ADVERTISEMENT

ಅನುದಾನ ನಿರೀಕ್ಷೆಯಲ್ಲಿ ರಂಗಮಂದಿರ

ಸತೀಶ ಬಿ.
Published 22 ಮೇ 2017, 5:46 IST
Last Updated 22 ಮೇ 2017, 5:46 IST
ಅನುದಾನ ನಿರೀಕ್ಷೆಯಲ್ಲಿ ರಂಗಮಂದಿರ
ಅನುದಾನ ನಿರೀಕ್ಷೆಯಲ್ಲಿ ರಂಗಮಂದಿರ   

ಕಲಬುರ್ಗಿ: ನಗರದ ಕನ್ನಡ ಭವನದ ಆವರಣದಲ್ಲಿರುವ ಬಾಪುಗೌಡ ದರ್ಶನಾಪುರ ರಂಗಮಂದಿರ ಅನುದಾನದ ಕೊರತೆ ಯಿಂದಾಗಿ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.ರಂಗಮಂದಿರದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿ ಅನುಕೂಲ ಮಾಡಿಕೊಡಬೇಕು ಎಂಬುದು ಸಾಹಿತ್ಯಾಸಕ್ತರು, ಕಲಾವಿದರ ಒತ್ತಾಯವಾಗಿದೆ.

‘1987ರಲ್ಲಿ ಇಲ್ಲಿ ನಡೆದಿದ್ದ 58ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಳಿದ ಹಣದಲ್ಲಿ ರಂಗ ಮಂದಿರ ನಿರ್ಮಾಣವಾಗಿದೆ. ಅಲ್ಲದೆ, ಆಗ ಸಚಿವರಾಗಿದ್ದ ಬಾಪುಗೌಡ ದರ್ಶನಾಪುರ ಅವರು 1 ಎಕರೆ 2 ಗುಂಟೆ ಜಾಗ ಕೊಡಿಸಿದ್ದರು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರ ಸಿಂಪಿ ತಿಳಿಸಿದರು.

‘1996ರಲ್ಲಿ ಪಿ.ಎಂ.ಮಣ್ಣೂರ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ರಂಗಮಂದಿರ ನಿರ್ಮಾಣ ಕಾಮಗಾರಿ ಆರಂಭವಾಯಿತು. ನಂತರ ಅದು1999ರಲ್ಲಿ ಸ್ಥಗಿತ ವಾಯಿತು. 2004ರಲ್ಲಿ ನಾನು ಅಧ್ಯಕ್ಷನಾದ ಮೇಲೆ ಕಟ್ಟಡ ಕಾಮಗಾರಿಗೆ ಮತ್ತೆ ಚಾಲನೆ ನೀಡಿದೆ. ಈಗ ಅದು ಪೂರ್ಣಗೊಂಡಿದೆ. ಈವರೆಗೆ ₹2.36 ಕೋಟಿ ವೆಚ್ಚದ ಕಾಮಗಾರಿ ನಡೆದಿದೆ’ ಎಂದು ಸಿಂಪಿ ಹೇಳಿದರು.

ADVERTISEMENT

‘ಧ್ವನಿವರ್ಧಕ, ಬೆಳಕಿನ ವ್ಯವಸ್ಥೆ, ಪ್ರಸಾದನ ಕೊಠಡಿಗಳು ಸೇರಿದಂತೆ ಇನ್ನೂ ಹಲವು ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಅದಕ್ಕೆ ಇನ್ನೂ ₹1 ಕೋಟಿ ಅನುದಾನ ಅಗತ್ಯ ಇದೆ’ ಎಂದರು.

