ADVERTISEMENT

9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಇಂದು

ಅಕ್ಷರ ಹಬ್ಬಕ್ಕೆ ಸ್ವಾಗತ ಕೋರಲು ಸಜ್ಜಾಗಿರುವ ವಿವಿಧ ಮಹಾಪುರುಷರ ಹೆಸರಿನ ಮಹಾದ್ವಾರಗಳು

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 6:19 IST
Last Updated 19 ಜನವರಿ 2017, 6:19 IST
ಶಿಗ್ಗಾವಿ ಪಟ್ಟಣದಲ್ಲಿ ನಡೆಯಲಿರುವ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳದ ಅಂಗವಾಗಿ ಅಲಂಕೃತಗೊಂಡ ಕನ್ನಡಧ್ವಜಗಳು ರಾರಾಜಿಸುತ್ತಿವೆ.
ಶಿಗ್ಗಾವಿ ಪಟ್ಟಣದಲ್ಲಿ ನಡೆಯಲಿರುವ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳದ ಅಂಗವಾಗಿ ಅಲಂಕೃತಗೊಂಡ ಕನ್ನಡಧ್ವಜಗಳು ರಾರಾಜಿಸುತ್ತಿವೆ.   

ಶಿಗ್ಗಾವಿ: ದಾಸರು, ಶರಣರ ಪುಣ್ಯ ಭೂಮಿಯ ನೆಲೆವೀಡು ಎಂದೇ ಬಣ್ಣಿಸಿಕೊಂಡ ಶಿಗ್ಗಾವಿ ತಾಲ್ಲೂಕಿನಲ್ಲಿ ಇದೇ 19 ಮತ್ತು 20ರಂದು ನಡೆಯುವ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಅತಿಥಿಗಳನ್ನು ಹಾಗೂ ಕನ್ನಡಾಭಿಮಾನಿಗಳನ್ನು ಅದ್ಧೂರಿಯಾಗಿ ಸ್ವಾಗತಿಸಲು ಪಟ್ಟಣ ಸಜ್ಜಾಗಿದೆ.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಹಾಕಿರುವ ಭವ್ಯ ವೇದಿಕೆಯಲ್ಲಿ ಸುಮಾರು 50 ಜನ ಗಣ್ಯರು ಕುಳಿತು ಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ಸುಮಾರು ಐದು ಸಾವಿರಕ್ಕೂ ಹೆಚ್ಚಿನ ಜನರು ಕುಳಿತುಕೊಂಡು ಸಮಾರಂಭ ವೀಕ್ಷಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರೇಕ್ಷಕರು ದಿನವಿಡೀ ಕುಳಿತು ನೋಡಲು ಆಯಾಸವಾಗದಂತೆ ಗಾಳಿ, ಬೆಳಕು ಬರುವಂತೆ ವೇದಿಕೆಯನ್ನು ಸಜ್ಜುಗೊಳಿಸ ಲಾಗಿದೆ. ವೇದಿಕೆ ಸುತ್ತಲೂ ಕನ್ನಡದ ಧ್ವಜಗಳು, ಸಮ್ಮೇಳನದ ಲಾಂಛನಗಳ ಚಿತ್ರಗಳನ್ನು ಹಾಕುವ ಮೂಲಕ ಆಕರ್ಷಕ ವೇದಿಕೆ ನಿರ್ಮಾಣವಾಗಿದೆ.

ಹಾವೇರಿಯಿಂದ ಬರುವ ಪ್ರವಾಸಿ ಮಂದಿರದ ಹತ್ತಿರ ಕನಕದಾಸರ ಮಹಾದ್ವಾರ, ಹುಬ್ಬಳಿಯಿಂದ ಬರುವ ಎಪಿಎಂಸಿ ಆವರಣ ಮುಂದೆ ಅರಟಾಳದ ರುದ್ರಗೌಡ್ರ ಮಹಾದ್ವಾರ, ಹುಲಗೂರಿನಿಂದ ಬರುವ ದಾರಿಯಲ್ಲಿ ಶಿಶುವಿನಾಳದ ಶರೀಫರ ಮಹಾದ್ವಾರ, ವೇದಿಕೆ ಮುಂದೆ ಹಿರೇಮಲ್ಲೂರು ಈಶ್ವರನ್‌ ಒಂದು ಬೃಹತ್‌  ಮಹಾದ್ವಾರ, ಸವಣೂರ ರಸ್ತೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಕೃ.ಗೋಕಾಕ ಮಹಾದ್ವಾರ ಸೇರಿದಂತೆ ಸುಮಾರು 5  ಮಹಾದ್ವಾರ ನಿರ್ಮಾಣ ಮಾಡಲಾಗಿದೆ.

