ADVERTISEMENT

ಹಾವೇರಿ: ‘ಬಿ’ ದರ್ಜೆ ಆದರ್ಶ ರೈಲು ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 6:50 IST
Last Updated 25 ಅಕ್ಟೋಬರ್ 2014, 6:50 IST

ಹಾವೇರಿ: ಹಾವೇರಿ ರೈಲು ನಿಲ್ದಾಣವನ್ನು ‘ಆದರ್ಶ’ ನಿಲ್ದಾಣವಾಗಿ ಅಭಿವೃದ್ಧಿ ಮಾಡುತ್ತಿದ್ದು, ‘ಬಿ’ ದರ್ಜೆ ರೈಲು ನಿಲ್ದಾಣದಲ್ಲಿ ದೊರಕುವ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು ಎಂದು ದಕ್ಷಿಣ ನೈರುತ್ಯ ರೈಲ್ವೆ ವಿಭಾಗೀಯ ಕಚೇರಿ (ವಾಣಿಜ್ಯ) ಹಿರಿಯ ಪ್ರಧಾನ ವ್ಯವಸ್ಥಾಪಕ ಕೆ. ಅನಿಲ್ ಕುಮಾರ್ ಭರವಸೆ ನೀಡಿದ್ದಾರೆ.

ಜಿಲ್ಲಾ ಕೇಂದ್ರವಾದ ಹಾವೇರಿ ನಗರವು ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಹಾವೇರಿ ರೈಲು ನಿಲ್ದಾಣ ಅಭಿವೃದ್ಧಿ ಮತ್ತು ಸಂಪರ್ಕ ಕ್ರಾಂತಿ ರೈಲು (22685 ಹಾಗೂ 22686) ನಿಲುಗಡೆ ಬಗ್ಗೆ ಹಾವೇರಿ ನಾಗರಿಕ ವೇದಿಕೆ ಅಧ್ಯಕ್ಷ ಎಂ.ಎಸ್‌.ಕೋರಿಶೆಟ್ಟರ್‌ ಮಾಡಿದ ಮನವಿಗೆ ಅವರು ಲಿಖಿತ (ಅ.9) ಭರವಸೆ ನೀಡಿದ್ದಾರೆ.

ರೈಲು ಪ್ರಯಾಣಿಕರ ಸೌಲಭ್ಯಕ್ಕಾಗಿ ನಿಲ್ದಾಣಕ್ಕೆ ಈ ವರ್ಷ ಹಣ ಪಾವತಿ ಮಾಡಿ ಉಪಯೋಗಿಸುವ ಶೌಚಾಲಯ, ಮಹಿಳೆಯರಿಗೆ ಮತ್ತು ಪುರುಷರಿಗೆ ವಿಶ್ರಾಂತಿ ಕೊಠಡಿ ಸೌಲಭ್ಯವನ್ನು ಅಭಿವೃದ್ಧಿ ಪಡಿಸಲಾಗುವುದು. ತಣ್ಣನೆಯ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ನಿಲ್ದಾಣದಲ್ಲಿ ಅಂಗಡಿಗಳನ್ನು ಒದಗಿಸಲಾಗುವುದು. ಪ್ರಯಾಣಿಕರ ಆಹಾರದ ಪೈಕಿ ಮಾಂಸಾಹಾರ ಒದಗಿಸುವ ಕುರಿತೂ ಚಿಂತನೆ ನಡೆದಿದೆ.