‘ಪರಿಷತ್ತಿನಿಂದಲೇ ಇದನ್ನು ನಿರ್ವಹಣೆ ಮಾಡಲಾಗುತ್ತಿದೆ. ಸ್ವಚ್ಛತೆ ಕಾಪಾಡಲು ಇಬ್ಬರು ಸಹಾಯಕರನ್ನು ನೇಮಕ ಮಾಡಲಾಗಿದೆ. ಅವರಿಗೆ ಮಾಸಿಕ ₹3,500 ನೀಡಲಾಗುತ್ತಿದೆ.  ಕಾರ್ಯಕ್ರಮಗಳನ್ನು ಆಧರಿಸಿ ₹3,500– 5,000 ವರೆಗೆ ಬಾಡಿಗೆ ಪಡೆಯಲಾಗುತ್ತದೆ. ವಾಣಿಜ್ಯ ಉದ್ದೇಶಕ್ಕಾಗಿ ಬಾಡಿಗೆ ನೀಡಿದಾಗ ಅದರಿಂದ ಹೆಚ್ಚು ಹಣ ಬರುತ್ತದೆ’ ಎಂದರು.

ಶೀಘ್ರ ವರದಿ ನೀಡಿ
ಪರಿಷತ್ತಿನಲ್ಲಿ ಅಗತ್ಯವಿರುವ ಸೌಲಭ್ಯ ಕಲ್ಪಿಸಲು ಯೋಜನಾ ವರದಿ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಅವರು ಪಿಡಬ್ಲ್ಯುಡಿ ಇಲಾಖೆಗೆ ಪತ್ರ ಬರೆದಿದ್ದಾರೆ. ಆದರೆ, ಅವರು ವರದಿ ನೀಡಲು ವಿಳಂಬ ಮಾಡುತ್ತಿದ್ದಾರೆ.

ಶೀಘ್ರ ವರದಿ ನೀಡಿದರೆ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಯಿಂದ ಅನುದಾನ ಬಿಡುಗಡೆಯಾಗುತ್ತದೆ. ಹೀಗಾಗಿ ಇಲಾಖೆಯಿಂದ ಆದಷ್ಟು ಬೇಗ ವರದಿ ನೀಡಬೇಕು ಎಂದು ಪರಿಷತ್ತಿನ ಸದಸ್ಯರೊಬ್ಬರು ಹೇಳಿದರು.

ಕಲಬುರ್ಗಿ ಕೇಂದ್ರ ಸ್ಥಾನ
‘ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಿಗೆ ಕಲಬುರ್ಗಿ ಕೇಂದ್ರ ಸ್ಥಾನವಾಗಿದ್ದು, ಪರಿಷತ್ತು ಇಲ್ಲಿ ಸ್ವಂತ ರಂಗಮಂದಿರ ಹೊಂದಿರುವುದು ಹೆಮ್ಮೆಯ ವಿಷಯವಾಗಿದೆ. ಲಭ್ಯವಿರುವ ಅನುದಾನದಲ್ಲಿ ರಂಗಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಅದಕ್ಕೆ ಸೌಲಭ್ಯ ಕಲ್ಪಿಸದಿದ್ದರೆ ಪ್ರಯೋಜನ ಇಲ್ಲದಂ­ತಾಗುತ್ತದೆ.

ಉತ್ತಮ ಧ್ವನಿ, ಬೆಳಕಿನ ವ್ಯವಸ್ಥೆ ಕಲ್ಪಿಸಿ­ದರೆ ಕಾರ್ಯಕ್ರಮಗಳನ್ನು ನಡೆಸಲು ಕಲಾವಿದರಿಗೆ  ಅನುಕೂಲವಾಗುತ್ತದೆ. ಜತೆಗೆ ಅವರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಅಲ್ಲದೆ, ಕಡಿಮೆ ದರದಲ್ಲಿ ಬಾಡಿಗೆ ನೀಡಬಹುದು’ ಎಂದು ಸಿಂಪಿ ಹೇಳಿದರು.

ರಂಗಮಂದಿರದ ಮಾಹಿತಿ
₹15  ಸಾವಿರ ಮಾಸಿಕ ನಿರ್ವಹಣೆಗೆ ತಗುಲುವ ವೆಚ್ಚ

* ಉದ್ಯಾನ ನಿರ್ಮಾಣ ರಂಗಮಂದಿರದ ಆವರಣದಲ್ಲಿ ಉದ್ಯಾನ ನಿರ್ಮಾಣ ಮಾಡುವ ಅಗತ್ಯ ಇದೆ

* 1,000 ರಂಗಮಂದಿರದ ಆಸನ ಸಾಮರ್ಥ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.