ADVERTISEMENT

‘ಇನ್ನೊಂದು ತೊಗರಿ ಖರೀದಿ ಕೇಂದ್ರ ಸ್ಥಾಪಿಸಿ’

ಅಫಜಲಪುರ: ₹ 7,500 ಬೆಂಬಲ ಬೆಲೆ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 7:11 IST
Last Updated 16 ಜನವರಿ 2017, 7:11 IST
‘ಇನ್ನೊಂದು ತೊಗರಿ ಖರೀದಿ ಕೇಂದ್ರ ಸ್ಥಾಪಿಸಿ’
‘ಇನ್ನೊಂದು ತೊಗರಿ ಖರೀದಿ ಕೇಂದ್ರ ಸ್ಥಾಪಿಸಿ’   

ಅಫಜಲಪುರ: ಇಲ್ಲಿನ ಎಪಿಎಂಸಿ ಗೋದಾಮಿನಲ್ಲಿ ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿಯವರು ತೊಗರಿ ಖರೀದಿ ಕೇಂದ್ರ ಆರಂಭಿಸಿದ್ದು, ಒಂದೇ ಕೇಂದ್ರವಾಗಿದ್ದರಿಂದ ತೊಗರಿ ಖರೀದಿ ಮಾಡುವುದು ತೊಂದರೆ ಆಗುತ್ತಿದೆ. ಹೀಗಾಗಿ ಇನ್ನೊಂದು ತೊಗರಿ ಖರೀದಿ ಕೇಂದ್ರ ಆರಂಭಿಸಬೇಕೆಂದು  ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸೂರ್ಯ ಕಾಂತ ನಾಕೇದಾರ ಒತ್ತಾಯಿಸಿದ್ದಾರೆ.

ಈ ಬಾರಿ ತೊಗರಿ ಉತ್ತಮ ಇಳುವರಿ ಬಂದಿದ್ದು, ತೊಗರಿ ಬೆಲೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ತೊಗರಿ ಬೆಳೆಯಲು ರೈತರು ಮಾಡಿರುವ ಖರ್ಚು ದುಬಾರಿಯಾಗಿದೆ. ಈಗಿನ ಬೆಲೆಗೆ ಮಾರಿದರೆ ರೈತರಿಗೆ ಯಾವುದೇ ಲಾಭವಾಗುತ್ತಿಲ್ಲ ಸರ್ಕಾರ ₹ 7,500 ಬೆಂಬಲ ಬೆಲೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಪಕ್ಕದ ಸಿಂದಗಿ, ಇಂಡಿ ತಾಲ್ಲೂಕಿನಿಂದಲೂ ತೊಗರಿ ಖರೀದಿ ಕೇಂದ್ರಕ್ಕೆ ರೈತರು ತೊಗರಿ ಮಾರಲು ಬರುತ್ತಿದ್ದು, ಅದನ್ನು ತಡೆಯುವ ವ್ಯವಸ್ಥೆಯಾಗಬೇಕು. ತಕ್ಷಣ ತೊಗರಿ ಮಂಡಳಿಯವರು ಇನ್ನೊಂದು ತೊಗರಿ ಖರೀದಿ ಕೇಂದ್ರ ಆರಂಭಿಸಬೇಕು. ಈಗಿರುವ ತೊಗರಿ ಖರೀದಿ ಕೇಂದ್ರಕ್ಕೆ ಅಗತ್ಯ ಸಿಬ್ಬಂದಿಯನ್ನು ಒದಗಿಸಬೇಕೆಂದು ಅವರು ತಿಳಿಸಿದರು.

ತೊಗರಿ ಖರೀದಿ ಮಾಡಿದ ಮೇಲೆ ಮಂಡಳಿಯವರು ವಾರದಲ್ಲಿ ರೈತರಿಗೆ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಸರ್ಕಾರ ರೈತರ ಸಾಲ ಬ್ಯಾಂಕ್‌ನಲ್ಲಿದ್ದು, ತೊಗರಿ ಮಾರಿದ ಹಣವನ್ನು ಮುರಿದುಕೊಳ್ಳಬಾರದು ಇದರ ಬಗ್ಗೆ ಸೂಕ್ತ ನಿರ್ದೇಶನ ಬ್ಯಾಂಕ್‌ಗಳಿಗೆ ಸರ್ಕಾರ ನೀಡಬೇಕು. ಈಗಾಗಲೇ ಸಹಕಾರಿ ಸಂಘದಲ್ಲಿ ರೈತರಿಗೆ ಬೆಳೆವಿಮೆ ಮಂಜೂರಾಗಿದ್ದು, ಸಾಲದಲ್ಲಿ ಮುರಿದುಕೊಳ್ಳದೇ ನೇರವಾಗಿ ಬೆಳೆವಿಮೆ ಹಣ ರೈತರಿಗೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಬೆಳೆ ಪರಿಹಾರ ನೀಡಿ:  ತಾಲ್ಲೂಕಿನಲ್ಲಿ ಪ್ರಸ್ತುತ ವರ್ಷ ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆಹಾನಿಯಾಗಿದ್ದು, ರೈತರಿಗೆ ಪರಿಹಾರ ನೀಡಬೇಕು. ಈಗಾಗಲೇ ಕೇಂದ್ರ ಸರ್ಕಾರ 2 ಕಂತುಗಳಲ್ಲಿ ಒಟ್ಟು ₹ 3,302 ಕೋಟಿ ಪರಿಹಾರ ನೀಡಿದೆ. ಎಕರೆಗೆ ಕನಿಷ್ಟ ₹ 10 ಸಾವಿರ ಬೆಳೆ ಪರಿಹಾರ ನೀಡಬೇಕು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.