ಅಲ್ಲದೇ ₨51 ಲಕ್ಷ ವೆಚ್ಚದಲ್ಲಿ ಪ್ಲಾಟ್‌ಫಾರಂ ಎತ್ತರಿಸುವ ಮೂಲಕ ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಂಪರ್ಕ ಕ್ರಾಂತಿ ರೈಲು ಬೆಂಗಳೂರಿನಿಂದ ದೆಹಲಿಗೆ ಸಂಪರ್ಕ ಕಲ್ಪಿಸುತ್ತದೆ. ಇದು ವೇಗದಲ್ಲಿ ತಲುಪುವ ರೈಲಾಗಿದ್ದು, ಸಮಯದ ಮಿತಿ ಕಡಿಮೆ ಇದೆ. ಈ ನಿಟ್ಟಿನಲ್ಲಿ ನಿಲುಗಡೆ ನೀಡುವುದು ಕಷ್ಟಸಾಧ್ಯ. ಇದಕ್ಕಾಗಿ   ಹುಬ್ಬಳ್ಳಿ ಮತ್ತು ದಾವಣಗೆರೆಯಲ್ಲಿ ಈ ರೈಲಿಗೆ ನಿಲುಗಡೆ ನೀಡಲಾಗಿದೆ. ಅಲ್ಲದೇ ಈ ರೈಲು ನಿಲುಗಡೆಯು ಆರ್ಥಿಕವಾಗಿಯೂ ಸಮರ್ಥನೀಯವಾಗಿಲ್ಲ. ಈ ರೈಲಿನ ಬಗ್ಗೆ ಸಚಿವಾಲಯವೇ ಉಸ್ತುವಾರಿ ವಹಿಸುತ್ತದೆ ಎಂದು ತಿಳಿಸಿದ್ದಾರೆ.

ಹಾವೇರಿಯ ರೈಲು ನಿಲ್ದಾಣದ ಮುಂದೆ ಅನಿಯಂತ್ರಿತ ಆಟೊ ನಿಲುಗಡೆಯಿದ್ದು, ಪೂರ್ವಪಾವತಿ ಆಟೊ ವ್ಯವಸ್ಥೆ ಕಲ್ಪಿಸಬೇಕು ಎಂಬ ಕೋರಿಶೆಟ್ಟರ್‌ ಅವರ ಬೇಡಿಕೆಗೆ ಪ್ರತಿಕ್ರಿಯಿಸಿರುವ ಅನಿಲ್‌ ಕುಮಾರ್‌, ‘ಪೂರ್ವಪಾವತಿ ಆಟೊ ವ್ಯವಸ್ಥೆ ಒದಗಿಸುವ ಬಗ್ಗೆ ಜಿಲ್ಲಾ ಪೊಲೀಸರು ಕ್ರಮ ಕೈಗೊಳ್ಳಬೇಕಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಬೇಡಿಕೆ ಸಲ್ಲಿಸಲಾಗುವುದು. ಆದರೆ ಈ ವಿಚಾರವು ಅವರ ಸುಪರ್ದಿಗೆ ಒಳಪಟ್ಟಿದೆ’ ಎಂದು ತಿಳಿಸಿದ್ದಾರೆ.

ಸಂಸದರು, ಎಸ್ಪಿಗೆ ಆಗ್ರಹ
‘ಸಂಪರ್ಕ ಕ್ರಾಂತಿ ನಿಲುಗಡೆಯು ರೈಲು ಸಚಿವಾಲಯಕ್ಕೆ ಸಂಬಂಧಿಸಿದ ವಿಚಾರ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲು ಸಚಿವ ಡಿ.ವಿ. ಸದಾನಂದ ಗೌಡ ಹಾಗೂ ಸಂಸದ ಶಿವಕುಮಾರ್‌ ಉದಾಸಿ ಒಂದೇ ಪಕ್ಷ ಹಾಗೂ ನಮ್ಮದೇ ರಾಜ್ಯದವರು. ಈ ನಿಟ್ಟಿನಲ್ಲಿ ಸಂಸದರು ಸ್ವತಃ ಮುತುವರ್ಜಿ ಸಚಿವರಿಗೆ ಮನವಿ ಮಾಡಿ  ಕ್ರಮ ಕೈಗೊಳ್ಳಬೇಕು. ಅಲ್ಲದೇ ರೈಲು ನಿಲ್ದಾಣ ಮುಂಭಾಗದ ಪೂರ್ವ ಪಾವತಿ (ಪ್ರಿಪೇಯ್ಡ್‌ ) ಆಟೊ ನಿಲ್ದಾಣ ಆರಂಭಿಸಲು ಸಂಸದರು, ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೂಡಲೇ ಕ್ರಮ ಕೈಗೊಳ್ಳಬೇಕು
–ಎಂ.ಎಸ್‌.ಕೋರಿಶೆಟ್ಟರ್‌, ಅಧ್ಯಕ್ಷರು, ಹಾವೇರಿ ನಾಗರಿಕರ ವೇದಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.