ADVERTISEMENT

‘ಹಾವೇರಿ ಜಿಲ್ಲಾ ಉತ್ಸವ’ 17ರಿಂದ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 6:54 IST
Last Updated 14 ಮಾರ್ಚ್ 2017, 6:54 IST

ಹಾವೇರಿ: ‘ಜಿಲ್ಲಾ ಉತ್ಸವವನ್ನು ಇದೇ 17,18 ಹಾಗೂ 19ರಂದು ಇಲ್ಲಿನ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ ಹೇಳಿದರು.

ಜಿಲ್ಲಾಡಳಿತದ ಸಭಾಭವನದಲ್ಲಿ ನಡೆದ ‘ಜಿಲ್ಲಾ ಉತ್ಸವದ ಪೂರ್ವಭಾವಿ ಸಭೆ’ಯಲ್ಲಿ ಸೋಮವಾರ ಅವರು ಮಾತನಾಡಿದರು.

‘ಇದೇ 17ರಂದು ಸಂಜೆ ೪-ಕ್ಕೆ ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾ ಕ್ರೀಡಾಂಗಣದ ವರೆಗೆ, ಭಾರತೀಯ ಸಂಸ್ಕೃತಿ ಬಿಂಬಿಸುವ 15 ಕ್ಕೂ ಅಧಿಕ ಕಲಾ ತಂಡಗಳ ಕಲಾಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಸಾಗಲಿದೆ. ಅಂದು ಸಂಜೆ 7 ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದ್ದು, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ’ ಎಂದರು.

‘ಜಿಲ್ಲಾ ಉತ್ಸವದಲ್ಲಿ ಫಲ-ಪುಷ್ಪ ಪ್ರದರ್ಶನ, ಪುಸ್ತಕ, ಕರಕುಶಲ ಮಳಿಗೆ ಸೇರಿದಂತೆ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ, ಕೈಗಾರಿಕೆ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳ 100ಕ್ಕೂ ಅಧಿಕ ಮಳಿಗೆಗಳ ವ್ಯವಸ್ಥೆ ಮಾಡಲಾಗುವುದು’ ಎಂದರು.

‘ಇದೇ 18 ರಂದು ಸಂಜೆ 6 ಕ್ಕೆ ಕವಿಗೋಷ್ಠಿ, ಸ್ಥಳೀಯ ಕಲಾವಿದರಿಂದ ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರು ಗಲಿವೆ. ರಾತ್ರಿ 9 ಕ್ಕೆ ರಸಮಂಜರಿ, ಜಾನಪದ ಕಲಾಪ್ರಕಾರ ನೃತ್ಯಗಳು ನಡೆ ಯಲಿವೆ. ಇದೇ 19 ರಂದು ಸಮಾರೋಪ ಸಮಾರಂಭ ಜರುಗಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವುದು’ ಎಂದರು.

‘ಉತ್ಸವದಲ್ಲಿ ಸ್ಥಳೀಯ ಕಲಾವಿದರು ಸೇರಿದಂತೆ ಹೇಮಂತ, ರಾಜೇಶ ಕೃಷ್ಣನ್, ಶಮಿತಾ ಮಲ್ಲಾಡ ಹಾಗೂ  ಸ್ಥಳದಲ್ಲೇ ಚಿತ್ರ ಬಿಡಿಸುವ ಕಲಾವಿದರು ಪಾಲ್ಗೊಳ್ಳುವರು’ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ.ಆಂಜನಪ್ಪ, ಉಪ ವಿಭಾಗಾಧಿಕಾರಿ ಬಸವರಾಜ ಸೋಮಣ್ಣನವರ, ಬೆಂಗಳೂರು ತಾಂಡವ ಕಲಾನಿಕೇತನದ ಅಧ್ಯಕ್ಷ ಮಂಜುನಾಥ ನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ರೇಷ್ಮಾ ಕೌಸರ್, ಅಲ್ಪ ಸಂಖ್ಯಾತರ ಕಲ್ಯಾಣಾಧಿಕಾರಿ ರಾಜು ಕೂಲೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.