ADVERTISEMENT

ಅಮರನಾಥ ಪಾಟೀಲಗೆ ತಪ್ಪಿದ ಬಿಜೆಪಿ ಟಿಕೆಟ್‌

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 8:46 IST
Last Updated 17 ನವೆಂಬರ್ 2017, 8:46 IST
ಅಮರನಾಥ ಪಾಟೀಲ
ಅಮರನಾಥ ಪಾಟೀಲ   

ಕಲಬುರ್ಗಿ: ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್‌ ವಿಧಾನ ಪರಿಷತ್‌ ಸದಸ್ಯ ಅಮರನಾಥ ಪಾಟೀಲ ಅವರ ಕೈತಪ್ಪಿದೆ. ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷೆ ಬಿ.ಎಲ್‌. ರಾಣಿ ಸಂಯುಕ್ತಾ ಅವರ ಪತಿ, ಹೊಸಪೇಟೆಯ ಉದ್ಯಮಿ ಕೆ.ಬಿ. ಶ್ರೀನಿವಾಸ್‌ ರೆಡ್ಡಿ ಅವರಿಗೆ ಟಿಕೆಟ್‌ ನೀಡಲಾಗಿದೆ.

‘ಅಮರನಾಥ ಪಾಟೀಲ ಅವರು ತಮಗೇ ಟಿಕೆಟ್‌ ದೊರೆಯುತ್ತದೆ ಎಂಬ ಆತ್ಮವಿಶ್ವಾಸದಲ್ಲಿದ್ದರು. ಮತದಾರರ ನೋಂದಣಿಯಲ್ಲಿ ತೊಡಗಿಸಿಕೊಂಡಿದ್ದರು. ಅವರ ವಿರುದ್ಧ ಆರೋಪಗಳು ಇಲ್ಲ. ಆದರೂ, ಅವರಿಗೆ ಟಿಕೆಟ್‌ ಕೈತಪ್ಪಿದ್ದು ನಮಗೂ ಅಚ್ಚರಿ ತಂದಿದೆ’ ಎನ್ನುತ್ತಾರೆ ಪಕ್ಷದ ಸ್ಥಳೀಯ ಕಾರ್ಯಕರ್ತರು.

‘ಅಮರನಾಥ ಪಾಟೀಲ ಹಾಗೂ ಶ್ರೀನಿವಾಸ ರೆಡ್ಡಿ ಇಬ್ಬರೂ ಲಿಂಗಾಯತರು. ಬಳ್ಳಾರಿ ಭಾಗಕ್ಕೂ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಈ ಆಯ್ಕೆ ನಡೆದಿದೆ’ ಎನ್ನುವುದು ಪಕ್ಷದ ಮೂಲಗಳ ಮಾಹಿತಿ.

ADVERTISEMENT

ಕೆ.ಬಿ.ಶ್ರೀನಿವಾಸ ರೆಡ್ಡಿ ಅವರ ಹುಟ್ಟೂರು ಬಳ್ಳಾರಿ. ಎಂಜಿನಿಯರಿಂಗ್‌ ಸ್ನಾತಕೋತ್ತರ ಪದವೀಧರರು. ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಹೊಸಪೇಟೆಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 12 ವರ್ಷ ಉಪನ್ಯಾಸಕರಾಗಿದ್ದರು. ಸದ್ಯ ಹೊಸಪೇಟೆಯಲ್ಲಿ ನೆಲೆಸಿದ್ದಾರೆ.

ಗಣಿ ಸೇರಿದಂತೆ ಹಲವು ಉದ್ಯಮಗಳನ್ನು ನಡೆಸುತ್ತಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ ಎರಡು ಬಾರಿ ಸದಸ್ಯರಾಗಿದ್ದರು. ಈಗ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ.

‘ಎಬಿವಿಪಿ ಮತ್ತು ಸಂಘ ಪರಿವಾರದಲ್ಲಿ ನಾನು ಸಕ್ರಿಯನಾಗಿದ್ದೇನೆ. ಪಕ್ಷದ ವರಿಷ್ಠರ ನಿರ್ಧಾರ ಖುಷಿ ತಂದಿದೆ’ ಎಂದು ಶ್ರೀನಿವಾಸ ರೆಡ್ಡಿ ಪ್ರತಿಕ್ರಿಯಿಸಿದರು. ಕಲಬುರ್ಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆ ಹಾಗೂ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಒಳಗೊಂಡ ದೊಡ್ಡ ಕ್ಷೇತ್ರ ಇದಾಗಿದೆ. 2018ರ ಜೂನ್‌ ತಿಂಗಳಲ್ಲಿ ಚುನಾವಣೆ ನಡೆಯಲಿದೆ.

* * 

ಟಿಕೆಟ್‌ ಕೈತಪ್ಪಿದ್ದು ನಮ್ಮ ಕಾರ್ಯಕರ್ತರಿಗೂ ಬೇಸರ ತರಿಸಿದೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ವರಿಷ್ಠರ ನಿರ್ಧಾರಕ್ಕೆ ಬದ್ಧ.
ಅಮರನಾಥ ಪಾಟೀಲ,
ವಿಧಾನ ಪರಿಷತ್‌ ಸದಸ್ಯ


ಈಶಾನ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳ ಹಿಂದಿನ ಚುನಾವಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ. ಹೀಗಾಗಿ ನಾನು ಕ್ಷೇತ್ರಕ್ಕೆ ಹೊಸಬ ಅಲ್ಲ.
– ಕೆ.ಬಿ. ಶ್ರೀನಿವಾಸ್‌ ರೆಡ್ಡಿ,
ಬಿಜೆಪಿ ಘೋಷಿತ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.