ADVERTISEMENT

ಅಂತರ್ಜಲ ಹೆಚ್ಚಳಕ್ಕೆ ಶಾಶ್ವತ ಕ್ರಮ

ಸಣ್ಣ ನೀರಾವರಿ, ಕಾನೂನು ಸಚಿವ ಟಿ.ಬಿ.ಜಯಚಂದ್ರ ಭರವಸೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 5:59 IST
Last Updated 17 ಜನವರಿ 2017, 5:59 IST
ಅಂತರ್ಜಲ ಹೆಚ್ಚಳಕ್ಕೆ ಶಾಶ್ವತ ಕ್ರಮ
ಅಂತರ್ಜಲ ಹೆಚ್ಚಳಕ್ಕೆ ಶಾಶ್ವತ ಕ್ರಮ   

ಆಳಂದ: ಪ್ರಸಕ್ತ ವರ್ಷ ರಾಜ್ಯದ 160 ತಾಲ್ಲೂಕುಗಳಲ್ಲಿ ಬರ ಆವರಿಸಿದೆ. ಹೀಗಾಗಿ ನೀರಿನ ಸಮಸ್ಯೆ ನಿವಾರಿಸಲು ಮತ್ತು ಅಂತರ್ಜಲ ಹೆಚ್ಚಿಸಲು ಮುಂದಿನ ಬಜೆಟ್‌ನಲ್ಲಿ ಹೆಚ್ಚು ಹಣ ನೀಡುವ ಮೂಲಕ ಶಾಶ್ವತ ಪರಿಹಾರ ಕಂಡು ಕೊಳ್ಳಲು ಹೊಸ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಸಣ್ಣ ನೀರಾವರಿ ಮತ್ತು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ತಾಲ್ಲೂಕಿನ ಚಿಂಚೋಳಿ (ಬಿ), ಸರಸಂಬಾ ಗ್ರಾಮದ ನೀರು ಸಂಗ್ರಹ ಕಾರ್ಯದ ಕಾಮಗಾರಿ ವೀಕ್ಷಣೆ ನಂತರ ಪಟ್ಟಣದ ಗುರುಭವನದಲ್ಲಿ ಸೋಮವಾರ ಸಣ್ಣ ನೀರಾವರಿ ಇಲಾಖೆಯಿಂದ ಅಹವಾಲು ಸ್ವೀಕಾರಿಸಿ ಅವರು ಮಾತನಾಡಿದರು.

ಅಂತರ್ಜಲದ ಮಟ್ಟದ ಹೆಚ್ಚಾದರೆ ಅದನ್ನು ಬೇಕಾದಾಗ ಬಳಕೆ ಮಾಡಿಕೊಳ್ಳಬಹುದು. ಹೀಗಾಗಿ ‘ನಮ್ಮ ಜಮೀನು–ನಮ್ಮ ಕೆರೆ’ ಯೋಜನೆ ಅಡಿ ಹರಿಯುವ ನೀರನ್ನು ತಡೆದು ಅದನ್ನು ಇಂಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆಳಂದ ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರಣಿ ಚೆಕ್‌್ ಡ್ಯಾಂ, ಸಣ್ಣ ಕೆರೆ ಮತ್ತು ಶಿರಪುರ ಮಾದರಿಯಲ್ಲಿ ಜಲ ಸಂಗ್ರಹಕ್ಕಾಗಿ ಶಾಸಕ ಬಿ.ಆರ್.ಪಾಟೀಲ ಅವರು ಕೈಗೊಂಡ ಪ್ರಯತ್ನಕ್ಕೆ ರಾಜ್ಯ ಸರ್ಕಾರವು ಹೆಚ್ಚಿನ ನೆರವು ನೀಡಲಿದೆ. ಈ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಬಿ.ಆರ್.ಪಾಟೀಲ ಮಾತ ನಾಡಿ, ‘ಕಳೆದ ವರ್ಷ ತಾಲ್ಲೂಕಿನ 138 ಹಳ್ಳಿಗಳಿಗೆ ಟ್ಯಾಂಕರ್ ನೀರು ಪೂರೈಸಲು ₹ 13.65 ಕೋಟಿ ಹಣ ಖರ್ಚು ಮಾಡಲಾಗಿದೆ. ಇಲ್ಲಿನ ರೈತರು ನೀರಿನ ಬರದಿಂದ ಪಾರಾಗಲು ಅಮರ್ಜಾ ಅಣೆಕಟ್ಟೆಗೆ ಭೀಮಾ ನದಿಯಿಂದ ನೀರು ತುಂಬಿಸಲು ಮತ್ತು ಹೆಚ್ಚಿನ ಕೆರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನೀರಿನ ಸಮಸ್ಯೆ ನಿವಾರಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಸಭೆ, ರಾಜ್ಯಸಭೆ ಚುನಾವಣೆಯಲ್ಲಿ ನೀಡಿದ್ದ ಭರವ ಸೆಗಳನ್ನು ಈಡೇರಿಸಿಲ್ಲ.

ಈ ಸಂಬಂಧ ಪಾದಯಾತ್ರೆ, ಹೋರಾಟ ಕೈಗೊಂಡು ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಈ ಭಾಗದ ರೈತರ ನೀರಿನ ಸಮಸ್ಯೆ ಪರಿಹರಿಸಲು ಕೆರೆ ನಿರ್ಮಾಣ ಒಂದೇ ಪರಿಹಾರ ಎಂದರು.

ತಹಶಿಲ್ದಾರ್ ಬಸವರಾಜ ಬೆಣ್ಣೆಶಿರೂರು, ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದರಾಮ ಪ್ಯಾಟಿ, ಪುರಸಭೆ ಮಾಜಿ ಅಧ್ಯಕ್ಷ ವಿಠಲರಾವ ಪಾಟೀಲ, ಮುಖಂಡರಾದ ಶಿವಪುತ್ರಪ್ಪ ಪಾಟೀಲ, ಎಲ್.ಎಸ್.ರಾಠೋಡ, ಬಸವರಾಜ ಪಾಟೀಲ ಗೋಳಾ, ಪಂಡಿತ ಶೇರಿಕಾರ, ಸಲಾಂ ಸಗರಿ, ಅಹ್ಮದಲಿ ಚುಲಬುಲ್, ಭೀಮಾಶಂಕರ ಪಾಟೀಲ, ಬಿ.ಕೆ.ಪಾಟೀಲ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.