ಅಲ್ಲದೇ ವೇದಿಕೆ ಸಮೀಪದಲ್ಲಿ ಆರೋಗ್ಯ ಸಮಿತಿಯಿಂದ ಆರೋಗ್ಯ ಕೇಂದ್ರ ತೆರೆಯಲಾಗಿದೆ. ಎರಡು ದಿನದ ಊಟಕ್ಕೆ ಮಧ್ಯಾಹ್ನ ರೊಟ್ಟಿ, ಚಪಾತಿ, ಕಾಳು, ಕಾಯಿಪಲ್ಯ, ಮೆಣಸಿನಕಾಯಿ ಚಟ್ನಿ, ಅನ್ನ ಸಾರಿನೊಂದಿಗೆ ಗೋದಿಧಿ ಹುಗ್ಗಿಯ ಭೋಜನ ಇರುತ್ತದೆ.

20ರಂದು ಮಧ್ಯಾಹ್ನ ರೊಟ್ಟಿ, ಚಪಾತಿ, ಕಾಳು, ಕಾಯಿಪಲ್ಯ, ಮೆಣಸಿನಕಾಯಿ ಚಟ್ನಿ, ಅನ್ನ ಸಾರಿನೊಂದಿಗೆ ಬೆಲ್ಲದ ಉಂಡೆಯನ್ನು ಕೊಡಲಾಗುವುದು. ಎರಡು ದಿನ ಬೆಳಿಗ್ಗೆ ಉಪ್ಪಿಟ್ಟು ಚಹಾ, ರಾತ್ರಿ ವೇಳೆ ಪುಲಾವ್ ಅಥವಾ ಚಿತ್ರಾನ್ನ ಅಥವಾ ಬಿಸಿಬೇಳೆ ಭಾತ್ ನೀಡುವ ವ್ಯವಸ್ಥೆ ಕಲ್ಪಿಸಿದೆ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಪ್ರೊ.ನಾಗ ರಾಜ ದ್ಯಾಮನಕೊಪ್ಪ ಹೇಳಿದರು.

ಪಟ್ಟಣದ ಕ್ರೀಡಾಂಗಣದಿಂದ ಆರಂಭವಾಗುವ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ಸಕಲ ವಾದ್ಯ ವೈಭವದೊಂದಿಗೆ ಸಾಗಲಿದೆ. ದಾರಿಯಲ್ಲಿ ಪ್ರತಿಯೊಂದು ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಹಾಕಲಾಗಿದೆ. ಬಾಳೆ ಮತ್ತು ಮಾವಿನ ತಳಿರುತೋರಣಗಳನ್ನು ಹಾಕಲಾಗಿದೆ. ಪ್ರತಿಯೊಂದು ಕಂಬಗಳಿಗೆ ಕನ್ನಡ ಧ್ವಜಗಳನ್ನು ಕಟ್ಟುವ ಮೂಲಕ ಪಟ್ಟಣದ ರಸ್ತೆಗಳನ್ನು ಅಂದವಾಗಿ ಶೃಂಗರಿಸಲಾಗಿದೆ.

ಜನರಿಗೆ ಯಾವುದೇ ತೊಂದರೆ ಆಗದಂತೆ ವೇದಿಕೆ ಹತ್ತಿರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದೆ. ದೂರದಿಂದ ಬರುವ ಜನರಿಗೆ ವಸತಿ ವ್ಯವಸ್ಥೆ ಮಾಡಿದೆ. ಪುಸ್ತಕ ಮಳಿಗೆ ನಿರ್ಮಿಸಲಾಗಿದೆ. ಸುಮಾರು ವಿವಿಧ ಸ್ವಯಂಸೇವಕರ 20 ಸಮಿತಿಗಳನ್ನು ರಚಿಸುವ ಮೂಲಕ ಆಯಾ ಸಮಿತಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಒಟ್ಟಾರೆ ರಾಜ್ಯ ಮಟ್ಟದ ಸಮ್ಮೇಳನದ ಮಾದರಿಯಲ್ಲಿ ವ್ಯವಸ್ಥೆ ಮಾಡುವುದರ ಜೊತೆಗೆ ಇದೊಂದು ಐತಿಹಾಸಿಕ ಹಾಗೂ ಅವಿಸ್ಮರಣೀಯ ಸಮ್ಮೇಳನವಾಗಲಿದೆ ಎಂದು ನೇತೃತ್ವ ವಹಿಸಿರುವ ಶಾಸಕ ಬಸವರಾಜ ಬೊಮ್ಮಾಯಿ ಹೇಳುತ್ತಾರೆ.
–ಎಂ.ವಿ. ಗಾಡದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.