರಭಾರ  ಸಹಾಯಕ ನಿರ್ದೇಶಕ ಆರ್‌.ಎಲ್‌. ಮೇಲಿನಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬೇಡಿಕೆ ಹೆಚ್ಚು
ವರ್ಷದಲ್ಲಿ ಎರಡು ಬೆಳೆ ನೀಡುವ ಈ ಭಾಗದ ಚಿಕ್ಕು ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಜ್ಯೂಸ್‌, ವೈನ್‌ ತಯಾರಿಕೆಗಾಗಿ ಬೆಂಗಳೂರ, ಚನ್ನೈ, ಇಂದೋರ, ನಾಗಪುರಕ್ಕೆ ರಫ್ತು ಆಗುತ್ತವೆ, ಚಿಕ್ಕು ಬೆಳೆಗೆ ಹಾನಗಲ್‌ನ ವಾತಾ ವರಣವೂ ಹೇಳಿ ಮಾಡಿಸಿ ದಂತಿದೆ. ಹೀಗಾಗಿ ತಾಲ್ಲೂಕಿನ ಅಲ್ಲಲ್ಲಿ ಚಿಕ್ಕು ತೋಟಗಳು ಈಗ ಅಧಿಕವಾಗಿವೆ ಎಂದು ತೋಟಗಾ ರಿಕೆ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಆರ್‌.ಎಲ್‌.ಮೇಲಿನ ಮನಿ ಹೇಳುತ್ತಾರೆ.

* * 

ತಾಲ್ಲೂಕಿನಲ್ಲಿ ಸಾಕಷ್ಟು ರೈತರು ಈಗ ಚಿಕ್ಕು ಬೆಳೆಯುತ್ತಾರೆ. ಆದರೆ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರು ವುದು, ತೋಟಕ್ಕೆ ಬಂದು ಕೊಳ್ಳುವ ವ್ಯಾಪಾರಿಗಳಿಗೆ ಲಾಭ ಹೆಚ್ಚು
ಚಂದ್ರಪ್ಪ ಕೋಟಿ


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.