ADVERTISEMENT

21ನೇ ಶತಮಾನದಲ್ಲೂ ತೊಲಗದ ಮೌಢ್ಯ

ತಾಲ್ಲೂಕುಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಬಿ.ಟಿ.ಲಲಿತಾನಾಯಕ ವಿಷಾದ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 5:21 IST
Last Updated 28 ಡಿಸೆಂಬರ್ 2016, 5:21 IST
ಬ್ಯಾಡಗಿಯಲ್ಲಿ ಮಂಗಳವಾರ ನಡೆದ 3ನೇ ತಾಲ್ಲೂಕಾ ಕನ್ನಡ ಸಾಹಿತ್ಯ ಸಮ್ಮೇಳನವನ ಸಾಹಿತಿ ಬಿ.ಟಿ.ಲಲಿತಾ ನಾಯಕ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷೆ ಸಂಕಮ್ಮ ಸಂಕಣ್ಣನವರ, ನಿವೃತ್ತ ಪ್ರಾಚಾರ್ಯ ಎಸ್‌.ಬಿ.ತವರದ, ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎಸ್‌.ಆರ್‌.ಪಾಟೀಲ ಇದ್ದರು
ಬ್ಯಾಡಗಿಯಲ್ಲಿ ಮಂಗಳವಾರ ನಡೆದ 3ನೇ ತಾಲ್ಲೂಕಾ ಕನ್ನಡ ಸಾಹಿತ್ಯ ಸಮ್ಮೇಳನವನ ಸಾಹಿತಿ ಬಿ.ಟಿ.ಲಲಿತಾ ನಾಯಕ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷೆ ಸಂಕಮ್ಮ ಸಂಕಣ್ಣನವರ, ನಿವೃತ್ತ ಪ್ರಾಚಾರ್ಯ ಎಸ್‌.ಬಿ.ತವರದ, ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎಸ್‌.ಆರ್‌.ಪಾಟೀಲ ಇದ್ದರು   

ಬ್ಯಾಡಗಿ(ಸಂತ ಕನಕದಾಸ ಮಹಾ ಮಂಟಪ): ‘ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಗಟ್ಟಿಯಾಗಿ ನಿಂತಿರುವ ಅಂಧಕಾರ, ಮೌಢ್ಯದಂಥ ಆಚರಣೆಗಳು ಸಮಾಜವನ್ನು ಹಾಳು ಮಾಡಿವೆ. ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ಹೊಡೆದು ಹಾಕಲು 21ನೇ ಶತಮಾನದಲ್ಲಿಯೂ ಸಾಧ್ಯವಾಗದಿರುವುದು ಒಂದು ದುರಂತ’ ಎಂದು ಸಾಹಿತಿ ಬಿ.ಟಿ.ಲಲಿತಾ ನಾಯಕ ವಿಷಾದಿಸಿದರು.

ಪಟ್ಟಣದ ವರ್ತಕರ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ‘ಸಮಾಜದಲ್ಲಿ ಹೆಣ್ಣನ್ನು ಕೀಳು ಭಾವನೆಯಿಂದ ಕಾಣುವುದು ಇನ್ನೂ ಜೀವಂತ ಉಳಿದಿರುವುದು ಅಭಿವೃದ್ಧಿಗೆ ಕಂಟಕವಾಗಿದೆ’ ಎಂದರು.

ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಎಸ್‌.ಬಿ.ತವರದ ಮಾತನಾಡಿ, ‘ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಕೆಲಸ ಮಾಡಬೇಕಾಗಿದೆ. ಅದನ್ನು ಬಿಟ್ಟು ನಾವೇ ಅವರ ಭಾಷೆಯಲ್ಲಿ ಮಾತನಾಡಿದರೆ ಅನ್ಯ ಭಾಷಿಕರು ಕನ್ನಡ ಕಲಿಯಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು. ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಂ.ಜಗಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮ್ಮೇಳನಾಧ್ಯಕ್ಷೆ ಸಂಕಮ್ಮ ಸಂಕಣ್ಣನವರ, ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಮಂಗಲಾ ಪಟ್ಟಣಶೆಟ್ಟಿ,ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸವಿತಾ ಸುತ್ತಕೋಟಿ, ಪುರಸಭೆ ಅಧ್ಯಕ್ಷ ಬಸವರಾಜ ಛತ್ರದ, ಉಪಾಧ್ಯಕ್ಷೆ ಸುಧಾ ಕಳ್ಳಿಹಾಳ, ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಮ್ಮ ಬೇವಿನಮಟ್ಟಿ, ಸದಸ್ಯರಾದ ಮುರಿಗೆಪ್ಪ ಶೆಟ್ಟರ, ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಬಿ.ಲಿಂಗಯ್ಯ, ಮಾಜಿ ಅಧ್ಯಕ್ಷ ಮಾಲತೇಶ ಅರಳಿಮಟ್ಟಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಡಿವೆಪ್ಪ ಕುರಿ, ನಿವೃತ್ತ ಅಭಿಯಂತರ ಸಿ.ಆರ್‌.ಬಳ್ಳಾರಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಶಿವಯೋಗಿ ಶಿರೂರ ಹಾಗೂ ಇನ್ನಿತರರು ಉಪಸ್ಥಿತ ರಿದ್ದರು.

ವಾಗ್ದೇವಿ ಸಂಗೀತ ಪಾಠ ಶಾಲೆಯ ಮಕ್ಕಳು ನಾಡ ಗೀತೆ ಹಾಡಿದರು. ಶಾಸಕರ ಮಾದರಿ ಶಾಲೆಯ ಮಕ್ಕಳು ರೈತ ಗೀತೆ ಹಾಡಿದರು. ಪರಿಷತ್‌ ಕಾರ್ಯದರ್ಶಿ  ವೈ.ಟಿ.ಹೆಬ್ಬಳ್ಳಿ ಸ್ವಾಗತಿಸಿದರು. ಸಂಧ್ಯಾರಣಿ ದೇಶಪಾಂಡೆ ನಿರೂಪಿಸಿದರು. ಎಂ.ಮಲ್ಲಪ್ಪ ವಂದಿಸಿದರು.

ಮುಂಜಾನೆ ತಹಶೀಲ್ದಾರ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಬಳಿಕ ನೆಹರೂ ನಗರದ ದಾನಮ್ಮದೇವಿ ದೇವಸ್ಥಾನದ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಝಡ್‌.ಎಂ. ಖಾಜಿ ಮೆರವಣೆಗೆಗೆ ಚಾಲನೆ ನೀಡಿದರು. ಬಳಿಕ ಸಮ್ಮೇಳನಾಧ್ಯಕ್ಷೆ ಸಂಕಮ್ಮ ಸಂಕಣ್ಣನವರ ಅವರನ್ನು ಮೆರವಣೆಗೆಯ ಮೂಲಕ ವೇದಿಕೆಗೆ ಕರೆತರಲಾಯಿತು.

ಎಬಿವಿಪಿ ಪ್ರತಿಭಟನೆ: ‘ಸಾಹಿತ್ಯ ಸಮ್ಮೇಳನಕ್ಕೆ ಎಬಿವಿಪಿ ಸಂಘಟನೆಗೆ ಆಹ್ವಾನ ನೀಡಿಲ್ಲ’ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ಸಭಾಂಗಣದ ಹೊರಗೆ ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ಬಳಿಕ ಪರಿಷತ್‌ ಸದಸ್ಯರು ಅಧಿಕೃತವಾಗಿ ಆಮಂತ್ರಣ ನೀಡಿ, ಮನವೊಲಿಸುವಲ್ಲಿ ಯಶಸ್ವಿ ಯಾದರು.
ನಂತರ ಪ್ರತಿಭಟನೆ ಕೈಬಿಟ್ಟು, ಸಮಾರಂಭದಲ್ಲಿ ಪಾಲ್ಗೊಂಡರು.

*
ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ಗೌರವ ನೀಡಿದರೇ ಅದು ನಮ್ಮನ್ನು ನಾವೇ ಗೌರವಿಸಿಕೊಂಡಂತೆ. ಅದು ಆಗಬೇಕಿದೆ.
-ಬಸವರಾಜ ಶಿವಣ್ಣನವರ,
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT